ನವಿಲು ಕುಣಿಯುತಿದೆ ನೋಡ!!!! ಈ ನವಿಲಿನ ಕುಣಿತ ನಿಮ್ಮ ಮನಸ್ಸಿಗೆ ಮುದ ನೀಡುವುದು ಖಂಡಿತ…

ಕರಾವಳಿಯಲ್ಲಿ ಮಳೆಯ ರೌದ್ರ ನರ್ತನ ಮುಗಿದಿದೆ. ಮಳೆಯ ಭೀಕರತೆಗೆ ಬೆಚ್ಚಿಬಿದ್ದ ಮಂದಿ ಸುಧಾರಿಸಿಕೊಳ್ಳುತ್ತಿದ್ದಾರೆ. ಮಳೆ ನಿಂತು ಹೋದ ಮೇಲೆ ವಾತಾವರಣವೂ ತಿಳಿಯಾಗಿದೆ. ಎಲ್ಲಾ ಕಡೆ ಹಸಿರು ರಾಶಿ ಕಂಗೊಳಿಸುತ್ತಿದೆ. ಈ ನಡುವೆ ಉಡುಪಿಯ ಬಯಲು ಪ್ರದೇಶದಲ್ಲಿ ನವಿಲು ನರ್ತನದ ದೃಶ್ಯವೊಂದು ಮನಸೂರೆಗೊಂಡಿದೆ. ವಿಪರೀತ ಬೇಸಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಾತ್ರವಲ್ಲ ಪ್ರಾಣಿಪಕ್ಷಿಗಳಿಗೂ ಈ ಮಳೆ ಹಿತಾನುಭವ ನೀಡಿದೆ. ಸುತ್ತಲೂ ಹೆಣ್ಣು ನವಿಲುಗಳು, ನಡುವಲ್ಲಿ ಗರಿಬಿಚ್ಚಿದ ಗಂಡು ನವಿಲಲಿನ ಕುಣಿತ ಪ್ರಕೃತಿ ನೀಡಿದ ಕೊಡುಗೆಯಂತೆ ಕಾಣುತ್ತದೆ. ಮಳೆ ನೀಡಿದ ಎಲ್ಲಾ ನೋವುಗಳನ್ನು ಮರೆತು ಬಿಡೋದಕ್ಕೆ ಈ ಒಂದು ದೃಶ್ಯ ಸಾಕು.

 

ಮತ್ತೊಂದು ಕಡೆ ಮಳೆಗಾಲದ ಜಲಪಾತಗಳು ಮರುಜನ್ಮ ಪಡೆದು ಕೊಂಡಿದೆ. ಉಡುಪಿಯ ಅಸುಪಾಸು ನೂರಾರು ಜಲಪಾತಗಳು ಮನಸ್ಸಿಗೆ ಹಿತ ನೀಡುತ್ತಿದೆ.ಉಡುಪಿ ನಗರದಿಂದ ಕೂಗಳತೆ ದೂರದಲ್ಲಿರುವ ಮಣಿಪಾಲದ ಅರ್ಬಿ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಹಾಲ್ನೊರೆಗಳಂತೆ ಭಾಸವಾಗುವ ನೀರ ಝರಿಗಳು ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಸಂಜೆಯ ಹೊತ್ತಿನಲ್ಲಿ ನಗರದ ಜನ ರಿಲಾಕ್ಸ್ ಆಗುವುದಕ್ಕೆ ಬೆಸ್ಟ್ ಸ್ಪಾಟ್ ಇದಾಗಿದೆ. ಯುವಕ ಯುವತಿಯರಂತು ನೀರಾಟವಾಡುತ್ತ ಸಂಜೆ ವೇಳೆ ಕಳೆಯುತ್ತಿದ್ದಾರೆ.ಕೇವಲ 3 ದಿನಗಳ ಮಳೆಯಲ್ಲಿ ಉಡುಪಿ ನಗರಕ್ಕೆ ನೀರು ಒದಗಿಸುವ ಜಲಾಶಯಗಳು ಭರ್ತಿಯಾಗಿವೆ. ಸಾಮಾನ್ಯವಾಗಿ ಜುಲೈ ಆಗಸ್ಟ್ ತಿಂಗಳಿನಲ್ಲಿ ತುಂಬುವಷ್ಟು ನೀರು ಕೇವಲ 2 ದಿನಗಳ ಮಳೆಯಲ್ಲಿ ತುಂಬಿದೆ.