ಚುನಾವಣಾ ಕುರುಕ್ಷೇತ್ರ 2018- ವರುಣಾ (ಮೈಸೂರು ಜಿಲ್ಲೆ)

  ವರುಣಾ ವಿಧಾನಸಭಾ ಕ್ಷೇತ್ರ

ad


ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಇಡೀ ರಾಜ್ಯದ ಗಮನ ಸೆಳೆದಿರೋ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣಾ ವಿಧಾನಸಭಾ ಕ್ಷೇತ್ರದ ಬಗ್ಗೆ. ಈ ಬಾರಿ ಮತ್ತೆ ಸಿಎಂ ಸಿದ್ದು ಇಲ್ಲಿಂದ ಕಣಕ್ಕಿಳಿತಾರಾ? ಕ್ಷೇತ್ರದ ಸ್ತಿತಿ ಗತಿ ಏನು ಅನ್ನೋದ್ರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

 

ವರುಣಾ ವಿಧಾನಸಭಾ ಕ್ಷೇತ್ರ. ಮೈಸೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು ಈ ವರುಣಾ ವಿಧಾನಸಭಾ ಕ್ಷೇತ್ರ. ಇದರ  ಚಿತ್ರಣವೇ ವಿಭಿನ್ನ. ಇದೊಂಥರಾ ತ್ರಿವೇಣಿ ಸಂಗಮದ ಕ್ಷೇತ್ರವಿದ್ದಂತೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಸೃಷ್ಟಿಯಾದ ಕ್ಷೇತ್ರವಿದು. ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರದ ಸ್ವಲ್ಪ ಭಾಗಗಳನ್ನು ಕಿತ್ತುಕೊಂಡು ವರುಣಾ ಕ್ಷೇತ್ರ ಸೃಷ್ಟಿಯಾಗಿದೆ. ನಾಡಿನ ದೊರೆ  ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಕ್ಷೇತ್ರದ ಹಾಲಿ ಶಾಸಕರು. ಸಿದ್ದರಾಮಯ್ಯನವರ ಪಾಲಿಗೆ ಇದೊಂದು ಅದೃಷ್ಟದ ಕ್ಷೇತ್ರ. ಇವ್ರಿಗೇ ಹೇಳಿ ಮಾಡಿಸಿದ ಕ್ಷೇತ್ರವೇನೋ ಎಂಬಂತಿದೆ. 2008ರಲ್ಲಿ ಪ್ರಥಮ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಾಗ ಪ್ರತಿಪಕ್ಷ ನಾಯಕರಾದರು. 2013ರಲ್ಲಿ ಇಲ್ಲಿಂದಲೇ ಸ್ಪರ್ಧಿಸಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗದ್ದುಗೆ ಏರಿದರು.ಹಾಗಾಗಿ ಅವ್ರ ಅದೃಷ್ಟದ ಕ್ಷೇತ್ರ ಕೂಡಾ ಹೌದು. ಇನ್ನು ತಮ್ಮ ಸ್ವಂತ ಊರು ಸಿದ್ದರಾಮನ ಹುಂಡಿ ಗ್ರಾಮವೂ ಸೇರಿಕೊಂಡಂತೆ ಸ್ಥಳಿಯರೇ ಹೆಚ್ಚು ಇದ್ದ ಕಾರಣಕ್ಕೆ ಅವರ ಗೆಲುವು ಸುಲಭವಾಗುತ್ತಾ ಬಂದಿದೆ. ಸಿದ್ದರಾಮಯ್ಯ ಅವರು 6 ಮತ್ತು 7ನೇ ಬಾರಿಗೆ ಚುನಾಯಿತರಾಗಿರೋದು ಇದೇ ವರುಣ ಕ್ಷೇತ್ರದಿಂಲೇ. ಆದ್ರೆ ಈ ಬಾರಿ ಸಿದ್ದು ಚಾಮುಂಡೇಶ್ವರಿ ಕ್ಷೇತ್ರದಂದ ಸ್ಪರ್ಧಿಸ್ತೀನಿ ಅಂದಿರೋದ್ರಿಂದ ಈ ಕ್ಷೇತ್ರದಲ್ಲಿ ಮತ್ತಷ್ಯು ಕುತೂಹಲ ಜಾಸ್ತಿ ಆಗಿದೆ. ಹಾಗಿದ್ರೆ ಇಲ್ಲಿನ ಮತ್ತಷ್ಟು ರಾಜಕೀಯ ವಿಚಾರಗಳನ್ನು ಹರೇಳೋದಕ್ಕೂ ಮೊದಲು 2013ರ ಮತಬರಹ ಏನು ನೋಡೋಣ ಬನ್ನಿ

 

2013ರ ಮತಬರಹ

ಇದು 2013ರ ಮತಬರಹ. ಕಳೆದ ಬಾರಿ ಸಿಎಂ ಸಿದ್ಧರಾಮಯ್ಯನವರು ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಭ್ಯರ್ಥಿಯಾಗಿ ಕಣಕ್ಕಿಳಿದ್ರು ಅಷ್ಟೇ ಅಲ್ಲ 84385 ಮತಗಳನ್ನು ಪಡೆಯೋ ಮೂಲಕ ಗೆದ್ದು ರಾಜ್ಯದ ಮುಖ್ಯಮಂತ್ರಿ ಕೂಡಾ ಆದ್ರು. ಇನ್ನು ಅವ್ರಿಗೆ ತೀವ್ರ ಪೈಪೋಟಿ ನೀಡಿದ ಕೆಜೆಪಿಯಿಂದ ಕಣಕ್ಕಿಳಿದಿದ್ದ ಕಾಪು ಸಿದ್ದಲಿಂಗ ಸ್ವಾಮಿ ಅವ್ರು 54734 ಮತಗಳನ್ನಷ್ಟೇ ಪಡೆದ್ರು

 

 

ಅಂದ್ಹಾಗೆ ವರುಣಾ ವಿಧಾನಸಭಾ ಕ್ಷೇತ್ರ ಸಿದ್ದರಾಮಯ್ಯನವರ ಅದೃಷ್ಟದ ಕ್ಷೇತ್ರ. ಆದ್ರೆ ಈ ಬಾರಿ ಅಂದ್ರೆ 2018ರ ಚುನಾವಣೆ ಅಂತ ಬಂದಾಗ  ವರುಣಾ ಕ್ಷೇತ್ರವನ್ನು ಬಿಟ್ಟು ತಮಗೆ ರಾಜಕೀಯ ಭವಿಷ್ಯವನ್ನು ನೀಡಿದ ತವರು ಕ್ಷೇತ್ರ ಚಾಮುಂಡೇಶ್ವರಿಯಿಂದಲೇ ಸ್ಪರ್ಧೆ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ತಮ್ಮ ಕಿರಿಯ ಪುತ್ರ ಡಾ. ಯತೀಂದ್ರ ಅವರನ್ನ ಕಣಕ್ಕಿಳಿಸುವ ಪ್ಲಾನ್ ಮಾಡಿದ್ದಾರೆ.ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯನವರು ಈ ಕ್ಷೇತ್ರದಲ್ಲಿ ತುಂಬಾ ವರ್ಚಸ್ಸನ್ನು ಬೆಳೆಸಿಕೊಂಡಿದ್ರು. ಅವರಿದ್ದಿದ್ರೆ ಬಹುತೇಕ ರಾಕೇಶ್ ಅವ್ರೇ ಇಲ್ಲಿಂದ ಕಣಕ್ಕಿಳಿತಿದ್ರು. ಆದ್ರೆ ರಾಕೇಶ್ ಸಿದ್ದರಾಮಯ್ಯನವರ ಅಕಾಲಿಕ ಮರಣದಿಂದ ಇಲ್ಲಿನ ಜನ ಕೂಡಾ ನೊಂದು ಹೋಗಿದ್ದಾರೆ. ಆದ್ರೆ ವಿಧಿ ಲಿಖಿತವನ್ನು ಯಾರೂ ಕೂಡಾ ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ತಮ್ಮ 2 ನೇ ಮಗ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ಕೊಟ್ಟಿದ್ದಾರೆ. ಹಾಗಿದ್ರೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಯಾರ್ಯಾರು ಕಣಕ್ಕಿಳಿತಾರೆ…ನೋಡೋಣ ಬನ್ನಿ

 

ಕೈ ಅಭ್ಯರ್ಥಿ

ಹೌದು ಸಿಎಂ ಸಿದ್ದು ಈಗಾಗಲೇ ಹೇಳಿರುವಂತೆ ವರುಣಾ ಕ್ಷೇತ್ರವನ್ನು ಬಿಟ್ಟು ಚಾಮುಂಡೇಶ್ವರಿಗೆ ಹೋಗಿದ್ದೇ ಆದಲ್ಲಿ ವರುಣಾ ಕ್ಷೇತ್ರದಿಂದ ಸಿದ್ದು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿಯೋದ್ರಲ್ಲಿ ಅನುಮಾನ ಇಲ್ಲ. ಈಗಾಗಲೇ ಸಿದ್ದು ಪುತ್ರನಿಗೆ ಟಿಕೆಟ್ ಕನ್ಫರ್ಮ್ ಆಗಿದೆ ಅನ್ನೋ ಮಾಹಿತಿ ಕೂಡಾ ಉನ್ನತ ಮೂಲಗಳಿಂದ ಕೇಳಿ ಬರ್ತಿದೆ. ಹಾಗಾಗಿ ಯತೀಂದ್ರ ಅವ್ರು ಕೆಲ ತಿಂಗಳಿನಿಂದ ಕ್ಷೇತ್ರದಲ್ಲಿ ಓಡಾಡ್ತಾ ಜನರಿಗೆ ಹತ್ತಿರವಾಗ್ತಿದ್ದಾರೆ. ರಾಕೇಶ್ ಸಿದ್ದರಾಮಯ್ಯನವರು ಈ ಹಿಂದೆ ಜನರ ಜತೆ ಇಟ್ಕೊಂಡಿದ್ದ ರಿಲೇಶನ್ ಶಿಪ್ ನ್ನು ಯತೀಂದ್ರ ಅವ್ರು ಈಗ ಮೆಂಟೇನ್ ಮಾಡ್ತಿದ್ದಾರೆ. ಇನ್ನು ತಮ್ಮ ತಂದೆಯೇ ಸಿಎಂ ಆಗಿರೋ ಕಾರಣ ಅವ್ರು ಮಾಡಿರೋ ಕೆಲ್ಸಗಳೇ ಯತೀಂದ್ರ ಅವ್ರಿಗೆ ಪ್ಲಸ್ ಪಾಯಿಂಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತವರು ಕ್ಷೇತ್ರ ಎಂದ ಮೇಲೆ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಕಾಣಬಹುದು. ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನೋಡಬಹುದು. ಡ್ರೈನೇಜ್​​ಗಳ ನಿರ್ಮಾಣ ಹಾಗು ನಿರ್ವಹಣೆ ಉತ್ತಮವಾಗಿದೆ. ಕ್ಷೇತ್ರಕ್ಕೆ 1,500ಕೋಟಿಗೂ ಅಧಿಕ ಅನುದಾನ ಹರಿದುಬಂದಿದ್ದು, ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ ಇದರ ಜತೆಗೆ ಇಲ್ಲಾಗಿರೋ ಕಾಮಗಾರಿ ತೀರಾ ಕಳಪೆ ಗುಣಮಟ್ಟದ್ದು. ಕಮಿಷನ್ ಆಸೆಗೆ ತಮ್ಮವರಿಗೇ ಕೊಟ್ಟು ಕೆಲಸ ಮಾಡಿಸಿದ್ದಾರೆ ಅನ್ನೋ ಆರೋಪ ಕೂಡಾ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಮೈಸೂರಿಗೆ ಸಾಕಷ್ಟು ಭಾರಿ ಭೇಟಿ ನೀಡಿದರೂ ವರುಣ ಕ್ಷೇತ್ರಕ್ಕೆ ಹೋಗಿರುವುದು ಮಾತ್ರ ತೀರಾ ಕಡಿಮೆ. ಇವರ ಕಾಲದಲ್ಲಿಯೇ ಕ್ಷೇತ್ರದ ಹುಲ್ಲಹಳ್ಳಿ, ರಾಂಪುರ ನಾಲೆಗಳ ಆಧುನೀಕರಣವಾಗಿದ್ದು, ಅವೆಲ್ಲವೂ ಕಳಪೆ ಕಾಮಗಾರಿಯಾಗಿದೆ ಎಂಬುದು ಶೋಚನೀಯ. ಕ್ಷೇತ್ರದಲ್ಲಿ ಏನೇ ಅಭಿವೃದ್ಧಿಯಾಗಿದೆ ಎಂದರೂ ಒಬ್ಬ ಮುಖ್ಯಮಂತ್ರಿಗಳ ತವರಿನಲ್ಲಿ ಆಗಿರುವ ಕೆಲಸ ಅಷ್ಟಕ್ಕಷ್ಟೆ ಎನ್ನಬಹುದು. ಇವೆಲ್ಲಾ ಏನೇ ಇದ್ರು ರಾಜ್ಯದ ಚುಕ್ಕಾಣಿ ಹಿಡಿದ ನಾಡಿನ ದೊರೆಯ ಮಗ ಇಲ್ಲಿಂದ ನಿಲ್ತಾರೆ ಅಂದಾಗ ಜನ ಅವ್ರನ್ನು ಸಪೋರ್ಟ್ ಮಾಡ್ತಾರೆ ಅನ್ನೋದ್ರಲ್ಲಿ ಖಂಡಿತಾ ಡೌಟ್ ಇಲ್ಲ. ಹಾಗಾಗಿ ಯತೀಂದ್ರ ಕ್ಷೇತ್ರವನ್ನು ಸಮಗ್ರವಾಗಿ ಪರಿಚಯ ಮಾಡಿಕೊಳ್ಳೋದ್ರ ಜತೆಗೆ ಜನ ಮನ ಗೆಲ್ಲೋ ಪ್ರಯತ್ನ ಮಾಡ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ

ಕಾ ಪು ಸಿದ್ಧಲಿಂಗ ಸ್ವಾಮಿ. ಆಗತಾನೇ ಹುಟ್ಟಿದ್ದ ಕೆಜೆಪಿಯಿಂದ ಕಣಕ್ಕಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯನಂತಹ ಘಟಾನುಘಟಿ ರಾಜಕಾರಣಿಗೆ ಫೈಟ್ ಕೊಟ್ಟು ವರುಣಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ನಾಯಕ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪರಮ ಶಿಷ್ಯ ಇವ್ರು. ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವ ಕಾರ್ಯ ಗ್ರಾಮ ಸಿದ್ದಲಿಂಗಸ್ವಾಮಿ ಹುಟ್ಟೂರು. 2008ರಿಂದ 2013ರ ತನಕ ಬಿಜೆಪಿ ಅಧಿಕಾರದಲ್ಲಿದ್ದಾಗ ಈ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಿದ್ದಲಿಂಗಸ್ವಾಮಿ, ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನೂ ಲೆಕ್ಕಿಸದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿಸಿ ಜನರಿಗೆ ಹತ್ತಿರವಾಗಿದ್ದರು. ಎಲ್ಲಾ ಜಾತಿ, ಜನಾಂಗಗಳ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿರೋ ಸಿದ್ದಲಿಂಗಸ್ವಾಮಿ ಈವತ್ತಿಗೂ ಇಲ್ಲಿ ಪಾಪ್ಯುಲರ್ ಲೀಡರ್​. ಸಿದ್ದಲಿಂಗಸ್ವಾಮಿ ಅವರ ಸಹೋದರ ಕಾ.ಪು. ಸಿದ್ದವೀರಪ್ಪ ಇದೇ ವರುಣಾ ಕ್ಷೇತ್ರದ ವ್ಯಾಪ್ತಿಯಿಂದಲೇ ಗೆದ್ದು ಜಿಲ್ಲಾ ಪಂಚಾಯತ್​ ಅಧ್ಯಕ್ಷರಾಗಿದ್ದರು. ಅಭಿವೃದ್ಧಿ ಕಾರ್ಯಕ್ಕೆ ಅಣ್ಣನೊಂದಿಗೆ ಕೈಜೋಡಿಸಿದ್ದರು. ಇನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಮೇಲೆ ಈ ಕ್ಷೇತ್ರದ ಜನ ತಮ್ಮ ಶಾಸಕರನ್ನು ನೇರವಾಗಿ ಭೇಟಿಯಾಗುವ ಅವಕಾಶದಿಂದ ವಂಚಿತರಾಗಿದ್ದಾರೆ. ಆದರೆ ಕಾ.ಪು. ಸಿದ್ದಲಿಂಗಸ್ವಾಮಿ ಸದಾಕಾಲ ಕ್ಷೇತ್ರದಲ್ಲೇ ಓಡಾಡಿಕೊಂಡು ಹುಟ್ಟು, ಸಾವು, ವಿವಾಹ ಎಲ್ಲದರಲ್ಲೂ ಸಕ್ರಿಯರಾಗಿರೋ ಕಾರಣ ಇಲ್ಲಿ ಅವರು ಪಾಪ್ಯುಲರ್​ ಲೀಡರ್. ಇನ್ನು ಬಿಜೆಪಿಯ ನಾಯಕರೇ ಸಿದ್ದಲಿಂಗಸ್ವಾಮಿ ಕಾಲೆಳೆದು ಟಿಕೆಟ್ ತಪ್ಪಿಸಿದರೆ ಬಹಳ ಮುಖ್ಯವಾದ ಕ್ಷೇತ್ರವನ್ನ ಬಿಜೆಪಿ ಕಳೆದುಕೊಳ್ಳೋದಂತು ಗ್ಯಾರಂಟಿ.

ಇನ್ನು ಕಾಪು ಸಿದ್ದಲಿಂಗ ಸ್ವಾಮಿ ಅವ್ರ ಜತೆಗೆ ಈ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ಬಿಜೆಪಿಯಲ್ಲಿ ಕೇಳಿ ಬರ್ತಿರೋ ಮತ್ತಷ್ಟು ಹೆಸರುಗಳೆಂದ್ರೆ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್​ ಬಿದರಿ ಹಾಗೂ ಲಂಡನ್​ನಲ್ಲಿ ಮೇಯರ್​ ಆಗಿದ್ದ ಡಾ. ನೀರಜ್​ ಪಾಟೀಲ್. ಆದ್ರೆ ಇವರಿಬ್ಬರೂ ಈ ಕ್ಷೇತ್ರಕ್ಕೆ ಹೊಸಬರು. ಕ್ಷೇತ್ರದ ಮೇಲೆ ಸಿದ್ದರಾಮಯ್ಯನವರಿಗೆ ಇರೋ ಬಿಗಿಹಿಡಿತವನ್ನ ಸಡಿಲಗೊಳಿಸಲು ಹೊರಗಿನ ಅಭ್ಯರ್ಥಿಗಳಿಂದ ಸಾಧ್ಯವಿಲ್ಲ ಎಂಬುದು ಇಲ್ಲಿನ ಮತದಾರರ ಅಭಿಪ್ರಾಯ. ಹಾಗಾಗಿ ಬಹುತೇಕ ಕಾಪು ಸಿದ್ದಲಿಂಗ ಸ್ವಾಮಿ ಅವ್ರಿಗೆ ಟಿಕೆಟ್ ದೊರಕಬಹುದು

ತೆನೆ ಹೊರೋದ್ಯಾರು?

ಇನ್ನು ಜೆಡಿಎಸ್ ಪಕ್ಷದ ಪ್ರಾಬಲ್ಯ ಇಲ್ಲಿ ಭಾರೀ ಶೂನ್ಯ. ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಮಾಜಿ ಪೊಲೀಸ್ ಅಧಿಕಾರಿ ಚೆಲುವರಾಜು ಕೇವಲ 4 ಸಾವಿರ ಮತ ಪಡೆದಿದ್ದರು. ಈ ಬಾರಿ ಕೂಡ ಅಭಿಷೇಕ್​ ಗೌಡ ಮತ್ತು ಮಹದೇವಸ್ವಾಮಿ ಇಬ್ಬರು ಯುವ ಮುಖಂಡರು ಜೆಡಿಎಸ್​ನ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 210532 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ  ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧೆ ಮಾಡಿ ಸಿದ್ದಲಿಂಗ ಸ್ವಾಮಿ 52 ಸಾವಿರ ಮತಗಳನ್ನು ಪಡೆಯುವುದೆಂದರೆ ಸಾಮಾನ್ಯ ಸಂಗತಿಯಲ್ಲ. ವರುಣಾ ಕ್ಷೇತ್ರದಲ್ಲಿ 53 ಸಾವಿರ ಲಿಂಗಾಯಿತ ಮತದಾರರಿದ್ದರೂ ಇಲ್ಲಿ ಗೆಲ್ಲಬೇಕಾದರೆ 48 ಸಾವಿರದಷ್ಟಿರುವ ದಲಿತ ಮತದಾರರೇ ನಿರ್ಣಾಯಕ. ಕಳೆದ ಬಾರಿ ಮಾಜಿ ಸಚಿವ ಶ್ರೀನಿವಾಸಪ್ರಸಾದ್, ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದ್ದರು. ಆದರೆ ಈ ಬಾರಿ  ಅವ್ರು ಕಾಂಗ್ರೆಸ್ ನಲ್ಲಿ ಇಲ್ಲ. ಹಾಗಾಗಿ ಇದು ದಲಿತ ಮತಗಳ ಮೇಲೆ ಪ್ರಭಾವ ಬೀರೋದು ಗ್ಯಾರಂಟಿ. ಇವ್ರು ಕೂಡಾ ಸಿದ್ದರಾಮಯ್ಯ ಹಾಗೂ ಅವರ ಪುತ್ರನನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ನಿರ್ಧರಿಸಿರುವ ಕಾರಣ ಇಲ್ಲಿ ಯತೀಂದ್ರ ಸ್ಪರ್ಧೆ ಮಾಡಿದರೂ ಗೆಲುವು ಅಷ್ಟು ಸುಲಭವಲ್ಲ. ಕಳೆದ ವರ್ಷ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 7 ಸ್ಥಾನಗಳ ಪೈಕಿ 4 ಬಿಜೆಪಿ ಪಾಲಾಗಿತ್ತು. ಇದು ಸಿಎಂ ಗೆ ಆದ ಹಿನ್ನಡೆ. ಆದ್ರೆ ತಾಲೂಕು ಪಂಚಾಯತ್ ಚುನಾವಣೆಯಲ್ಲಿ 27 ಸ್ಥಾನಗಳ ಪೈಕಿ ಕಾಂಗ್ರೆಸ್-14 ಹಾಗೂ ಬಿಜೆಪಿ-12ರಲ್ಲಿ ಗೆದ್ದಿದ್ದು ನೋಡಿದ್ರೆ 2 ಪಕ್ಷಗಳ ಬಲಾ ಬಲಾ ಕೂಡಾ ಒಂದೇ ರೀತಿ ಇರುವಂತೆ ಕಾಣ್ತಿದೆ. ಹೀಗಾಗಿ ಬಿಜೆಪಿಯಿಂದ ಕಾ.ಪು. ಸಿದ್ದಲಿಂಗಸ್ವಾಮಿ ಅವರಿಗೆ ಟಿಕೆಟ್ ಖಾತ್ರಿಯಾದರೆ, ಯತೀಂದ್ರ ಮತ್ತು ಸಿದ್ಧಲಿಂಗ ಸ್ವಾಮಿ ನಡುವೇ ನೇರ ಹಣಾಹಣಿ ಏರ್ಪಡೋದ್ರಲ್ಲಿ ನೋ ಡೌಟ್.

ವರುಣಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ವೀರಶೈವರು ಮತದಾರರು ಸಿದ್ದರಾಮಯ್ಯನವರ ಕೈಹಿಡಿದಿದ್ದರು. ಕಾರಣ ಮೈಸೂರಿನ ಸುತ್ತೂರು ಮಠ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಗೆದ್ದು ಅಧಿಕಾರಕ್ಕೆ ಬಂದರೆ ಸಿಎಂ ಆಗ್ತಾರೆ ಅನ್ನುವ ಸ್ಪಷ್ಟ ಲಕ್ಷಣಗಳಿತ್ತು.ಈ ಸಂದರ್ಭ ಸಿದ್ದರಾಮಯ್ಯನವರ ಸೋಲಿಗೆ ವೀರಶೈವರು ಕಾರಣರಾಗಬಾರದು ಅಂತಾ ಸ್ವತ ಸುತ್ತೂರು ಸ್ವಾಮೀಜಿ ಸಿದ್ದರಾಮಯ್ಯನವರನ್ನ ಪರೋಕ್ಷವಾಗಿ ಬೆಂಬಲಿಸಿದ್ದೇ ಸಿದ್ದು ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಈಗ ವರುಣಾ ಕ್ಷೇತ್ರದಲ್ಲಿ ವೀರಶೈವ ಮುಖಂಡರಿಗೆ ಸಿಎಂ ಸಿದ್ದರಾಮಯ್ಯ ಕಿಮ್ಮತ್ತೇ ನೀಡಿಲ್ಲ ಜತೆಗೆ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡ್ತಿದ್ದಾರೆ ಅನ್ನೋದು ಸಿಎಂ ವಿರುದ್ಧದ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಅತ್ಯಧಿಕ ಸಂಖ್ಯೆಯ ವೀರಶೈವ/ಲಿಂಗಾಯಿತ ಮತದಾರರು ಈ ಕ್ಷೇತ್ರದಲ್ಲಿ ಸ್ವಜಾತಿ ಅಭ್ಯರ್ಥಿಯನ್ನೇ ಗೆಲ್ಲಿಸಿ ಸಿಎಂಗೆ ಪಾಠ ಕಲಿಸಬೇಕೆಂಬ ಸಂದೇಶ ಇಡೀ ಕ್ಷೇತ್ರದಲ್ಲಿ ಓಡಾಡುತ್ತಿದೆ. ಇವೆಲ್ಲವೂ ಕಾ.ಪು. ಸಿದ್ದಲಿಂಗಸ್ವಾಮಿ ಅವರಿಗೆ ಪೂರಕ ವಾತಾವರಣವನ್ನ ಕಲ್ಪಿಸಿದೆ. ಇನ್ನು ಇದರ ಜತೆಗೆ ಯತೀಂದ್ರ ಅವರ ಮೇಲೆ ಯಾವುದೇ ವಿವಾದವಿಲ್ಲದಿದ್ದರೂ ಸಿಎಂ ಆಗುವ ಅದೃಷ್ಟದ ಕ್ಷೇತ್ರವನ್ನು ಸಿದ್ದರಾಮಯ್ಯ ತ್ಯಜಿಸುತ್ತಿರುವುದು ಕೂಡ ಕ್ಷೇತ್ರ ಜನರಿಗೆ ಭಾವನಾತ್ಮಕವಾಗಿ ನೋವನ್ನು ತಂದಿದೆ. ಹಾಗಾಗಿ ಈ ಬಾರಿ ಕಾಪು ಸಿದ್ದಲಿಂಗ ಸ್ವಾಮಿ ಮತ್ತು ಡಾ.ಯತೀಂದ್ರ ಸಿದ್ಧರಾಮಯ್ಯನವರ ಈ ಫೈಟ್ ನಲ್ಲಿ ಗೆಲುವು ಯಾರಿಗೆ ಅನ್ನೋದನ್ನು ಸುಲಭವಾಗಿ ಹೇಳೋದು ಕಷ್ಟ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು.