ಬದಾಮಿಗೆ ಬಂದ್ರೂ ಸಿಎಂ ಬೆನ್ನು ಬಿಡದ ಬಿಜೆಪಿ- ಸಿದ್ದು ಮಣಿಸಲು ಈಶು ಕಣಕ್ಕೆ!

ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ ಇತ್ತ ಸಿಎಂ ಸಿದ್ದರಾಮಯ್ಯರನ್ನು ಶತಾಯ-ಗತಾಯ ಬದಾಮಿಯಲ್ಲಿ ಸೋಲಿಸಲು ಬಿಜೆಪಿ ಭರ್ಜರಿ ರಣತಂತ್ರ ಆರಂಭಿಸಿದೆ. ಹೌದು ಸಿಎಂ ಬದಾಮಿ ಏಟಿಗೆ ಎದಿರೇಟು ಕೊಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ನಿನ್ನೆ ರಾತ್ರಿ ಅಮಿತ್​​-ಪ್ರಧಾನಿ ಮೋದಿ ಚರ್ಚಿಸಿ ಸಿಎಂ ಎದುರು ಈಶ್ವರಪ್ಪ ಕಣಕ್ಕಿಳಿಸಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದ್ದು, ಇದು ಪಕ್ಕಾ ಜಾತಿ ರಾಜಕಾರಣದ ಲೆಕ್ಕಾಚಾರ ಎನ್ನಲಾಗುತ್ತಿದೆ.

ad


ಶಾ ಹಾಗೂ ಮೋದಿ ಲೆಕ್ಕಾಚಾರದ ಪ್ರಕಾರ, ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯ ಪ್ರಭಲ ಅಸ್ತ್ರವಾಗಿ ಕುರುಬ ಸಮಾಜದ ನಾಯಕ ಈಶ್ವರಪ್ಪ ಕಣಕ್ಕಿಳಿಸಲು ಚಿಂತನೆ ನಡೆದಿದೆ. ಈಗಾಗಲೇ ಬದಾಮಿಯಲ್ಲಿ ಕುರುಬ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಅಲ್ಲದೇ ಎರಡು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಗೆಲ್ಲದಂತೆ ನೋಡಿಕೊಳ್ಳಲು ಶಾ ಸೂಚಿಸಿದ್ದಾರೆ.
ಹೀಗಾಗಿ ಹೈಕಮಾಂಡ್​ ಸೂಚನೆಯಂತೆ ಈಶ್ವರಪ್ಪ ಎರಡು ಕ್ಷೇತ್ರಗಳಲ್ಲಿ ಎಲೆಕ್ಷನ್​ಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ನಾಡಿದ್ದು ಈಶ್ವರಪ್ಪ ನಾಮಪತ್ರ ಸಲ್ಲಿಸಲಿದ್ದು, ಸ್ಥಳೀಯರ ನಾಯಕರ ಜೊತೆ ಸಧ್ಯದಲ್ಲೇ ಸಭೆ ನಡೆಸಲಿದ್ದಾರೆ. ಇದಲ್ಲದೇ,ಬಿಜೆಪಿ ಹೈಕಮಾಂಡ್​, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹಾಗೂ ಪ್ರಬಲ ಆಕಾಂಕ್ಷಿ ಮಹಾಂತೇಶ್ ಮಮದಾಪೂರ್ ಗೆ ಈಶ್ವರಪ್ಪ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದೆ. ಬದಾಮಿಯಲ್ಲಿ ಕುರುಬ ಸಮಾಜದ ಮತಗಳು ಹೆಚ್ಚಿರುವುದರಿಂದ ಕುರುಬ ಸಮಾಜದ ಅಭ್ಯರ್ಥಿಯನ್ನೆ ಕಣಕ್ಕಿಳಿಸಲು ಬಿಜೆಪಿ ರಣತಂತ್ರ ಹೂಡಿದೆ.

ಆದರೇ ಈ ವದಂತಿಯನ್ನು ತಳ್ಳಿಹಾಕಲು ಈಶ್ವರಪ್ಪ ಯತ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ಬದಾಮಿಯಲ್ಲಿ ಸ್ಪರ್ಧಿಸುತ್ತಿಲ್ಲ. ಯಾರು ಹೇಳಿದ್ರು ನಿಮಗೆ ? ಎಂದು ಮಾಧ್ಯಮದವರನ್ನೇ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ.