ಮಂಡ್ಯದಿಂದ ಕಣಕ್ಕಿಳಿತಾರಾ ದೇವೆಗೌಡರ ಮತ್ತೊಬ್ಬ ಪುತ್ರ? – ಏನಂದ್ರು ಎಚ್.ಡಿ.ರಮೇಶ್?

ರಾಜ್ಯ ರಾಜಕಾರಣದಷ್ಟೇ ಸೂಕ್ಷ್ಮವಾಗಿರೋದು ಮಾಜಿ ಪ್ರಧಾನಿ ದೇವೆಗೌಡರ್​​ ಕುಟುಂಬದ ರಾಜಕಾರಣ. ಹೌದು 2018 ರ ಚುನಾವಣೆಗೆ ಮಾಜಿ ಪ್ರಧಾನಿ ದೇವೆಗೌಡರ್​ ಕುಟುಂಬದಿಂದ ಎಷ್ಟು ಜನ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.

ad

ಈಗಾಗಲೇ ನಾಲ್ವರು ಸ್ಪರ್ಧಿಸುತ್ತಾರೆ ಅನ್ನೋ ಮಾತು ಕೇಳಿ ಬಂದಿರುವ ಬೆನ್ನಲ್ಲೆ ಈ ಸಂಖ್ಯೆ 5 ಕ್ಕೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಅದ್ಯಾರು ಐದನೇ ಅಭ್ಯರ್ಥಿ ಅಂದ್ರೆ ಈ ಸುದ್ದಿ ನೋಡಿ. ಮಾಜಿ ಪ್ರಧಾನಿ ದೇವೆಗೌಡರ್​ ಕುಟುಂಬದಿಂದ ನಾಲ್ವರು ಕಣಕ್ಕಿಳಿತಾರೆ. ಜೆಡಿಎಸ್​ ಅಧಿಕಾರಕ್ಕೆ ಬಂದಲ್ಲಿ ಪ್ರಮುಖ ಖಾತೆಗಳೆಲ್ಲ ಮಾಜಿಪ್ರಧಾನಿ ಕುಟುಂಬದ ಪಾಲಾಗುತ್ತೆ ಅನ್ನೋ ಆರೋಪಗಳು ಜೋರಾಗಿ ಕೇಳಿ ಬರುತ್ತಿದೆ. ಈ ಮಧ್ಯೆ ರಾಜಕೀಯ ಸಭೆ ಸಮಾರಂಭದಲ್ಲೆಲ್ಲ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಕುಟುಂಬದಿಂದ ಇಬ್ಬರೇ ಕಣಕ್ಕಿಳಿಯೋದು ಎಂಬುದನ್ನು ಪುನರುಚ್ಚಿಸುತ್ತಲೇ ಇದ್ದಾರೆ.

ಹೀಗಿರುವಾಗಲೇ ದೇವೆಗೌಡರ್​ ಮತ್ತೊಬ್ಬ ಪುತ್ರ ಎಚ್.ಡಿ.ರಮೇಶ್​ ಮಂಡ್ಯದ ರಾಜಕೀಯ ಅಖಾಡದಲ್ಲಿ ಸಕ್ರಿಯವಾಗಿದ್ದು ಹಲವು ಅನುಮಾನ ಮೂಡಿಸಿದೆ. ಮಂಡ್ಯದ ಜೆಡಿಎಸ್​ ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದ ಹೆಚ್​.ಡಿ.ರಮೇಶ್​ ಟಿಕೆಟ್​ ಆಕಾಂಕ್ಷಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇದು ಮಂಡ್ಯದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಎಚ್.ಡಿ.ರಮೇಶ್​ ಕೂಡ ಕಣಕ್ಕಿಳಿತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್​, ನಾನಂತೂ ಚುನಾವಣೆಗೆ ಸ್ಪರ್ಧಿಸಲ್ಲ. ಕುಮಾರಣ್ಣ ಹೇಳಿರುವಂತೆ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧೆ ಮಾಡ್ತಾರೆ ಅಂತಾ ಸ್ಪಷ್ಟಪಡಿಸಿದ್ದಾರೆ.