ಕಾನೂನಿಗೆ ಎಲ್ಲರೂ “ಸ(ಲ್)ಮಾನರು !! ಆಸಾರಾಮ್ ಬಾಪು ಜೊತೆ ಇರಲಿದ್ದಾರೆ ಬಾಲಿವುಡ್ ಖಾನ್ !!

ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್​ಗೆ ಜೋಧಪುರ್ ಕೋರ್ಟ್ 5 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ವನ್ಯಜೀವಿ ರಕ್ಷಣೆ ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಸಲ್ಮಾನ್ ಖಾನ್​ಗೆ ಶಿಕ್ಷೆಯಾಗಿದೆ. ಐದು ವರ್ಷದ ಶಿಕ್ಷೆಯಾಗಿರೋದ್ರಿಂದ ತಕ್ಷಣ ಜಾಮೀನಿನ ಅವಕಾಶವಿಲ್ಲ.

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಕೊಠಾರಿ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ. ಕೃಷ್ಣಮೃಗ ಬೇಟೆ ಸಂಬಂಧ ಸಲ್ಮಾನ್ ಖಾನ್ ವಿರುದ್ಧ ಇನ್ನೂ ಕೆಲವು ಪ್ರಕರಣಗಳಿವೆ. ಕಾರು ಅಪಘಾತ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳೂ ಸಲ್ಲು ವಿರುದ್ಧ ದಾಖಲಾಗಿದ್ದವು. 1998, ಅಕ್ಟೋಬರ್ 2ರಂದು ಜೋಧಪುರದಲ್ಲಿ “ಹಮ್ ಸಾಥ್ ಸಾಥ್ ಹೈಂ” ಹಿಂದಿ ಸಿನಿಮಾದ ಶೂಟಿಂಗ್ ವೇಳೆ ಈ ಕೃಷ್ಣಮೃಗ ಹತ್ಯೆ ನಡೆದಿದೆ. ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ಸೊನಾಲಿ ಬೇಂದ್ರೆ ಮತ್ತು ನೀಲಂ ಅವರು ಜೋಧಪುರ ಸಮೀಪದ ಕನಕಿಣಿ ಗ್ರಾಮಕ್ಕೆ ತೆರಳುತ್ತಾರೆ. ಅಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಶೂಟ್ ಮಾಡಿ ಸಾಯಿಸುತ್ತಾರೆ. ಅಲ್ಲಿ ಕಾಡುಪ್ರಾಣಿಗಳ ರಕ್ಷಣೆಗೆ ಕಟಿಬದ್ಧವಾಗಿದ್ದ ಬಿಷ್ಣೋಯ್ ಗ್ರಾಮಸ್ಥರ ಕಿವಿಗೆ ಗುಂಡಿನ ಶಬ್ದ ಬೀಳುತ್ತದೆ. ಕೂಡಲೇ ಅವರು ಸ್ಥಳಕ್ಕೆ ಧಾವಿಸುತ್ತಾರೆ. ಗ್ರಾಮಸ್ಥರನ್ನು ಕಂಡೊಡನೆಯೇ ಜಿಂಕೆ ಸಮೇತ ಜಿಪ್ಸಿ ಕಾರಿನಲ್ಲಿ ಸಲ್ಲು ಅಂಡ್ ಗ್ಯಾಂಡ್ ಪರಾರಿಯಾಗಲು ಯತ್ನಿಸುತ್ತದೆ. ಆದರೂ ಗ್ರಾಮಸ್ಥರು ಚೇಸ್ ಮಾಡಲು ಯತ್ನಿಸುತ್ತಾರೆ.

ಸ್ಥಳೀಯರು ತಮ್ಮನ್ನು ಬಿಡೋದಿಲ್ಲ ಎಂದು ಭಯಗೊಂಡ ಈ ತಂಡವು ಎರಡೂ ಜಿಂಕೆಯ ದೇಹಗಳನ್ನು ಬಿಸಾಡಿ ತಪ್ಪಿಸಿಕೊಂಡು ಹೋಗುತ್ತಾರೆ. ಸದ್ಯ, ಈ ಪ್ರಕರಣದಲ್ಲಿ ಬಿಷ್ಣೋಯ್ ಗ್ರಾಮಸ್ಥರೇ ಪ್ರಮುಖ ಸಾಕ್ಷಿಗಳಾಗಿದ್ದಾರೆ. ಒಟ್ಟು 52 ಸಾಕ್ಷಿಗಳು ಸಲ್ಲು ವಿರುದ್ಧ ನಿಂತಿವೆ. 1972ರ ವನ್ಯಜೀವಿ ರಕ್ಷಣೆ ಕಾಯ್ದೆಯ ಪ್ರಕಾರ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಪಟ್ಟಿಯಲ್ಲಿ ಕೃಷ್ಣಮೃಗ, ಸಾರಂಗ, ಕಡವೆಗಳೂ ಇವೆ. ಈ ವನ್ಯಜೀವಿಗಳನ್ನು ಕೊಂದರೆ ಒಂದರಿಂದ ಏಳು ವರ್ಷಗಳವರೆಗೆ ಶಿಕ್ಷೆ ಸಿಗುವ ಸಂಭವವಿರುತ್ತದೆ. ಆದರೆ ನ್ಯಾಯಾಲಯ ಐದು ವರ್ಷದ ಶಿಕ್ಷೆ ವಿಧಿಸಿದೆ. ಈಗ ಸಲ್ಮಾನ್ ಖಾನ್ ಜೈಲು ಸೇರಬೇಕಿದ್ದು ಆಸಾರಾಮ್ ಬಾಪು ಇರೋ ಜೈಲಿಗೇ ಖಾನ್ ಸೇರಬೇಕಿದೆ.