ಪುಂಡರ​ ಮೀಸೆ-ಕೂದಲಿಗೆ ಪೊಲೀಸರಿಂದ್ಲೇ ಬಿತ್ತು ಕತ್ತರಿ- ಕೋಲಾರದಲ್ಲೊಂದು ವಿಭಿನ್ನ ಪ್ರಯತ್ನ!

 

ಸ್ಟೈಲಿಷ್ ಗಡ್ಡದಾರಿ ಯುವಕರಿಗೆ ಪೊಲೀಸರಿಂದ ಬಿತ್ತು ಕತ್ತರಿ. ಹೌದು ಚಿತ್ರವಿಚಿತ್ರ ಗಡ್ಡ ತಲೆಗೂದಲು ಬಿಟ್ಟ ಓಡಾಡುವ ಯುವಕರನ್ನು ಪೋಲಿಸರು ಕರೆತಂದು ಶೇವ್​, ಹೇರ್​ಕಟ್ ಮಾಡಿಸಿ ಯುವಕರಲ್ಲಿ ಶಿಸ್ತಿನ ಅರಿವು ಮೂಡಿಸುವ ವಿಶಿಷ್ಟ ಕೆಲಸವನ್ನು ಮಾಲೂರು ಪೋಲಿಸರು ಮಾಡಿ ಸುದ್ದಿಯಾಗಿದ್ದಾರೆ.

ಮಾಲೂರು ಠಾಣೆಯ ಪಿಎಸ್​ಐ ಮುರಳಿ ಎಂಬುವವರು ಸ್ವಂತ ಹಣ ನೀಡಿ ಯುವಕರಿಗೆ ಹೇರ್ ಕಟ್ ಮಾಡಿಸಿ ಯುವಕರಲ್ಲಿ ಶಿಸ್ತಿನ ಪಾಠ ಹೇಳಿಕೊಟ್ಟಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕಳೆದ ಗುರುವಾರ ಶಾಲೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ರಕ್ಷಿತಾ ಎಂಬ 15 ವರ್ಷದ ಬಾಲಕಿಯನ್ನು ಸುರೇಶ್​ಬಾಬು ಎಂಬ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ. ಇನ್ನೂ ಅಮಾಯಕ ಬಾಲಕಿಯ ಹತ್ಯೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು.

 

ಬಾಲಕಿ ಹತ್ಯೆ ಖಂಡಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಪ್ರಕರಣದಿಂದ ಪೋಲಿಸ್ ಇಲಾಖೆ ಸಾರ್ವಜನಿಕರಿಂದ ಮುಖಭಂಗಕ್ಕೆ ಒಳಗಾಗಿತ್ತು. ಬಾಲಕಿ ಹತ್ಯೆ ಪ್ರಕರಣ ನಂತರ ಎಚ್ಚೇತ ಪೋಲಿಸ್ ಇಲಾಖೆ ಪುಂಡಪೋಕರಿಗಳನ್ನು ಮಟ್ಟಹಾಕಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ರೋಡ್​ರೋಮಿಯೋ, ಬೈಕ್ ವಿಲೀಂಗ್ ಮಾಡುವವರು, ಚಿತ್ರವಿಚಿತ್ರ ಗಡ್ಡತಲೆಗೂದಲು ಬಿಟ್ಟ ಯುವಕರನ್ನು ಪತ್ತೆಹಚ್ಚಿ ಶಿಸ್ತಿನ ಪಾಠ ಕಲಿಸುತ್ತಿದ್ದಾರೆ ಮಾಲೂರು ಪೋಲಿಸರು. ಇನ್ನೂ ಪೋಲಿಸರು ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.