100 ಸಿಸಿ ಬೈಕ್ ಗಳ ಹಿಂಬದಿ ಸೀಟ್ ಸೇಫ್ !! ಸರಕಾರದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

100 ಸಿಸಿ ಬೈಕ್ ಗಳ ಹಿಂಬದಿ ಸೀಟುಗಳನ್ನು ರದ್ದು ಮಾಡಿದ್ದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸದ್ಯ 100 ಸಿಸಿ ಬೈಕ್ ಗಳ ಹಿಂಬದಿ ಸೀಟು ಸರಕಾರದ ಕತ್ತರಿ ಪ್ರಯೋಗದಿಂದ ಬಚಾವ್ ಆಗಿದೆ.

ad


100 ಸಿಸಿ ಬೈಕ್ ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದೇ ಸೀಟು ಇರಬೇಕು. ಎರಡು ಸೀಟು ಇದ್ದರೆ ಅಪಘಾತದ ಹಾನಿ ಹೆಚ್ಚುತ್ತದೆ ಎಂಬ ಕಾರಣಕ್ಕಾಗಿ ಹಿಂಬದಿ ಸೀಟು ರದ್ದುಗೊಳಿಸಲು ಸರಕಾರ ಮುಂದಾಗಿತ್ತು.

ಸಾರಿಗೆ ಇಲಾಖೆಯು ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989, ಸೆಕ್ಷನ್ 143/3 ಗೆ ತಿದ್ದುಪಡಿ ಮಾಡುವಂತೆ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಸೆಕ್ಷನ್ ಗೆ ತಿದ್ದುಪಡಿಯಾದ್ರೆ 100 ಸಿಸಿ ಬೈಕ್ ಗಳು ಎರಡು ಸೀಟುಗಳನ್ನು ಹೊಂದುವಂತಿಲ್ಲ.

ರಾಜ್ಯ ಸರಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಟಿವಿಎಸ್, ಹೋಂಡಾ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ಅರ್ಜಿದಾರರು ಮತ್ತು ಸರಕಾರದ ವಾದವನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಸರಕಾರದ ಆದೇಶಕ್ಕೆ ತಡೆ ನೀಡಿದೆ.