ಸರ್ವೇ ಜನಾಃ ಸುಖಿನೋ ಭವಂತು !! ಇದು ಪ್ರಧಾನಿ ನರೇಂದ್ರ ಮೋದಿ ಬಜೆಟ್ ಸೂತ್ರ !!

ಕೇಂದ್ರ ಸರಕಾರವು ಸರ್ವೇ ಜನಃ ಸುಖಿನೋ ಭವಂತುಃ ಸೂತ್ರದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಬಜೆಟ್ ಮಂಡಿಸಿದ ಕೇಂದ್ರ ಆರ್ಥಿಕ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

1ನೇ ತರಗತಿಯಿಂದ 12ನೇ ತರಗತಿವರೆಗೆ ಏಕ ರೂಪದ ಶಿಕ್ಷಣ ನೀತಿ ಜಾರಿಗೆ ಕೇಂದ್ರ ಸರಕಾರ ಬಜೆಟ್ ನಲ್ಲಿ ಆದೇಶ ನೀಡಿದೆ.ಅಂತರ್ಜಲ ಅಭಿವೃದ್ಧಿಗೆ 2600 ಕೋಟಿ ರೂಪಾಯಿ, ಆದಿವಾಸಿಗಳಿಗೆ ಏಕಲವ್ಯ ಶಾಲೆ, 20 ಲಕ್ಷ ಮಕ್ಕಳನ್ನು ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. 10 ಕೋಟಿ ಬಡವರ ಆರೋಗ್ಯ ದೃಷ್ಟಿಯಿಂದ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ, ಪ್ರತಿ ಕುಟುಂಬಕ್ಕೆ 5 ಲಕ್ಷ ವೈದ್ಯಕೀಯ ಖರ್ಚು ಕೇಂದ್ರ ಸರಕಾರ ಭರಿಸುತ್ತಿದ್ದು 50 ಕೋಟಿ ಮಂದಿಗೆ ಇದರಿಂದ ಲಾಭ ಪಡೆಯಲಿದ್ದಾರೆ. ಟಿಬಿ ರೋಗದ ನಿಯಂತ್ರಣಕ್ಕಾಗಿ ಪೌಷ್ಠಿಕ ಆಹಾರ ಒದಗಿಸಲು 600 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ದೇಶದ 24 ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆ.

ಜನಧನ್​ ಖಾತೆ ಹೊಂದಿರುವವರಿಗೆ ವಿಮಾ ಖಾತ್ರಿಯ ಆಲೋಚನೆ ಇದೆ. ದಲಿತ ಸಮುದಾಯದ ಕಲ್ಯಾಣಕ್ಕಾಗಿ 52,719 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದು, ಪರಿಶಿಷ್ಟ ಪಂಗಡಕ್ಕೆ 39 135 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ದೇಶದ ಜನರಿಗೆ ಜಿಎಸ್​ಟಿ ಲಾಭ ತಲುಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸಾಲ ನೀಡಿಕೆ ಮತ್ತು ಪ್ರಕ್ರಿಯೆಯ ಸರಳೀಕರಣ ಮಾಡಲಾಗಿದೆ. 2018-19ರಲ್ಲಿ ಮುದ್ರಾ ಯೋಜನೆಯಡಿ 3 ಲಕ್ಷ ಕೋಟಿ ಸಾಲ ನೀಡಿಕೆ ಗುರಿ ಹೊಂದಿದ್ದು, 2020ರ ವೇಳೆಗೆ 50 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಬಜೆಟ್ ನಲ್ಲಿ ಹೇಳಲಾಗಿದೆ.