ತೂತುಕುಡಿಯಲ್ಲಿ ಗುಂಡೇಟಿಗೆ ಬಲಿಯಾದವರ ಸಂಖ್ಯೆ 11 ಕ್ಕೆ ಏರಿಕೆ- ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಸಿಎಂ ಪಳನಿಸ್ವಾಮಿ!

 

ad

ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಪೊಲೀಸರ ಗೋಲಿಬಾರ್​ಗೆ 11 ಮಂದಿ ಬಲಿಯಾಗಿದ್ದಾರೆ. ಅಲ್ದೆ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಾಲಿನ್ಯಕಾರಕ ಸ್ಟೆರ್​ಲೆಟ್​ ತಾಮ್ರದ ಕಂಪನಿಯನ್ನು ಮುಚ್ಚಲು ಆಗ್ರಹಿಸಿ ನಡೆಸುತ್ತಿರುವ ಹೋರಾಟ ನಿನ್ನೆ ಹಿಂಸಾರೂಪಕ್ಕೆ ತಿರುಗಿತ್ತು. ವೇದಾಂತ ಕಂಪನಿಗೆ ಸೇರಿದ ಸ್ಟೆರ್ಲೈಟ್‌ ತಾಮ್ರದ ಘಟಕ ವಿರೋಧಿಸಿ ಕಳೆದ 100 ದಿನಗಳಿಂದ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರು.

 

ಪ್ರತಿಭಟನೆಗೆ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ನಿನ್ನೆ 20,000ಕ್ಕೂ ಹೆಚ್ಚು ಹೋರಾಟಗಾರರು ತಾಮ್ರದ ಘಟಕದ ಮುತ್ತಿಗೆಗೆ ಮುಂದಾಗಿದ್ದರು. ಆದ್ರೆ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಪೊಲೀಸರು ಇದಕ್ಕೆ ಅನುಮತಿ ನೀಡಿರಲಿಲ್ಲ. ಕೊನೆಗೆ ಹೋರಾಟಗಾರರು ಡಿಸಿ ಕಚೇರಿಗೆ ತೆರಳಲು ಮುಂದಾದ್ರು. ಇದಕ್ಕೂ ಪೊಲೀಸರು ಅಡ್ಡಿಪಡಿಸಿದರು. ಹೀಗಾಗಿ ಪ್ರತಿಭಟನಾಕಾರರು ಪೊಲೀಸರ ಜೊತೆ ಘರ್ಷಣೆಗೆ ಇಳಿದ್ರು. ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ರು. ಘರ್ಷಣೆ ತೀವ್ರವಾದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸ್ರು ಗೋಲಿಬಾರ್ ನಡೆಸಿದ್ರು. ಈವರೆಗೆ 11 ಮಂದಿ ಮೃತಪಟ್ಟಿದ್ರೆ, 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.ಇನ್ನು ಸಿಎಂ ಪಳನಿಸ್ವಾಮಿ ಮೃತರ ಕುಟುಂಬಗಳಿಗೆ 10 ಲಕ್ಷ ರೂ ಪರಿಹಾರ ಹಾಗೂ ಉದ್ಯೋಗದ ಭರವಸೆ ನೀಡಿದ್ದಾರೆ. ಅಲ್ದೆ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.