ಅನ್ಯಭಾಷೆಯ ನಾಮಫಲಕಕ್ಕೆ ಮಸಿ- ಕನ್ನಡ ಕಸ್ತೂರಿ ಸಂಘಟನೆಯ ಹೋರಾಟ.

ಉದ್ಯಾನನಗರಿ ಬೆಂಗಳೂರಿನಲ್ಲಿ ಕನ್ನಡಕ್ಕಿಂತಲೂ ಅನ್ಯಭಾಷೆಯ ಹಾವಳಿ ಹೆಚ್ಚಿದೆ. ರಾಜ್ಯೋತ್ಸವದ ಅಂಗವಾಗಿ ಬೆಂಗಳೂರು ನಿವಾಸಿಗಳಲ್ಲಿ ಹಾಗೂ ಅಂಗಡಿಕಾರರಲ್ಲಿ ಕನ್ನಡ ಪ್ರೇಮ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕನ್ನಡೇತರ ನಾಮಫಲಕಗಳಿಗೆ ಮಸಿ ಬಳಿಯುವ ಅಭಿಯಾನ ಆರಂಭಿಸಿದೆ.


ನಗರದ ಬ್ರಿಗೇಡ್ ರಸ್ತೆಯಲ್ಲಿ ಅಭಿಯಾನ ಆರಂಭಿಸಿದ ಕಾರ್ಯಕರ್ತರು ಆಂಗ್ಲ ನಾಮ ಫಲಕಗಳಿಗೆ ಮಸಿ ಬಳಿಯಲು ಆರಂಭಿಸಿದರು. ಈ ವೇಳೆ ಮಸಿ ಬಳಿಯಲು ಯತ್ನಿಸಿದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಕಸ್ತೂರಿ ಸಂಘಟನೆಯ ಬೆಂಗಳೂರು ಘಟಕದ ಉಪಾಧ್ಯಕ್ಷೆ ಮೀನಾ ಪೊಲೀಸ್ ವಾಹನದ ಎದುರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಪೊಲೀಸರ ಆಕೆಯನ್ನು ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದು, ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ನಿಲೇಶ್ ಗೌಡ್, ಕನ್ನಡ ಭಾಷೆ ಮೇಲೆ ಅನ್ಯ ಭಾಷಿಗರ ದಬ್ಬಾಳಿಕೆ ಹೆಚ್ಚಿದೆ. ಹೀಗಾಗಿ ಈ ಭಾರಿ ನ.೩೦ ರ ವರೆಗೂ ರಾಜಧಾನಿಯಲ್ಲಿ ಕನ್ನಡೇತರ ನಾಮ ಫಲಕಗಳಿಗೆ ಮಸಿ ಬಳಿಯುವ ಕೆಲಸ ಹಮ್ಮಿಕೊಂಡಿದ್ದೀವಿ. ಒಂದು ತಿಂಗಳು ಇದಕ್ಕಾಗಿಯೇ ಹೋರಾಟ ಮಾಡ್ತಿವಿ ಎಂದರು.