ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಚ್ಚಿಬೀಳಿಸಿತ್ತು ಆ ಲಾರಿ- ಅಷ್ಟಕ್ಕೂ ಕೇರಳದಿಂದ ಮೈಸೂರಿಗೆ ಬಂದಿದ್ದೇನು ಗೊತ್ತಾ?!

 

ad

ಸಾಂಸ್ಕೃತಿಕ ನಗರಿ ಮೈಸೂರಿನ ಜನ ಬೆಚ್ಚಿ ಬೀಳುವ ಸಂಗತಿಯೊಂದು ಬಯಲಾಗಿದೆ. ತಮಿಳುನಾಡು ಕಾವೇರಿ ಕ್ಯಾತೆ ತೆಗೆದಿರುವಾಗಲೇ ನೆರೆಯ ಕೇರಳ ರಾಜ್ಯದಿಂದ ತ್ಯಾಜ್ಯದ ಕ್ಯಾತೆ ಶುರುವಾಗಿದೆ. ಹೌದು ಕೇರಳ ರಾಜ್ಯದಲ್ಲಿ ಉತ್ಪಾದನೆಯಾಗುವ ಟನ್ ಗಟ್ಟಲೆ ತ್ಯಾಜ್ಯ ವಸ್ತುಗಳು ಮೈಸೂರಿಗೆ ರವಾನೆಯಾಗುತ್ತಿದೆ. ಪ್ಲಾಸ್ಟಿಕ್, ಬಯೋ ವೇಸ್ಟ್, ಸಾಲಿಡ್‌ ವೇಸ್ಟ್, ಮೆಡಿಕಲ್ ವೇಸ್ಟ್ ಎಲ್ಲದಕ್ಕೂ ಮೈಸೂರು ನಗರವನ್ನ ಕಸದ ತೊಟ್ಟಿ ಮಾಡಿಕೊಳ್ಳುವ ಮೂಲಕಕೇರಳ ರಾಜ್ಯ ಕರ್ನಾಟಕಕ್ಕೆ ಮಹಾವಂಚನೆ ಮಾಡಲು ಆರಂಭಿಸಿದೆ. ತನ್ನ ರಾಜ್ಯದ ಕಸವನ್ನು ಲಾರಿಗಳಲ್ಲಿ ತುಂಬಿಸಿ ಕಳುಹಿಸಿ ಕರ್ನಾಟಕವನ್ನು ತ್ಯಾಜ್ಯದ ಕೂಪ ಮಾಡುವ ಮಹಾ ಕೃತ್ಯ ಈವತ್ತು ಬಯಲಾಗಿದೆ. ಪ್ರತಿನಿತ್ಯ ಕೇರಳದಿಂದ 10-15 ಲಾರಿಗಳಲ್ಲಿ ಬರುತ್ತಿರುವ ತ್ಯಾಜ್ಯ ವಸ್ತುಗಳು ಮೈಸೂರಿನ ಡಂಪಿಂಗ್ ಯಾರ್ಡ್ ಗಳಿಗೆ ಸೇರುತ್ತಿದೆ. ಈವತ್ತು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ನಗರಪಾಲಿಕೆ ಆರೋಗ್ಯಾಧಿಕಾರಿ, ಪಾಲಿಕೆ ಸದಸ್ಯರು ಜಂಟಿ ಕಾರ್ಯಾಚರಣೆ ನಡೆಸಿ ತ್ಯಾಜ್ಯ ಹೊತ್ತು‌ ತಂದಿದ್ದ ಲಾರಿ ಮೈಸೂರು-ನಂಜನಗೂಡು ರಸ್ತೆಯಲ್ಲಿ ಜಪ್ತಿ ಮಾಡಿದ್ದಾರೆ.

ಮೈಸೂರಿನ ರಾಜೀವ್ ನಗರ, ಭಾರತ್ ನಗರ ಮತ್ತು ಬನ್ನೂರು ರಸ್ತೆಯ ರಂಗಾಚಾರಿ ಹುಂಡಿಯ ಖಾಸಗಿ ಡಂಪಿಂಗ್ ಯಾರ್ಡ್ ಗಳಿಗೆ ಈ ಕಸ ರವಾನೆಯಾಗುತ್ತಿತ್ತು. ಒಂದು‌ ಲೋಡ್ ಗೆ 25 ಸಾವಿರ ರೂಪಾಯಿ ಪಡೆಯುತ್ತಿರುವ‌ ಮಧ್ಯವರ್ತಿಗಳ ಜಾಲವೊಂದು ಕಳೆದ ಕೆಲವು ತಿಂಗಳಿಂದ ಈ ದಂಧೆ ನಡೆಸುತ್ತಿತ್ತು. ನಿಫಾ ವೈರಸ್ ಆತಂಕ‌ ತಣ್ಣಗಾಗುವ ಮುನ್ನವೇ ಕೇರಳದ ಅಪಾಯಕಾರಿ ತ್ಯಾಜ್ಯ ಸಾಂಸ್ಕೃತಿಕ ನಗರಿಯ ಗರ್ಭ ಸೇರುತ್ತಿತ್ತು. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಮತ್ತೊಮ್ಮೆ ಮೈಸೂರು ನಗರಕ್ಕೆ ಸ್ವಚ್ಚ ನಗರಿ ಎಂಬ ತೊಡಿಸಿದ ಬೆನ್ನಲ್ಲೇ ಕೇರಳದ ಈ ಅಕ್ರಮ ಬಯಲಾಗಿ ಸ್ವಚ್ಛ ನಗರಿ ಪಟ್ಟಕ್ಕೂ ಬಂದಿದೆ ಸಂಚಕಾರ ತರುವಂತಿದೆ. ‘
ಕೇರಳದಿಂದ ಬರುವ ಲಾರಿಗಳಿಂದ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಹಣ ವಸೂಲಿ ಮಾಡಿ ಒಳ ಬಿಡಲಾಗುತ್ತಿದೆ. ಈವತ್ತು ತ್ಯಾಜ್ಯದ ಲಾರಿ ಮೈಸೂರು ನಗರ ಪ್ರವೇಶಿಸುತ್ತಿದ್ದಂತೆ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ರಾಮಚಂದ್ರ, ನಗರಪಾಲಿಕೆ ಸದಸ್ಯ ಪ್ರಶಾಂತರ ಗೌಡ ತಡೆದು ಜಪ್ತಿ ಮಾಡಿದರು. ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ತ್ಯಾಜ್ಯವನ್ನು ಸುರಿಯುತ್ತಿದ್ದ ರಾಜೀವ ನಗರದ ಡಂಪಿಂಗ್ ಯಾರ್ಡ್ ಗೂ ಭೇಟಿ ನೀಡಿ ಪರಿಶೀಲಿಸಲಾಯಿತು. ತ್ಯಾಜ್ಯದ ಜಾಲದ ಬಗ್ಗೆ ನಗರಪಾಲಿಕೆ ಆರೋಗ್ಯಾಧಿಕಾರಿ ದಕ್ಷಿಣ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಈ ಜಾಲದಲ್ಲಿ ಯಾರ್ಯಾರು ಇದ್ದಾರೆಂದು ಪೊಲೀಸರು ಪತ್ತೆ ಹಚ್ಚಬೇಕಾಗಿದೆ. ಜೊತೆಗೆ ಸಾಂಸ್ಕೃತಿಕ ನಗರಿಗೆ ಒದಗಿರುವ ಅಪಾಯವನ್ನು ತಡೆಯಬೇಕಾಗಿದೆ.