ಶಿವರಾತ್ರಿಯ ದಿನ “ಶಂಭೋ ಶಂಕರ”ನನ್ನು ನೆನೆದು ಪುನೀತರಾದ ಭಕ್ತಾದಿಗಳು..

ಇಂದು ದೇಶಾದ್ಯಂತ ಶಿವರಾತ್ರಿ ಹಬ್ಬ.. ಕೈಲಾಸವಾಸಿ ಪರಶಿವನನ್ನು ಕೋಟಿ ಕೋಟಿ ಜನ ಭಜಿಸಿ ಪೂಜಿಸುವ ದಿನ.ಶಿವರಾತ್ರಿ ಶಿವ ಭಕ್ತರ ಪಾಲಿಗೆ ಅತ್ಯಂತ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ …

ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿಯನ್ನು ಮಾಘ ಮಾಸದ ಬಹುಳ ಚತುರ್ದಶಿಯ ದಿನದಂದು ಆಚರಿಸಲಾಗುತ್ತದೆ. ಶಿವರಾತ್ರಿಯ ದಿನದಂದು ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಕೋಟ್ಯಾನುಕೋಟಿ ಭಕ್ತರ ದಂಡೇ ಹರಿದು ಬರುತ್ತೆ. ಉತ್ತರ ಪ್ರದೇಶದ ಕಾಶಿ ವಿಶ್ವನಾಥ, ಮಧ್ಯಪ್ರದೇಶದ ಉಜ್ಜಯನಿ, ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ , ಗುಜರಾತ್​​​ನ ಸೋಮನಾಥ ಸನ್ನಿಧಿ ಸೇರಿದಂತೆ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಶಿವ ವೈಭವ ಮನೆ ಮಾಡಿದ್ದು. ಮುಂಜಾನೆಯಿಂದಲೇ ಕೈಲಾಸ ವಾಸನಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ.