ಬಸವಣ್ಣ ಕೂಡ ಅಮಿತ್ ಶಾ ಕೈಯಿಂದ ಹಾರ ಹಾಕಿಸಿಕೊಳ್ಳಲಿಲ್ಲ!! ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಡುವೆ : ಕೆ ಜೆ ಜಾರ್ಜ್

 

adಬಸವಣ್ಣನವರು ಕೂಡ ಅಮಿತ್ ಶಾ ಹಾಕಿದ ಹಾರ ಒಪ್ಪಲಿಲ್ಲ, ಬಸವ ಜಯಂತಿಯಂದು ಬಸವ ಪ್ರತಿಮೆಗೆ ಹಾರ ಹಾಕಲು ಆಗಲಿಲ್ಲ,‌ ಅವರು ಹಾಕಿದ ಹಾರ ಕೆಳಗೆ ಬಿದ್ದಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವ್ಯಂಗ್ಯವಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೂರು ಸುಳ್ಳು ಹೇಳಿ ಸುಳ್ಳನ್ನೇ ಸತ್ಯ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೊರಟಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಶಾ ಆರೋಪ ಮಾಡುತ್ತಾರೆ. ಆದರೆ ಅವರಿಗೆ ಇಲ್ಲಿನ ವಿಚಾರವೇ ಗೊತ್ತಿಲ್ಲ. ಚುನಾವಣೆಗಾಗಿ ಬಂದು ಆಧಾರರಹಿತ ಮಾತನಾಡುವುದನ್ನು ಬಿಡಲಿ ಎಂದರು.

ಬಿಜೆಪಿಯವರು ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾಡಿದರು. ನಾವು ಬಂದು ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಆರಂಭಿಸಿದೆ. ಅಕ್ಕಪಕ್ಕದ ನೂರಾರು ಹಳ್ಳಿಯನ್ನು ಸೇರಿಸಿ ಬಿಎಂಪಿಯನ್ನು ಬಿಬಿಎಂಪಿಯನ್ನಾಗಿ ಮಾಡಿದರು. ಆದರೆ ಆ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಿಲ್ಲ. ನಾವು ಬಂದು ಆ ಹಳ್ಳಿಗಳಿಗೆ ಸೌಕರ್ಯಗಳನ್ನು ಕಲ್ಪಿಸಿದ್ದೇವೆ. ಇದೆಲ್ಲಾ ಗೊತ್ತಿಲ್ಲದೇ ಅಮಿತ್ ಶಾ ನಮ್ಮ ಸರ್ಕಾರವನ್ನು ಟೀಕಿಸುತ್ತಾರೆ ಎಂದು ಟಾಂಗ್ ನೀಡಿದರು.

ಬೆಂಗಳೂರಿನಿಂದಲೇ ಸುನಾಮಿ ಏಳಲಿದೆ ಅಂತಾರೆ. ಸುನಾಮಿ ಅಂದರೆ ಪ್ರಕೃತಿ ವಿಕೋಪ ಅನ್ನೋದು ಗೊತ್ತಿಲ್ವಾ? ಇಂಥ ಮಾತುಗಳನ್ನು ಬಿಜೆಪಿ ನಾಯಕರು ಹಿಂಪಡೆಯಬೇಕು, ಸುನಾಮಿಗೆ ಜನರೇ ತಕ್ಕ‌ ಪಾಠ ಕಲಿಸಲಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬದಾಮಿ ಎರಡು ಕಡೆ ಸ್ಪರ್ಧಿಸಿದರೆ ಉತ್ತಮ. ಎಲ್ಲಾ ಭಾಗದಲ್ಲಿ ಜನರಿಗೆ ಉತ್ಸಾಹ ಬರುತ್ತದೆ. ಸಿಎಂ ನನ್ನ ಕ್ಷೇತ್ರಕ್ಕೆ ಬಂದರೂ ಬಿಟ್ಟು ಕೊಡಲು ಸಿದ್ಧ ಎಂದು ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.