“ಚುನಾವಣಾ ಕುರುಕ್ಷೇತ್ರ” 2018 – ಬಳ್ಳಾರಿ ಗ್ರಾಮಾಂತರ!!

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ:

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬಳ್ಳಾರೀ ಗ್ರಾಮಾಂತರ ವಿಧಾನಸಭಾ ಕ್ಷಏತ್ರದ ಬಗ್ಗೆ. ಬಳ್ಳಾರಿ ಗ್ರಾಮೀಣ ಮೀಸಲು ಎಸ್​ಟಿ ಕ್ಷೇತ್ರದಲ್ಲಿ ಯಾರ ಅಲೆ ಇದೆ?  ಒಂದು ಕಾಲಕ್ಕೆ ಶ್ರೀರಾಮುಲುಗೆ ಹ್ಯಾಟ್ರಿಕ್​ ಸಾಧನೆ ಮಾಡಲು ಕಾರಣವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗಿರುವ ಬಲ ಎಷ್ಟು….. ಈ ಸಲ ನಡೆಯಲಿದೆಯಾ ಮಾಜಿ ಶಾಸಕ ಹಾಗೂ ಮಾಜಿ ಸಂಸದರ ನಡುವೆ ಬಿಗ್​ ಫೈಟ್​. ಬಳ್ಳಾರಿ ಗ್ರಾಮೀಣ ಎಸ್​ಟಿ ಮೀಸಲು ಕ್ಷೇತ್ರದ ಗ್ರೌಂಡ್​ ರಿಪೋರ್ಟ್​ ಇಲ್ಲಿದೆ ನೋಡಿ.

ಬಳ್ಳಾರಿ ವಿಧಾನಸಭಾ ಕ್ಷೇತ್ರ. ಬಳ್ಳಾರ ಜಿಲ್ಲೆಯ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಅದ್ರಲ್ಲೂ ರಾಜಕೀಯಕ್ಕೆ ಹೆಸರಾಗಿರೋ ಕ್ಷೇತ್ರ ಇದು. ಸಂಸದ ಶ್ರೀರಾಮುಲು ಅವ್ರನ್ನು ಮೂರು ಬಾರಿ ಗೆಲ್ಲಿಸಿದ ಕ್ಷೇತ್ರ ಇದು.  ಆದ್ರೆ ಈಗ ಪ್ರಸ್ತುತ ಕೈ ಪಾಳಯದ ವಶದಲ್ಲಿದೆ. ಬಳ್ಳಾರಿ ಗ್ರಾಮೀಣ ಮೀಸಲು ಕ್ಷೇತ್ರ ಕ್ಷೇತ್ರ ಪುನರ್​ವಿಂಗಡಣೆ ನಂತರ ಇಲ್ಲಿ ಬಿಜೆಪಿಯ ಶ್ರೀರಾಮುಲು ಒಮ್ಮೆ ಬಿಜೆಪಿಯಿಂದ ಒಮ್ಮೆ ಪಕ್ಷೇತರರಾಗಿ ಮತ್ತೊಮ್ಮೆ ಬಿಎಸ್​ಆರ್​ ಪಕ್ಷದಿಂದ ಗೆದ್ದು ತೋರಿಸಿದ್ದರು. ಆದ್ರೆ 2013ರ ಚುನಾವಣೆಯಲ್ಲಿ ಶ್ರೀರಾಮುಲು ಬಿಜೆಪಿಯಿಂದ ಬೇರೆ ಹೋಗಿ ಬಿಎಸ್ ಆರ್ ಪಕ್ಷವನ್ನು ಕಟ್ಟಿ ಅದ್ರಿಂದ ಕಣಕ್ಕಿಳಿದಿದ್ರು. ಆದ್ರೆ 2014ರ ಹೊತ್ತಿಗೆ ಬಿಜೆಪಿಗೆ ಮತ್ತೆ ಬಂದ ಶ್ರೀರಾಮುಲು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಸಂಸದರಾದ್ರು. ಅದಾದ ಮೇಲೆ ಇಲ್ಲಿ ಉಪಚುನಾವಣೆ ನಡೆದಾಗ ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಕಾಂಗ್ರೆಸ್ ನ ಎನ್ ವೈ ಗೊಪಾಲಕೃಷ್ಣ ಇಲ್ಲಿ ಜಯಭೇರಿ ಬಾರಿಸಿದ್ರು. ಹಾಗಿದ್ರೆ ಈಗ 2018 ರ ಚುನಾವಣೆಗೆ ಕ್ಷೇತ್ರ ಹೇಗೆ ಸಜ್ಜಾಗಿದೆ. ಮತ್ತೆ ಇಲ್ಲಿ ಬದಲಾವಣೆ ಗಾಳಿ ಏನಾದ್ರೂ ಬೀಸ್ತಿದ್ಯಾ? ಇಲ್ಲಿನ ರಣಕಣದ ಮತ್ತಷ್ಟು ಮಾಹಿತಿ ಕೊಡ್ತೀವಿ ಆದ್ರೆ ಅದಕ್ಕೂ ಮೊದಲು 2013 ಹಾಗೂ ನಂತರ ನಡೆದ ಉಪಚುನಾವಣೆಯ ಮತಬರಹ ನೋಡೋಣ.

ಇದು 2013ರ ಮತಬರಹ ಬಿಜೆಪಿಯಿಂದ ಸಿಡಿದೆದ್ದು ಬಿಎಸ್ ಆರ್ ಕಾಂಗ್ರೆಸ್ ಸ್ಥಾಪಿಸಿ ಕಣಕ್ಕಿಳಿದಿದ್ದ ಬಿ ಶ್ರೀರಾಮುಲು ಅವ್ರು 74854 ಮತಗಳನ್ನು ಪಡೆದು ಗೆದ್ರು. ಅವ್ರಿಗೆ ಫೈಟ್ ಕೊಟ್ಟ ಕಾಂಗ್ರೆಸ್ ನ ಅಸುಂಡಿ ಹೊನ್ನೂರಪ್ಪ 41560 ಮತಗಳನ್ನು ಪಡೆದ್ರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ 2014ರಲ್ಲಿ ಶ್ರೀರಾಮುಲು ಅವ್ರು ಶಾಸಕ ಸ್ಥಾನವನ್ನು ತ್ಯಜಿಸಿ ಬಿಜೆಪಿ ಸೇರಿ ಲೋಕಸಭೆಗೆ ಸ್ಪರ್ಧಿಸಿದ್ರು. ಹಾಗಾಗಿ ಮತ್ತೆ ಉಪಚುನಾವಣೆ ನಡೀತು ಆಗ ಇಲ್ಲಿನ ಜನ ಕಾಂಗ್ರೆಸ್ ನ್ನು ಗೆಲ್ಲಿಸಿದ್ರು. ಬನ್ನಿ ಹಾಗಿದ್ರೆ 2014ರ ಉಪಚುನಾವಣೆಯ ಮತಬರಹ ನೋಡೋಣ.

ಇದು 2014ರಲ್ಲಿ ನಡೆದ ಉಪಚುನಾವಣೆಯ ರಿಸಲ್ಟ್. ಕಾಂಗ್ರೆಸ್ ನಿಂದ ಅಖಾಡದಲ್ಲಿದ್ದ ಎನ್ ವೈ ಗೊಪಾಲಕೃಷ್ಣ ಅವ್ರು 83906 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರೆ ಬಿಜೆಪಿಯ ಓಬಳೇಶ್ 50802 ಮತಗಳನ್ನು ಪಡೆದು ಸೋತ್ರು.

ಹೌದು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹೀಗೇ ನಾನಾ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಇಲ್ಲಿ ಗಣಿಧಣಿಗಳ ಅಬ್ಬರ ಜಾಸ್ತಿ ಇದ್ರೂ ಕೂಡಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲೋದ್ರ ಮೂಲಕ ತನ್ನ ತಾಕತ್ತೇನು ಅನ್ನೋದನ್ನು ತೋರಿಸಿಕೊಟ್ಟಿದೆ. ಹಾಗಾಗಿ ಇಲ್ಲಿನ ರಿಸಲ್ಚ್ ಹೀಗೇ ಇರತ್ತೆ ಅಂತಾ ಹೇಳಕ್ಕಾಗಲ್ಲ. ಈ ಬಾರಿ ಅಂತೂ ಶ್ರೀರಾಮುಲು ಅವ್ರಿಗೂ ಇಲ್ಲಿ ಪ್ರತಿಷ್ಠೆಯ ಪ್ರಶ್ನೆ ಆದ್ರೆ ಕಾಂಗ್ರೆಸ್ ಅಧಿಕಾರದಲ್ಲಿರೋ ಕಾರಣ ಅವ್ರಿಗೂ ಗೆಲ್ಲಲೇ ಬೇಕಾದ ಅನಿವಾರ್ಯತೆ. ಹಾಗಿದ್ರೆ ಇಲ್ಲಿ ಯಾವ್ಯಾವ ಪಕ್ಷದಿಂದ ಯಾರ್ಯಾರು ಕಣದಲ್ಲಿರ್ತಾರೆ ಅವ್ರ ಶಕ್ತಿ ಸಾಮರ್ಥ್ಯವೇನು ನೋಡೋಣ.

 

ಕೈ ಟಿಕೆಟ್ ಆಕಾಂಕ್ಷಿಗಳು:

ಮೂಲತಃ ಚಿತ್ರದುರ್ಗ ಜಿಲ್ಲೆಯಿಂದ ಸ್ಪರ್ಧಿಸಿ ಗೆಲ್ಲುತ್ತಿದ್ದ ಎನ್ ವೈ  ಗೋಪಾಲಕೃಷ್ಣ, ಶ್ರೀರಾಮುಲು ಸಂಸದರಾಗಿ ಆಯ್ಕೆಯಾಗಿದ್ದರಿಂದ ತೆರವಾದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಗೆದ್ದವರು. ಈವರೆಗೆ ಯಾವುದೇ ಹಗರಣ ಬೆಳಕಿಗೆ ಬಂದಿಲ್ಲ. ಹಿರಿಯ ಅನುಭವಿ ರಾಜಕಾರಣಿ. ಲಭ್ಯ ಆದ ಜನರಿಗೆ ಸಾಧ್ಯವಾದಷ್ಟು ಕೆಲಸ ಮಾಡಿಸಿ ಕೊಟ್ಟಿದ್ದಾರೆ. ಉಪಚುನಾವಣೆ ಗೆಲುವಿನ ನಂತರ ವಿಶೇಷ ಪ್ಯಾಕೇಜ್​ ಕ್ಷೇತ್ರಕ್ಕೆ ನೀಡಲಾಯಿತು. ಅದರಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಚಾಲ್ತಿಯಲ್ಲಿವೆ. ಯಾರೇ ಇರಲಿ ಜಗಳಗಂಟರನ್ನು ಬೆಂಬಲಿಸುವುದಿಲ್ಲ. ಅಧಿಕಾರಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ 2018 ರ ವಿಧಾನಸಭಾ ಚುನಾವಣೆಗೆ ಮರಳಿ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋಗಬಹುದೆಂಬ ಗುಮಾನಿ ಮತದಾರರಲ್ಲಿದೆ. ಒಳ್ಳೆಯ ವ್ಯಕ್ತಿತ್ವವಿದ್ದರೂ ಮಾಸ್​ ಆಗಿ ಜನರನ್ನು ತಲುಪಲಿಲ್ಲ.  ಜನಸಾಮಾನ್ಯರೊಂದಿಗೆ ಬೆರೆಯದಿರುವುದು. ಕ್ಷೇತ್ರಕ್ಕೆ ಹೆಚ್ಚು ಭೇಟಿ ಕೊಟ್ಟಿಲ್ಲ. ಯಾವಾಗಲೂ ಜನರ ಕೈಗೆ ಲಭ್ಯ ಆಗುವುದಿಲ್ಲ. ಮತದಾರರನ್ನು ಓಲೈಸುವುದಿಲ್ಲ ಎಂಬ ದೂರುಗಳಿವೆ. ಹಾಗಾಗಿ ಈ ಬಾರಿ ಮತ್ತೆ ಇಲ್ಲಿಂದ ಗೋಪಾಲಕೃಷ್ಣ ಕಣಕ್ಕಿಳಿಯೋದು ಡೌಟ್.

ಹೌದು ಬಳ್ಳಾರಿ ಗ್ರಾಮಾಂತರದಲ್ಲಿ  ಈ ಬಾರಿ ಕೂಡ್ಲಿಗೆ ಶಾಸಕ ನಾಗೇಂದ್ರ ಅವ್ರು ಕಾಂಗ್ರೆಸ್ ನಿಂದ ಕಣಕ್ಕಿಳಿತಾರೆ ಅನ್ನೋದ್ರಲ್ಲಿ ಅನುಮಾನ ಇಲ್ಲ. ಕಳೆದ ಚುನಾವಣೆಯಲ್ಲಿ ಕೂಡ್ಲಿಗಿಯಲ್ಲಿ ಪಕ್ಷೇತರರಾಗಿ ನಿಂತು ಗೆದ್ದು ತನ್ನ ಸಾಮರ್ಥ್ಯವನ್ನು ತೋರಿಸಿದ್ದ ನಾಗೇಂದ್ರ ಈ ಹಿಂದೆ ಗಣಿದಣಿಗಳ ಜತೆ ಅಂದ್ರೆ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವ್ರ ಜತೆ ಗುರುತಿಸಿಕೊಂಡಿದ್ರು. ಆದ್ರೆ ಮೊನ್ನೆ ಮೊನ್ನೆ ತಾನೇ  ದಿಢೀರ್ ಅಂತಾ ಕಾಂಗ್ರೆಸ್ ಸೇರಿರೋ ಇವ್ರು ಇದೀಗ ಬಳ್ಳಾರಿ ಗ್ರಾಮಾಂತರದಿಂದ ಕಣಕ್ಕಿಳಿಯೋದಕ್ಕೆ ರೆಡಿಯಾಗಿದ್ದಾರೆ. ಅಂದ್ಹಾಗೆ ಶಾಸಕ ನಾಗೇಂದ್ರ 2008 ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು ಈ ಕ್ಷೇತ್ರದಿಂದ ಅವ್ರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಿತ್ತು. ಆದರೆ ಶ್ರೀರಾಮುಲು ಅವರಿಗಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಈ ಕ್ಷೇತ್ರವನ್ನು ಮೀಸಲಿರಿಸಿದರು. ಬಿಜೆಪಿ ವರಿಷ್ಠರ ಬಳಿ ಮಾತಾಡಿ ನಾಗೇಂದ್ರರನ್ನು ಕೂಡ್ಲಿಗಿ ಕ್ಷೇತ್ರಕ್ಕೆ ಸಾಗಹಾಕಲಾಯಿತು. ಆ ಸಂದರ್ಭದಲ್ಲಿ ನಾಗೇಂದ್ರ ಅಭಿಮಾನಿಗಳು ಸಾಕಷ್ಟು ಗದ್ದಲ ಮಾಡಿದರೂ ಯಾವ ಫಲ ಸಿಕ್ಕಿರಲಿಲ್ಲ. ಹೀಗಾಗಿ ನಾಗೇಂದ್ರರ ಅಭಿಮಾನಿಗಳೂ ಕೂಡ ಶ್ರೀರಾಮುಲು ಅವರ ಪರವಾಗಿ ಕೆಲಸ ಮಾಡಬೇಕಾಯಿತು. ಹೀಗೆ ಕಳೆದ ಹತ್ತು ವರ್ಷಗಳಿಂದ ಬಳ್ಳಾರಿ ಗ್ರಾಮಾಂತರದಲ್ಲಿ  ನಾಗೇಂದ್ರ ಅಭಿಮಾನಿಗಳು ಕಾಯುತ್ತ ಕೂತವರಿಗೆ ಈಗ ಸರಿಯಾದ ಹೊತ್ತು ಬಂದಂತಾಗಿದೆ. ಇನ್ನು  ಈ ಕ್ಷೇತ್ರದಲ್ಲಿ ನಾಗೇಂದ್ರರ ಅಭಿಮಾನಿಗಳ ದೊಡ್ಡ ಪಡೆ ಇದೆ. ಅಲ್ಲದೆ ನಾರಾ ಸೂರ್ಯನಾರಾಯಣ ರೆಡ್ಡಿ ಕಾಂಗ್ರೆಸ್​ ಸೇರ್ಪಡೆಗೊಂಡಿರುವುದರಿಂದ ಅವರ ಕಾರ್ಯಕರ್ತ ಪಡೆ ಕೂಡ ಕಾಂಗ್ರೆಸ್​ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದೆ. ಬಿಜೆಪಿಯಿಂದ ಯಾರೇ ಸ್ಪರ್ಧಿಸಿದ್ರೂ ಕೂಡಾ ಅವ್ರನ್ನು ಸೋಲಿಸೋ ಕೆಪಾಸಿಟಿ ನಾಗೇಂದ್ರ ಅವ್ರಿಗಿದೆ. ನಾಗೇಂದ್ರ ಈಗಾಗಲೇ 2 ಬಾರಿ ಶಷಾಸಕರಾಗಿದ್ದಾರೆ. ಸರಳ ವ್ಯಕ್ತಿತ್ವ. ಕೂಡ್ಲಿಗಿ ಕ್ಷೇತ್ರದ ಮತದಾರರೊಂದಿಗೆ ಬೆರೆತ ಅನುಭವ ಇದೆ.  ನಿರಂತರ ಕ್ಷೇತ್ರಕ್ಕೆ ಭೇಟಿ ನೀಡಿ ಹೆಸರು ಗಳಿಸಿದ್ದಾರೆ. ವೈಯಕ್ತಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆನ್ನುವುದು ಇವರ ಪ್ಲಸ್​ ಪಾಯಿಂಟ್​. ಬಿಜೆಪಿ ಸರ್ಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ಮತ್ತು ತದನಂತರ ಕಾಂಗ್ರೆಸ್​ ಸರ್ಕಾರ ಅಸ್ತಿತ್ವದಲ್ಲಿದ್ದರೂ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ್ದಾರೆ.

 

 

ಹೌದು 2013ರಲ್ಲಿ ಕೂಡ್ಲಿಗಿಯಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ನಾಗೇಂದ್ರ ಅವ್ರು 71477 ಮತಗಳನ್ನು ಪಡೆಯೋದ್ರ ಮೂಲಕ ಕಾಂಗ್ರೆಸ್ ನ ವೆಂಕಟೇಶ್ ಅವ್ರನ್ನು  24,803 ಮತಗಳ ಅಂತರದಿಂದ ಸೋಲಿಸಿದ್ರು.

ಈ ಟ್ರಾಕ್ ರೆಕಾರ್ಡ್ ನೋಡಿದ್ರೆ ಸಾಕು ನಾಗೇಂದ್ರ ಅವ್ರ ಹವಾ ಏನು ಅನ್ನೋದು ಗೊತ್ತಾಗತ್ತೆ. ಹಾಗಾಗಿ ಈ ಬಾರಿ ಬಳ್ಳಾರಿ ಗ್ರಾಮಾಂತರದಿಂದ ನಿಂತ್ರೂ ಕೂಡಾ ಯಾವುದೇ ಅಡೆತಡೆಗಳಿಲ್ಲದೆ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಇಲ್ಲಿನ ಮತದಾರರು.

ಕಮಲ ಮುಡಿಯೋರ್ಯಾರು?

ಹೌದು ಸಂಸದರಾಗಿರೋ ಶ್ರೀರಾಮುಲು ಅವ್ರ ಕಾರ್ಯಕ್ಷೇತ್ರವಾಗಿತ್ತು ಬಳ್ಳಾರಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ. ಈ ಹಿಂದೆ ಶ್ರೀರಾಮುಲು 3 ಬಾರಿ ಇಲ್ಲಿಂದ ಗೆದ್ದು ಶಾಸಕರಾಗಿರೋದು ಅದಕ್ಕೆ ಉದಾಹರಣೆ. ಆದ್ರೆ ಈಗ ಬಿಜೆಪಿಯ ಸಂಸದರಾಗಿರೋ ಕಾರಣ ಮತ್ತೆ ಅವ್ರೇ ಕಣಕ್ಕಿಳಿತಾರಾ ಅನ್ನೋದನ್ನು ಹೈಕಮಾಂಡ್ ನಿರ್ಧರಿಸಬೇಕಿದೆ. ಒಂದ್ವೇಳೆ ನಿಂತ್ರೆ ನಾಗೇಂದ್ರ ಅವ್ರಿಗೆ ಟಫ್ ಫೈಟ್ ಕೊಡಬಹುದು. ಯಾಕಂದ್ರೆ ಈಗಾಗಲೇ ರಾಮುಲು ಪಕ್ಷ ಬಿಟ್ಟು ಹೋಗಿರೋದು, ಹೊಸ ಪಕ್ಷ ಕಟ್ಟಿರೋದು ಮತ್ತೆ ಆ ಪಕ್ಷವನ್ನು ಬಿಟ್ಟು ಬಿಜೆಪಿಗೆ ಬಂದಿರೋದು ಎಂಪಿ ಆಗಿರೋದು ಇವ್ರ ಈ ರೀತಿಯ ವರ್ತನೆಯಿಂದ ಇಲ್ಲಿನ ಜನ ಇವ್ರ ಬಗ್ಗೆ ಅಷ್ಟೊಂದು ಒಳ್ಳಎ ಅಭಿಪ್ರಾಯ ಇಟ್ಕೊಂಡಿಲ್ಲ.

ಒಂದ್ವೇಳೆ ಶ್ರೀರಾಮುಲು  ಅವ್ರಿಗೆ ಹೈ ಕಮಾಂಡ್ ಟಿಕೆಟ್ ಕೊಟ್ಟಿಲ್ಲಾಂದ್ರೆ ಮಾಜಿ ಸಂಸದರಾಗಿರೋ ಸಣ್ಣ ಫಕೀರಪ್ಪ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಪಕ್ಕಾ. ಈಗಾಗಲೇ ಬಿಜೆಪಿ ಅವರನ್ನು ನಿಯೋಜಿತ ಅಭ್ಯರ್ಥಿ ಎಂದು ಘೋಷಣೆ ಕೂಡಾ  ಮಾಡಿದೆ. ಸಂಸದ ಶ್ರೀರಾಮುಲು ನೇತೃತ್ವದಲ್ಲಿ ಕೆಲವು ಕಡೆಗಳಲ್ಲಿ ಸಣ್ಣಫಕೀರಪ್ಪ ಪ್ರಚಾರ ಕೂಡ ಮಾಡ್ತಾ ಬಂದಿದ್ದಾರೆ. ಹಾಗಾಗಿ ಬಹುತೇಕ ನಾಗೇಂದ್ರ ಅವ್ರ ಎದುರಾಳಿಯಾಗಿ ಸಣ್ಣ ಫಕೀರಪ್ಪ ನಿಲ್ಲೋದು ಗ್ಯಾರಂಟಿ ಅನ್ನಿಸ್ತಿದೆ. ಆದ್ರೆ ರಾಯಚೂರು ಲೋಕಸಭಾ ಸದಸ್ಯರಾಗಿ ಯಾವ ಮೈಲುಗಲ್ಲು ಸ್ಥಾಪಿಸುವಂತಹ ಕೆಲಸ ಮಾಡದ ಸಣ್ಣಫಕೀರಪ್ಪ ಕೇವಲ ಮಾಜಿ ಸಂಸದ ಎಂಬ ಕಾರಣಕ್ಕೆ ಓಟು ಕೇಳಬೇಕಷ್ಟೆ. ಈ ಕ್ಷೇತ್ರದಲ್ಲೀಗ ಸಂಸದ ಶ್ರೀರಾಮುಲು ಅವರ ಚರಿಷ್ಮಾ ಕೂಡ ಉಳಿದಿಲ್ಲ. ಹಾಗೊಂದು ವೇಳೆ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಥವಾ ಶ್ರೀರಾಮುಲು ಪರ ಅಲೆ ಇದ್ದಿದ್ದರೆ ಶ್ರೀರಾಮುಲು ಅವರ ಕುಟುಂಬದಿಂದಲೇ ಯಾರಾದರೂ ಸ್ಪರ್ಧೆ ಮಾಡುತ್ತಿದ್ದರು. ಆದರೆ ಸಣ್ಣಫಕೀರಪ್ಪ ಅವರನ್ನು ನಿಯೋಜಿತ ಅಭ್ಯರ್ಥಿ ಎಂದು ಘೋಷಿಸುವುದರಲ್ಲೇ ಬಿಜೆಪಿ ಒಳಗೊಳಗೆ ಈ ಕ್ಷೇತ್ರ ತನಗೆ ದಕ್ಕಲ್ಲ ಎಂಬ ತೀರ್ಮಾನಕ್ಕೆ ಬಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಬಳ್ಳಾರಿಯ ಹಾಲಿ ಸಂಸದ ಶ್ರೀರಾಮುಲು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ 2014 ರಲ್ಲಿ ಉಪಚುನಾವಣೆ ನಡೆಯಿತು. ಈ ಸಂದರ್ಭ ಸರ್ಕಾರ ಈ ಕ್ಷೇತ್ರದ ಫಲಿತಾಂಶವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರಿಂದ ವಿಶೇಷ ಪ್ಯಾಕೇಜ್​ ನೀಡುವುದಾಗಿ ಮೊದಲೇ ಭರವಸೆ ನೀಡಲಾಗಿತ್ತು. ಅದರಂತೆಯೇ ಗೋಪಾಲಕೃಷ್ಣ ಗೆದ್ದ ನಂತರ ಸರ್ಕಾರ ಎಲ್ಲಾ ಇಲಾಖೆಗಳೂ ಸೇರಿದಂತೆ 240 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್​ ಅನ್ನು ನೀಡಿತು. ಹಾಗೆ ನೋಡಿದರೆ ಬಳ್ಳಾರಿ ಜಿಲ್ಲೆಯ ಪೈಕಿ ವಿಶೇಷ ಪ್ಯಾಕೇಜ್​ ಪಡೆದ ಏಕೈಕ ಕ್ಷೇತ್ರ ಬಳ್ಳಾರಿ ಗ್ರಾಮೀಣ ಕ್ಷೇತ್ರ. ಅದರಲ್ಲು ಎಸ್​ಸಿ ಎಸ್​ಟಿ ಇತರೆ ಹಿಂದುಳಿದ ವರ್ಗಗಳಿಗಾಗಿ ಇರುವ ಯೋಜನೆಗಳನ್ನು ನೂರಕ್ಕೆ ನೂರು ತಲುಪಿಸುವ ರೀತಿಯಲ್ಲಿ ಅನುದಾನ ಮಂಜೂರು ಮಾಡಲಾಯಿತು. ಹೀಗಾಗಿ ನೀಡಿದ ಭರವಸೆಗಳ ಪೈಕಿ ಏಕಡಾ 90 ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲುತ್ತಾರೆಂಬ ವಾತಾವರಣ ಇದೆ.  ಅದು ಈ ಬಾರಿ ನಾಗೇಂದ್ರ ಅವ್ರಿಗೆ ಪ್ಲಸ್ ಪಾಯಿಂಟ್

ಶಾಸಕ ನಾಗೇಂದ್ರ ಅವ್ರು 2008ರಲ್ಲಿ ಬಳ್ಳಾರಿ ಗ್ರಾಮಾಂತರದಿಂದ ಬಿಜೆಪಿಯಿಂದ ಕಣಕ್ಕಿಳಿಯಲು ಸರ್ವ ಪ್ರಯತ್ನ ಮಾಡಿದ್ರೂ ಕೂಡಾ ಬಿಜೆಪಿಯ ಗಣಿಧಣಿಗಳು ಅದಕ್ಕೆ ಅವಕಾಶ ಕೊಡದೆ ಅವ್ರನ್ನು ಕೂಡ್ಲಿಗಿಗೆ ಸಾಗಹಾಕಿದ್ರು. ಆದ್ರೆ ಅಲ್ಲಿ 2 ಬಾರಿ ಗೆಲ್ಲೋದ್ರ  ಮೂಲಕ ತಾನು ಏನು ಅನ್ನೋದನ್ನು ತೋರಿಸಿಕೊಟ್ಟ ನಾಗೇಂದ್ರ ಈ ಬಾರಿ ಕಾಂಗ್ರೆಸ್ ಸೇರಿ ಬಿಜೆಪಿ ಹಾಗೂ ಗಣಿ ಧಣಿಗಳ ವಿರುದ್ಧ ತೊಡೆ ತಟ್ಟಿದ್ದಾರೆ.ನಿಮ್ ಜತೆ ಇದ್ದಾಗ ಟಿಕೆಟ್ ಕೊಡಿಸ್ಲಿಲ್ಲ ಆದ್ರೆ ಕಾಂಗ್ರೆಸ್ ನಿಂದ ಟಿಕೆಟ್ ಪಡೆದಿದ್ದೀನಿ ಇಲ್ಲಿ ಗೆದ್ದು ತೋರಿಸ್ತೀನಿ ಅನ್ನೋ ಸವಾಲು ಹಾಕಿದ್ದಾರೆ.  ಈಗಾಗಲೇ ಸರ್ಕಾರ ಬಳ್ಳಾರಿ ಗ್ರಾಮಾಂತರಕ್ಕೆ ಬೇಕು ಬೇಕಾದ ಸವಲತ್ತುಗಳನ್ನು, ಅನುದಾನವನ್ನು ಕೊಟ್ಟಿರೋ ಕಾರಣ ಇಲ್ಲಿನ ಮತದಾರರು ನಾಗೇಂದ್ರ  ಅವ್ರಿಗೆ ಜೈ ಅಂತಿದ್ದಾರೆ. ಇನ್ನು ಸಂಸದ ಶ್ರೀರಾಮುಲು, ಜನಾರ್ಧನ ರೆಡ್ಡಿ ಸೇರಿದಂತೆ ಬಿಜೆಪಿ ಹವಾ ಈ ಕ್ಷೇತ್ರದಲ್ಲಿ ಕಾಣದೇ ಇರೋದು ನೋಡಿದ್ರೆ ಬಿಜೆಪಿ ಎಲೆಕ್ಷನ್ ಗೂ ಮುಂಚೆಯೇ ಕ್ಷೇತ್ರವನ್ನು ಬಿಟ್ಟು ಕೊಟ್ಟಂಗೆ ಕಾಣಿಸ್ತಿದೆ. ಕಾದು ನೋಡೋಣ ಇಲ್ಲಿನ ಮತದಾರರು ಈ ಬಾರಿ ಯಾರನ್ನು ಗೆಲ್ಲಿಸ್ತಾರೆ ಯಾರನ್ನು ಮನೆಗೆ ಕಳುಹಿಸ್ತಾರೆ ಅನ್ನೋದನ್ನು.