ಸ್ಪೀಕರ್ – ಹೈಕೋರ್ಟ್ ಮಧ್ಯೆ ಸಿಲುಕಿಕೊಂಡ ಬಂಡಾಯ ಶಾಸಕರ ಅರ್ಹತೆ !! ಕುತೂಹಲ ಘಟ್ಟ ತಲುಪಿದ ನ್ಯಾಯಾಂಗ ಶಾಸಕಾಂಗ ಪ್ರಕ್ರಿಯೆ !!

ಜೆಡಿಎಸ್‌ನ 7 ಬಂಡಾಯ ಶಾಸಕರ ಅನರ್ಹತೆ ವಿಚಾರವಾಗಿ ನಾಳೆಯೊಳಗೆ ಸ್ಪೀಕರ್ ತೀರ್ಮಾನ ಕೈಗೊಳ್ಳಿ ಎಂದು ಹೈಕೋರ್ಟ್‌ನ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಆದರೆ ಹೈಕೋರ್ಟ್ ಅಭಿಪ್ರಾಯ ಪಡೋದನ್ನು ಬಿಟ್ಟು ಕಾನೂನಿನ ಅವಕಾಶವಿದ್ದರೆ ಸ್ಪೀಕರ್ ಗೆ ಆದೇಶ ನೀಡಲಿ ಎಂದು ಸ್ಪೀಕರ್ ಕೆ ಬಿ ಕೋಳಿವಾಡ ಹೇಳಿದ್ದಾರೆ. ಇದೀಗ ಶಾಸಕರ ಅನರ್ಹತೆಯ ವಿಚಾರ ನ್ಯಾಯಾಂಗ ಮತ್ತು ಶಾಸಕಾಂಗ ಮಧ್ಯೆ ಕುತೂಹಲಕರ ಬೆಳವಣಿಗೆಗೆ ಕಾರಣವಾಗಿದೆ.

ad


ಈ ತಿಂಗಳ 23 ರಂದು ರಾಜ್ಯ ವಿಧಾನಸಭೆಯಿಂದ ರಾಜ್ಯ ಸಭೆಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬಂಡಾಯ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದಂತೆ ತಡೆಯಲು ಹಾಗೂ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್‌ಗೆ ದೂರು ಸಲ್ಲಿಸಿತ್ತು. ಅಲ್ಲದೇ ಸ್ಪೀಕರ್ ತೀರ್ಪನ್ನು ಕಾಯ್ದಿರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು. 7 ಮಂದಿ ಬಂಡಾಯ ಶಾಸಕರಾದ ಜಮೀರ್ ಅಹಮದ್ ಖಾನ್, ಎಚ್.ಸಿ.ಬಾಲಕೃಷ್ಣ, ಚೆಲುವರಾಯಸ್ವಾಮಿ, ರಮೇಶ್ ಬಂಡಿ ಸಿದ್ದನ ಗೌಡ, ಭೀಮಾ ನಾಯಕ್, ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್ ಅನ್ಸಾರಿ, ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಜೆಡಿಎಸ್ ಶಾಸಕರಾದ ಡಾ.ಸಿ.ಎನ್.ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ದೂರು ನೀಡಿದ್ದರು.

ನಿನ್ನೆ ಬಂಡಾಯ ಶಾಸಕರು ಮತ್ತು ಜೆಡಿಎಸ್ ಶಾಸಕರ ಅಭಿಪ್ರಾಯವನ್ನು ಆಲಿಸಿ ಸ್ಪೀಕರ್ ಕೆ.ಬಿ.ಕೋಳಿವಾಡ ತೀರ್ಪು ಕಾಯ್ದಿರಿಸಿದರು. ಇಂದೇ ತೀರ್ಪು ಪ್ರಕಟಿಸುವಂತೆ ಜೆಡಿಎಸ್ ಶಾಸಕರು ಆಗ್ರಹಿಸಿದರು. ಅಲ್ಲದೇ ಈ ಸಂಬಂಧ ಸ್ಪೀಕರ್ ಗೆ ನಿರ್ಧಾರ ಕೈಗೊಳ್ಳಲು ಸೂಚನೆ ನೀಡುವಂತೆ ಹೈ ಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್‌ನ ನಿಲುವನ್ನು ಮಧ್ಯಾಹ್ನ 3.30ರೊಳಗೆ ಸ್ಪೀಕರ್ ಗೆ ತಿಳಿಸುವಂತೆ ಹೈಕೋರ್ಟ್ ಅಡ್ವಕೇಟ್ ಜನರಲ್ ಗೆ ಸೂಚನೆ ನೀಡಿದೆ. ಇದರ ಮಧ್ಯೆ ಮಾತನಾಡಿದ ಸ್ಪೀಕರ್ ಕೆ ಬಿ ಕೋಳಿವಾಡ, ತೀರ್ಪು ಕಾಯ್ದಿರಿಸಿದ್ದೇನೆ. ಯಾವಾಗ ಬೇಕಾದರೂ ನಾನು ತೀರ್ಪು ಪ್ರಕಟಿಸಬಹುದು. ನಾನು ನಾಳೆಯೇ ತೀರ್ಪು ಪ್ರಕಟಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸುವ ಬದಲು ಆದೇಶ ನೀಡಲಿ. ಅದನ್ನು ನಾವು ಕಾನೂನಿನ ಪ್ರಕಾರ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.