ನಟ ‘ಕಮಲ್ ಹಾಸನ್ ನಾಲಿಗೆ ಕತ್ತರಿಸಬೇಕು’- ಸಚಿವ ಕೆಟಿ ರಾಜೇಂದ್ರ ಬಾಲಾಜಿ ಆಗ್ರಹ!!

ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಹುಭಾಷಾ ನಟ  ಹಾಗೂ ಮಕ್ಕಳ ನೀಧಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರ ನಾಲಿಗೆ ಕತ್ತರಿಸಬೇಕು ಎಂದು ತಮಿಳುನಾಡು ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.
ಪ್ರಚೋದನಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಪಕ್ಷವನ್ನು ನಿಷೇಧಿಸಬೇಕು ಎಂದಿರುವ ಎಐಎಡಿಎಂಕೆ ಹಿರಿಯ ನಾಯಕ ಬಾಲಾಜಿ ಅವರು, ಕಮಲ್ ಹಾಸನ್ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
 ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ದೇಶದ ಮೊದಲ ಹಿಂದೂ ಭಯೋತ್ಪಾದಕ ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೆ.ಟಿ.ರಾಜೇಂದ್ರ ಬಾಲಾಜಿ ಅಲ್ಪ ಸಂಖ್ಯಾತ ಮತಗಳನ್ನು ಸೆಳೆಯುವುದಕ್ಕಾಗಿ ಕಮಲ್ ಹಾಸನ್ ಅವರು ಈ ರೀತಿ ನಟಿಸುತ್ತಿದ್ದಾರೆ ಮತ್ತು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಾಲಾಜಿ ವಾಗ್ದಾಳಿ ನಡೆಸಿದರು.
ಇನ್ನು  ವೋಟ್ ಪಡೆಯುವ ಉದ್ದೇಶದಿಂದ ಕಮಲ್ ಹಾಸನ್ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಒಬ್ಬ ವ್ಯಕ್ತಿ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿಯಿಂದಲೂ ಕೇಂದ್ರ ಚುನಾವಣಾ ಆಯೋಗಕ್ಕೆ ಕಮಲ್ ಹಾಸನ್ ವಿರುದ್ಧ ದೂರು ನೀಡಲಾಗಿದೆ.ಈ ಮಧ್ಯೆ ಕಮಲ್​​ ಹಾಸನ್​ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಸೂಪರ್​ ಸ್ಟಾರ್ ರಜಿನಿಕಾಂತ್ ನಿರಾಕರಿಸಿದ್ರು. ಚೆನ್ನೈ ಏರ್​ಪೋರ್ಟ್​​ಗೆ ಬಂದಿಳಿದ ಅವರನ್ನು ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ಉತ್ತರಿಸಲು ನಿರಾಕರಿಸಿ ಅವರು ಅಲ್ಲಿಂದ ತೆರಳಿದ್ದಾರೆ.