ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ನಿಂತು ಕೆಮ್ಮಲ್ಲ !! ವೀಲ್ ಚೇರ್ ನಲ್ಲಿ ನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಅಂದ್ರು ಎಚ್ ಡಿ ದೇವೇಗೌಡರು !!

ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ಮತ್ತು  ರಾಹುಲ್ ಗಾಂಧಿ ಅವರು ಜೆಡಿಎಸ್ ಪಕ್ಷವನ್ನು ಬಿಜೆಪಿಯ ‘ಬಿ’ ಟೀಂ ಎಂದಿರೋ ವಿಚಾರಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಿ ಹರಿಹಾಯ್ದಿದ್ದಾರೆ.

ಇಂದು ನಗರದ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಎಚ್ ಡಿ ದೇವೇಗೌಡರು, ರಾಹುಲ್ ಗಾಂಧಿಯವರು ಜೆಡಿಎಸ್ ಅನ್ನು ಸಂಘಪರಿವಾರಕ್ಕೆ ಹೋಲಿಸಿದ್ದಾರೆ. ಬಿಜೆಪಿ ಯಾಕೆ ಬೆಂಬಲಿಸುತ್ತಿದ್ದೀರಿ ಎಂದು ಸ್ಪಷ್ಟಪಡಿಸಿ ಎಂದಿದ್ದಾರೆ. ಇನ್ನೂ ಬೆಳೆಯಬೇಕಾದ ಯುವ ನಾಯಕ ಅವರು. ಕರ್ನಾಟಕದಲ್ಲಿ ಇರೋದು ಯಾವ ಕಾಂಗ್ರೆಸ್ ಎಂದು ಅವರು ತಿಳಿದುಕೊಳ್ಳಬೇಕು. ಇಂದಿರಾಗಾಂಧಿ ಕಾಂಗ್ರೆಸ್, ಸೋನಿಯಾ ಗಾಂಧಿ ಕಾಂಗ್ರೆಸ್ ಅಥವಾ ಸಿದ್ದರಾಮಯ್ಯ ಕಾಂಗ್ರೆಸ್ ಅನ್ನೋದು ತಿಳಿಯಬೇಕು. ನಾವು ರಾಹುಲ್ ಗಾಂಧಿ ಅಥವಾ ಮೋದಿಯವರ ಆದೇಶ ಪಾಲನೆ ಮಾಡಬೇಕಾಗಿಲ್ಲ. ಇವರ ಮನೆ ಬಾಗಿಲಿಗೆ ನಾವು ಹೋಗಿಲ್ಲ ಎಂದು ಹರಿಹಾಯ್ದರು. ಮೇ 11 1996 ರಲ್ಲಿ ಜಾತ್ಯಾತೀತ ಪಕ್ಷಗಳು ಒಂದಾದ್ರೆ ಬೆಂಬಲ ಕೊಡೋದಾಗಿ ಕಾಂಗ್ರೆಸ್ ಹೇಳಿತ್ತು ಎಂದು ಎಚ್ ಡಿಡಿ ಇತಿಹಾಸಕ್ಕೆ ಹೊರಳಿದರು.

ರಾಹುಲ್ ಗಾಂಧಿ ಇಲ್ಲಿ ಯಾರೋ ಚೀಟಿ ಬರೆದಿದ್ದನ್ನ ಭಾಷಣ ಮಾಡ್ತಾರೆ. ದೇವೇಗೌಡರನ್ನ ಏನೆಂದುಕೊಂಡಿದ್ದಾರೆ. ಈ ದೇಶ ಇಷ್ಟು ಕೆಟ್ಟ ಸ್ಥಿತಿಗೆ ಬರಲು ಕಾರಣ ಯಾರು? ಬಾಬರಿ ಮಸೀದಿ ಒಡೆದಾಗ ಪ್ರಧಾನ ಮಂತ್ರಿ ಯಾರಾಗಿದ್ರು ? ಇತಿಹಾಸ ಅರಿತು ಮಾತಾಡಬೇಕು, ಸ್ವೇಚ್ಚಾಚಾರದಿಂದ ಮಾತಾಡಬಾರದು. ನನ್ನ ತಾಳ್ಮೆಗೂ ಮಿತಿ ಇದೆ ಎಂದು ದೇವೇಗೌಡರು ಎಚ್ಚರಿಸಿದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕ್ರಿಶ್ಚಿಯನ್ನರನ್ನ ಸುಟ್ರು. ಕ್ರಿಶ್ಚಿಯನ್ನರನ್ನ ರೇಪ್ ಮಾಡಿದ್ರು. ಇದೆಲ್ಲವನ್ನೂ ನೆನಪು ಮಾಡಿಕೊಳ್ಳಿ ಎಂದು ರಾಹುಲ್ ಗಾಂಧಿ ವಿರುದ್ಧ ಮಾಜಿ ಪ್ರಧಾನಿ ಕಿಡಿ ಕಾರಿದ್ರು. ಜೆಡಿಎಸ್ ಮುಗಿಸಲು ನಿಮ್ಮಿಂದ ಸಾಧ್ಯವಾಗೊಲ್ಲ. ನೋ… ಯು ಕ್ಯಾನಾಟ್. ಏಳು ಜನ ಶಾಸಕರನ್ನು ಸೇರಿಸಿಕೊಂಡು, ನಮ್ಮನ್ನು ಮುಗಿಸ್ತಿವಿ ಅಂತ ಹೊರಟ್ಟಿದ್ದೀರಾ, ಅದು ಎಂದಿಗೂ ಆಗೊಲ್ಲ ಎಂದು ಸಿಎಂ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದ್ರು.

ರಾಹುಲ್ ಗಾಂಧಿ ರಾಜ್ಯಕ್ಕೆ ಮತ್ತೆ ಮತ್ತೆ ಬರ್ತಾರಂತೆ, ಬರ್ಲಿ ಹತ್ತು ಬಾರಿ ಬರ್ಲಿ. ಈಗ ಅವರಿಗೆ ಉಳಿದಿರೊದು ಕರ್ನಾಟಕ ಮಾತ್ರ. ಹೀಗಾಗಿ ಮತ್ತೆ ಮತ್ತೆ ಬರ್ತಾರೆ. ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಗೆ ಕರೆತರಲು ಯಶಸ್ವಿಯಾದೆ ಎಂದು ಡಿಕೆಶಿ ಹೇಳ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದಮೇಲೆ ಕಾಂಗ್ರೆಸ್ ಪರಿಶುದ್ದವಾಗೋಯ್ತು. ಖರ್ಗೆ ಅವರನ್ನು ತೆಗೆದು ಸಿದ್ದರಾಮಯ್ಯ ಅವರನ್ನ ಕೂರಿಸಿದ್ರಿ. ಅಲ್ಲಿಗೆ ಕಾಂಗ್ರೆಸ್ ತುಂಬಾ ಸ್ವಚ್ಚವಾಗೋಯ್ತು ಎಂದರು. ನಾವು ಬಿಜೆಪಿ ಜೊತೆ ನಿಂತು ಕೆಮ್ಮಿದ್ರೆ ಕಾಂಗ್ರೆಸ್ ಧೂಳಿಪಟವಾಗುತ್ತೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆಯೂ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಕುಮಾರ ಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ನಾವೂ ಯಾರ ಜೊತೆ ಹೊಗುವ ಪ್ರಶ್ನೆಯೆ ಇಲ್ಲ. ನಮ್ಮ ಸ್ವಂತ ಬಲದ ಮೇಲೆ ಹೋರಾಟ ಮಾಡ್ತೀವಿ. ಬಹುಮತ ಬರದಿದ್ರೆ ವಿರೋಧ ಪಕ್ಷದಲ್ಲಿ ಕೂರ್ತಿವಿ ಎಂದು ಸ್ಪಷ್ಟಪಡಿಸಿದ್ದಾರೆ.