ಮಾಮೂಲಿಗಾಗಿ ಕಳ್ಳರಂತೆ ಕಿತ್ತಾಡಿಕೊಂಡ ಪೊಲೀಸರು.

ಜನರಿಗೆ ರಕ್ಷಣೆ ನೀಡಿ, ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕಾದ ಪೊಲೀಸರೇ ಪೊಲೀಸ್ ಠಾಣೆಯಲ್ಲಿ ಪಕ್ಕಾ ರೌಡಿಗಳಂತೆ ಕೈ-ಕೈ ಮಿಲಾಯಿಸುವಂತೆ ಜಗಳವಾಡಿದ ಘಟನೆ ನಿನ್ನೆ ಬೆಂಗಳೂರು ಹೊರವಲಯದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಂದರ್-ಬಾಹರ್ ಅಡ್ಡೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಹಣ ಹಂಚಿಕೊಳ್ಳುವ ವಿಚಾರಕ್ಕೆ ಜಗಳ ನಡೆದಿದೇ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಡಿಸಿಪಿ ಓರ್ವ ಎಎಸ್​ಐ ಮತ್ತು ಓರ್ವ ಹೆಡ್​ ಕಾನ್ಸಟೇಬಲ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

adನಿನ್ನೆ ಸಂಜೆ ವೇಳೆಗೆ ಮಹದೇವಪುರ ವ್ಯಾಪ್ತಿಯ ನಾರಾಯಣಪುರದಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಅಡ್ಡೆ ಮೇಲೆ ಎಎಸ್​ಐ ಅಮೃತೇಶ್ ಹಾಗೂ ಮುಖ್ಯಪೇದೆ ಜಯಕಿರಣ ದಾಳಿ ನಡೆಸಿದ್ದು, ದಾಳಿ ವೇಳೆ 10 ಜನರನ್ನು ಬಂಧಿಸಿ 42 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದರು. ಆದರೇ ಪೊಲೀಸ್ ಠಾಣೆಗೆ ಆರೋಪಿಗಳನ್ನು ಕರೆತಂದ ಅಮೃತೇಶ್​ ಮತ್ತು ಜಯಕಿರಣ ಸಂಜೆ 8 ಗಂಟೆ ವೇಳೆಗೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನು ಪ್ರಶ್ನಿಸಿದ ಠಾಣೆಯ ಸಬ್​ ಇನ್ಸಪೆಕ್ಟರ್ ಅಶ್ವತ್ಥ ಅವರೊಂದಿಗೆ ಜಗಳಕ್ಕಿಳಿದ ಎಎಸ್​ಐ ಮತ್ತು ಮುಖ್ಯಪೇದೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವಾಡಿದ್ದಾರೆ. ಬಳಿಕ ಪಿಎಸ್​ಐ ಅಶ್ವತ್ಥ ಇವರಿಬ್ಬರ ವರ್ತನೆ ಕುರಿತು ಠಾಣೆಯ ಡೈರಿಯಲ್ಲಿ ನಮೂದಿಸಿ ಡಿಸಿಪಿ ಗಮನಕ್ಕೆ ತಂದಿದ್ದಾರೆ. ಮಾಹಿತಿ ಪಡೆದ ಡಿಸಿಪಿ ಅಬ್ದುಲ್ ಅಹದ್ ಎಎಸ್​​ಐ ಅಮೃತೇಶ್ ಮತ್ತು ಎಚ್​ಸಿ ಜಯಕಿರಣರನ್ನು ಅಮಾನತುಗೊಳಿಸಿದ್ದು, ಪ್ರಕರಣವನ್ನು ಮಾರತಹಳ್ಳಿ ಎಸಿಪಿಯವರಿಗೆ ಹೆಚ್ಚಿನ ತನಿಖೆಗೆ ವಹಿಸಿದ್ದಾರೆ. ಒಟ್ಟಿನಲ್ಲಿ ನ್ಯಾಯಕಾಪಾಡಬೇಕಾದ ಪೊಲೀಸ್ ಠಾಣೆಯಲ್ಲೇ ಪೊಲೀಸರೇ ಸಮವಸ್ತ್ರದಲ್ಲಿ ಕಳ್ಳರಂತೆ ಕಿತ್ತಾಡಿಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.