ಐಷಾರಾಮಿ ಜೀವನ ನಡೆಸುತ್ತಿರುವ ನೀರವ್ ಮೋದಿ : ಲಂಡನ್​ನಲ್ಲಿ ಪ್ರತ್ಯಕ್ಷ

ನೀರವ್​ ಮೋದಿ ಲಂಡನ್​ನ ರಸ್ತೆಯೊಂದರಲ್ಲಿ ತಿರುಗಾಡುತ್ತಿರುವುದನ್ನು ವಿಡಿಯೋ ಸಮೇತ ಬ್ರಿಟಿಷ್​ ಸುದ್ದಿಪತ್ರಿಕೆ ದಿ ಟೆಲಿಗ್ರಾಫ್​ ವರದಿ ಮಾಡಿದ್ದು ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎರಡು ನಿಮಿಷದ  ವಿಡಿಯೋ ಕ್ಲಿಪ್​ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದೆ.13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ, ನೀರವ್​ ಮೋದಿಗಾಗಿ ಕಳೆದ ಒಂದು ವರ್ಷದಿಂದ ಭಾರತೀಯ ತನಿಖೆಗಾರರು ಹುಡುಕಾಡುತ್ತಿದ್ದಾರೆ.  13 ಸಾವಿರ ಕೋಟಿ ಬ್ಯಾಂಕ್​ ವಂಚನೆಯಲ್ಲಿ ಭಾರತದ ವಾಂಟೆಡ್ ಲಿಸ್ಟ್ ನಲ್ಲಿದ್ದಾನೆ.   ಈ ವಿಡಿಯೋದಲ್ಲಿ ನೀರವ್​ ಮೋದಿ ದೊಡ್ಡದಾಗಿ ಮೀಸೆ ಬಿಟ್ಟಿದ್ದು ಪಿಂಕ್​ ಶರ್ಟ್​ ಮೇಲೆ ದುಬಾರಿ ಬೆಲೆಯ ಆಸ್ಟ್ರೀಚ್​ ಜಾಕೆಟ್​ ಧರಿಸಿದ್ದಾನೆ. ರಸ್ತೆಯಲ್ಲಿ ನಿಂತಿದ್ದ ನೀರವ್​ ಮೋದಿಯನ್ನು ವರದಿಗಾರ ನೀವು ಎಷ್ಟು ಸಮಯ ಇಲ್ಲಿ ವಾಸವಿರುತ್ತಿರಿ ಎಂಬಿತ್ಯಾದಿಯಾಗಿ ಹಲವು ಪ್ರಶ್ನೆಗಳನ್ನು ಕೇಳಿದಾಗ ಆತ ‘ಸಾರಿ ನೋ ಕಾಮೆಂಟ್​’ ಎಂದಷ್ಟೇ ಉತ್ತರಿಸಿದ್ದಾರೆ

 

ಪತ್ರಿಕೆಯು ನೀರವ್​ ಮೋದಿಯ ಬಗ್ಗೆ ಮತ್ತಷ್ಟು ಕುತೂಹಲದ ವಿಷಯಗಳನ್ನು ಬಿಚ್ಚಿಟ್ಟಿದೆ. ವಂಚನೆ ಎಸಗಿ ವಿದೇಶಕ್ಕೆ ಓಡಿಹೋಗಿರುವ ಈತ ಲಂಡನ್​ನ 56 ಕೋಟಿ ಬೆಲೆಯ ಲಕ್ಷುರಿ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದಾನೆ. ಮತ್ತು ಸೋಹೊನಲ್ಲಿ ಮತ್ತೆ ವಜ್ರದ ವ್ಯಾಪಾರ ಆರಂಭಿಸಿದ್ದಾನೆ ಎಂದು ಪತ್ರಿಕೆ ಹೇಳಿದೆ. ಪ್ರತಿದಿನ ನೀರವ್​ ಮೋದಿ ತನ್ನ ಮನೆಯಿಂದ ಆಫೀಸ್​ಗೆ ತನ್ನ ನಾಯಿಯ ಜೊತೆಗೆ ನಡೆದುಕೊಂಡೇ ಹೋಗುತ್ತಾನೆ. ನೀರವ್​ ಮೋದಿ ಬ್ರಿಟಿಷ್​ ಸರ್ಕಾರದ ವರ್ಕ್​ ಆ್ಯಂಡ್​ ಪೆನ್ಶನ್​ ವಿಭಾಗದಿಂದ ರಾಷ್ಟ್ರೀಯ ವಿಮೆ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ. ಮತ್ತು ಯುಕೆಯಲ್ಲಿ ಆನ್​ಲೈನ್​ ಬ್ಯಾಂಕ್​ ಖಾತೆಯನ್ನು ಹೊಂದಿದ್ದಾನೆ. ನೀರವ್​ ಮೋದಿ ಬಂಧನಕ್ಕೆ ಭಾರತದ ಅಧಿಕಾರಿಗಳ ಕೋರಿಕೆ ಮೇರೆಗೆ ಇಂಟರ್​ಪೋಲ್​ ಈತನ ಮೇಲೆ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ. ಆದರೂ ಈತ ಲಂಡನ್​ನಲ್ಲಿ ಐಷಾರಾಮಿಯಾಗಿ ಜೀವನ ಸಾಗಿಸುತ್ತಿದ್ದಾನೆ.