4ನೇ ಹಂತದ ಮತದಾನ ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ! ಕೇಂದ್ರ ಸಚಿವರ ಕಾರು ಪುಡಿ ಪುಡಿ!!

ಇಂದು ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಪಶ್ಚಿಮಬಂಗಾಳದಲ್ಲಿ ನಡೆಯುತ್ತಿದೆ. ದೇಶದ ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದೆ. ಆದರೆ ಪಶ್ಚಿಮ ಬಂಗಾಳದ ಅನ್ಸೋಲ್​​ನಲ್ಲಿ ಮತದಾನದ ವೇಳೆ ಹಿಂಸಾಚಾರ ನಡೆದಿದೆ.

ad

ಅನ್ಸೋಲ್​ನ ಮತಗಟ್ಟೆ ಬಳಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಕೇಂದ್ರ ಭದ್ರತಾ ಪಡೆಯ ಸಮ್ಮುಖದಲ್ಲಿ ಮತದಾನ ನಡೆಯಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೇಳಿದರು. ಆದರೂ ಸಹ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರು ಮತದಾನ ಪ್ರಕ್ರಿಯೆಯನ್ನು ಮುಂದುವರೆಸಿದ ಕಾರಣ 2 ಪಕ್ಷಗಳ ಮಧ್ಯೆ ಗಲಾಟೆ ಆರಂಭವಾಯ್ತು. ಈ ವೇಳೆ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರು ಕುಳಿತಿದ್ದ ಕಾರಿನ ಹಿಂಭಾಗದ ಗಾಜು ಪುಡಿಪುಡಿ ಮಾಡಿದ್ದಾರೆ.

 

ಈ ಕುರಿತು ಮಾತನಾಡಿದ ಬಾಬುಲ್ ಸುಪ್ರಿಯೋ ಮತದಾರರಿಗೆ ಮತ ಹಾಕಲು ಬಿಡುತ್ತಿಲ್ಲ. ನಮ್ಮ ಉದ್ದೇಶ ಪ್ರಜಾಪ್ರಭುತ್ವ ಸ್ಥಾಪನೆ ಮಾಡುವುದಾಗಿದೆ. ಆದರೆ ಇದನ್ನು ಪ್ರಜಾಪ್ರಭುತ್ವವುಳ್ಳ ದೇಶದಲ್ಲಿ ಹೇಳುವುದಕ್ಕೆ ನಾಚಿಕೆಯಾಗುತ್ತಿದೆ. ಸಮಸ್ಯೆಗಳ ವಿಚಾರವಾಗಿ ವರದಿಯಾದ ಪ್ರತಿ ಬೂತ್​ಗೂ ನಾನು ಭೇಟಿ ಕೊಡ್ತೀನಿ. ಕೇಂದ್ರ ಭದ್ರತಾ ಪಡೆಯನ್ನು ನನ್ನೊಂದಿಗೆ ಕರೆದೊಯ್ಯುತ್ತೇನೆ. ಕೇಂದ್ರದ ಪಡೆಯನ್ನು ನೀಡಿ, ನಾವು ವೋಟ್​ ಮಾಡಬೇಕು ಅಂತ ಜನರು ಸಹ ಕೇಳುತ್ತಿದ್ದಾರೆ. ಸದ್ಯ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಗಲಾಟೆಯನ್ನು ನಿಭಾಯಿಸಲಾಗದೆ ಪೋಲಿಂಗ್ ಬೂತ್​​ ಬಳಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಎರಡೂ ಪಕ್ಷಗಳಲ್ಲಿಯೂ ಸುಮಾರು ಹತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೂ ಇಂದು 9 ರಾಜ್ಯಗಳಲ್ಲಿ 71 ಲೋಕಸಭಾ ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಚುನಾವಣಾ ಕಣದಲ್ಲಿ ಒಟ್ಟು 961 ಅಭ್ಯರ್ಥಿಗಳಿದ್ದಾರೆ. ಮಹಾರಾಷ್ಟ್ರದಲ್ಲಿ 17 ಕ್ಷೇತ್ರಗಳಲ್ಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ತಲಾ 13, ಪಶ್ಚಿಮ ಬಂಗಾಳದಲ್ಲಿ 8, ಒಡಿಶಾ ಮತ್ತು ಮಧ್ಯಪ್ರದೇಶದ ತಲಾ 6, ಬಿಹಾರದಲ್ಲಿ 5, ಜಾರ್ಖಂಡ್‍ನಲ್ಲಿ 3 ಹಾಗೂ ಜಮ್ಮು-ಕಾಶ್ಮೀರದ 1 ಕ್ಷೇತ್ರಗಳಲ್ಲಿ ಸದ್ಯ ಮತದಾನ ನಡೆಯುತ್ತಿದೆ.