ಹೆಂಡತಿ ಸೀಮಂತ ಮುಗಿಸಿ ಗಡಿಕಾಯಲು ಹೋದ ಯೋಧ ಹುತಾತ್ಮ- ಇದು ಮನಕಲಕುವ ವ್ಯಥೆ!!

ಹಾಸನದ ವೀರಯೋಧ ಚಂದ್ರು ಕಳೆದ ನಾಲ್ಕು ವರ್ಷಗಳಿಂದ ದೇಶ ಕಾಯುವ ಕೆಲಸ ಮಾಡುತ್ತಿದ್ದ. ಈ ನಡುವೆ ಹುಟ್ಟೂರಲ್ಲಿ ಬಹುದಿನಗಳ ಮನೆ ಕಟ್ಟುವ ಕನಸು ನನಸಾದ ನಂತರ, ಕೆಲವೇ ದಿನಗಳಲ್ಲಿ ಕಂದನನ್ನು ಕಾಣುವ ಮಹದಾಸೆ ಇಟ್ಟುಕೊಂಡಿದ್ದ.

ಆದರೆ ಮನೆ ಮಂದಿಗೆಲ್ಲಾ ಸಾಕ್ಷಾತ್ ಬೆಳಕಾಗಬೇಕಿದ್ದ ಚಂದ್ರನೀಗ ಶಾಶ್ವತ ಕತ್ತಲ ಮನೆ ಸೇರಿರೋದು ವೀರಯೋಧನ ಪತ್ನಿ ಪೃಥ್ವಿ ಸೇರಿದಂತೆ ಮನೆ ಮಂದಿಗೆಲ್ಲ ಅರಗಿಸಿಕೊಳ್ಳಲು ಸಾಧ್ಯವೇ ಆಗ್ತಿಲ್ಲ. ಚಂದ್ರನಿಲ್ಲದ ಮನೆಯಲ್ಲೀಗ ಬರೀಮೌನ, ಕಣ್ಣೀರು ತರಿಸುವ ಆಕ್ರಂದನ ಮಾತ್ರ ಕೇಳಿಬರ್ತಿದೆ. ಹೌದು ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಹರದೂರು ಗ್ರಾಮದ ಸ್ವಾಮಿಗೌಡ-ಕಾಳಮ್ಮ ಮನೆಯಲ್ಲಿ ಮಾರ್ಚ್ 8 ರಂದು ನಡೆದಿದ್ದ ಗೃಹ ಪ್ರವೇಶ ಸಂಭ್ರಮ ಮಾಸುವ ಮುನ್ನವೇ ಸಾವಿನ ಬರಸಿಡಿಲು ಬಡಿದಿದೆ. ಮೊನ್ನೆ ಛತ್ತೀಸ್ಘಡದ ಸುಖ್ಮಾ ಎಂಬಲ್ಲಿ ನಕ್ಸಲರ ದಾಳಿಗೆ ಬಲಿಯಾದ ವೀರಯೋಧ ಚಂದ್ರನ ದುರಂತ ಸಾವು, ಊರು-ಮನೆಯನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.

ಚಂದ್ರು 4 ವರ್ಷಗಳ ಹಿಂದೆಯಷ್ಟೇ ಸಿಆರ್ಪಿಎಫ್ ಯೋಧನಾಗಿ ದೇಶ ಕಾಯುವ ಕೆಲಸಕ್ಕೆ ಸೇರಿದ್ದ. ವರ್ಷದ ಹಿಂದಷ್ಟೇ ತನ್ನದ ದೂರದ ಸಂಬಂಧಿಯಾಗಿದ್ದ ಪಕ್ಕದ ಮಾರಗೌಡನಹಳ್ಳಿಯ ಪೃಥ್ವಿ ಎಂಬಾಕೆಯೊಂದಿಗೆ ಹೊಸ ಜೀವನವನ್ನೂ ಆರಂಭಿಸಿದ್ದ. ಕಳೆದ ಫೆಬ್ರವರಿ 17ರಂದು ರಜೆ ಮೇಲೆ ಊರಿಗೆ ಬಂದಿದ್ದ ಚಂದ್ರು, 18ರಂದು ಪತ್ನಿಗೆ ಸೀಮಂತ ಮಾಡಿ ನಗುನಗುತ್ತಾ ತವರೂರಿಗೆ ಕಳಿಸಿಕೊಟ್ಟಿದ್ದ. ತಂದೆ ಸ್ವಾಮಿಗೌಡ ಮೂವರು ಮಕ್ಕಳಿಗೂ 3 ಮನೆ ಕಟ್ಟಿಸಿದ್ದಾರೆ. ಮೂರು ಮನೆಯ ಗೃಹಪ್ರವೇಶ ಒಟ್ಟಿಗೆ ಮಾಡಿದ್ರೆ 3 ಕಳಶಗಳಾಗುತ್ತವೆ ಅನ್ನೋ ಕಾರಣಕ್ಕೆ 2 ಮನೆಗಳ ಗೃಹ ಪ್ರವೇಶ ಕಾರ್ಯವನ್ನಷ್ಟೇ ಮಾರ್ಚ್ 8ರಂದು ಮಾಡಲಾಗಿತ್ತು.

ಚಂದ್ರುಗೆ ಸೇರಿದ ಮನೆಯ ಗೃಹ ಪ್ರವೇಶ ಶುಭಕಾರ್ಯವನ್ನು ಮುಂದೂಡಲಾಗಿತ್ತು. ಮಗ ಇಲ್ಲವೇ ಮಗಳು ಹುಟ್ಟಿದ ನಂತರ ಊರಿಗೆ ಬರುತ್ತೇನೆ. ಆಗ ಹೊಸ ಮನೆ ಗೃಹಪ್ರವೇಶ ಕಾರ್ಯವನ್ನ ಹೊಸ ಅತಿಥಿಯೊಂದಿಗೆ ಮಾಡಿದರಾಯಿತು ಎಂದು ಹೇಳಿ ದೇಶ ಕಾಯಲು ಮಾರ್ಚ್ 11ರಂದು ಚಂದ್ರು ಹೋಗಿದ್ದರು. ಚಂದ್ರು ಕಷ್ಟದಿಂದ ಬೆಳೆದು ಬಂದವನು. ಮನೆಯವರ ವಿರೋಧದ ನಡುವೆಯೂ ದೇಶ ಸೇವೆ ಮಾಡಬೇಕು ಎಂಬ ಮಹದಾಸೆಯಿಂದ ಸೇನೆಗೆ ಸೇರಿದ್ದರು. ಭವಿಷ್ಯದಲ್ಲಿ ಮತ್ತಷ್ಟು ಸೇವೆಯ ಜೊತೆಗೆ, ನಂಬಿದವರಿಗೆ ಏನಾದ್ರೂ ಮಾಡಬೇಕು ಎಂದು ಸದಾ ತುಡಿಯುತ್ತಿದ್ದ ಚಂದ್ರು, ಈಗ ಶಾಶ್ವತವಾಗಿ ಕಣ್ಮರೆಯಾಗಿರುವುದು ಸಂಬಂಧಿಕರನನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.

ಯೋಧನ ಪತ್ನಿ ಪೃಥ್ವಿ 8 ತಿಂಗಳ ಗರ್ಭಿಣಿ ಅನ್ನೋ ಕಾರಣಕ್ಕೆ ಇವತ್ತಿನವರೆಗೂ ಗಂಡ ಇನ್ನಿಲ್ಲ ಅನ್ನೋ ವಿಷಯವನ್ನು ಈವರೆಗೂ ತಿಳಿಸಿಲ್ಲ. ಆದ್ರೆ ಇಂದು ತನ್ನ ಪಾರ್ಥೀವ ಶರೀರವನ್ನ ನೋಡಿದಾಕೆಯ ಸಂಕಟ ಹೇಳತೀರದಾಗಿತ್ತು. ಗರ್ಭದಲ್ಲಿ ಕಂದಮ್ಮನನ್ನ ಕಟ್ಟಿಕೊಂಡು ಮುಂದಿನ ತನ್ನ ಬಾಳಲ್ಲಿ ಬೆಳಕಾಗಬೇಕಿದ್ದ ಚಂದ್ರನಿಲ್ಲ ಅಂತಾ ಆ ತಾಯಿ ಎದುರಿಸ್ತಿರೋ ಆ ನೋವು ಅಂತಿಂಥದಲ್ಲ. ಸದ್ಯದಲ್ಲೇ ಕರುಳ ಕುಡಿ ನೋಡಲು ದೂರದೂರಿಂದ ನನ್ನ ಪತಿ, ದೇಶದ ಹೆಮ್ಮೆಯ ಪುತ್ರ ಬರುತ್ತಾನೆ ಅಂತಾ ದಾರಿ ಕಾಯ್ತ್ತಿದ್ದ ಹೆಣ್ಣು ಮಗಳಿಗೆ ಕಣ್ಣೀರೇ ಗತಿಯಾಗಿರುವುದು ನಿಜಕ್ಕೂ ದುರಂತವೇ ಸರಿ. ದೇಶಕಾಯಲು ಹೋಗಿ ಜೀವ ತೆತ್ತ ವೀರಯೋಧ ಚಂದ್ರುವಿಗೆ ಕೋಟಿ ಕೋಟಿ ಸಲಾಂ.