ರವಿ ಬೆಳಗೆರೆ ಪ್ರೆಸ್ ಕ್ಲಬ್ಬಿನಲ್ಲಿ ಉಚ್ಚೆ ಹೊಯ್ಯಬೇಕಾದರೂ ಅನುಮತಿ ಪಡೆಯಬೇಕಿತ್ತು !! ಮುನಿರತ್ನ, ಜೇಡರಹಳ್ಳಿ ದೊಣ್ಣೆಯಿಂದ ರವಿ ಬೆಳಗೆರೆ ತಪ್ಪಿಸಿಕೊಂಡಿದ್ದು ಹೇಗೆ ? ಅಗ್ನಿ ಶ್ರೀಧರ್ ಬಿಚ್ಚಿಡ್ತಾರೆ ಪಾಪಿಗಳ ಲೋಕ !!

ರವಿ ಬೆಳಗೆರೆಯಿಂದ ಪತ್ರಕರ್ತ ಸುನೀಲ್ ಹೆಗ್ಗರವಲ್ಲಿ ಹತ್ಯೆಗೆ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಅಗ್ನಿ ಶ್ರೀಧರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿ ಮೊದಲ ಭಾಗ ಹೇಗಿದೆಯೋ ಹಾಗೆ ಇಲ್ಲಿದೆ.

ಆತನಿಗೂ ನನಗೂ ಸಂಬಂಧ ಸರಿ ಇಲ್ಲ. ಆದ್ದರಿಂದ ಅವನು ಕೆಳಗೆ ಬಿದ್ದಾಗ ನಾನೂ ಕಲ್ಲು ಎಸೀಬಾರದು ಅಂತ ಸುಮ್ಮನಿದ್ದೆ. ಆದರೆ ರವಿ ಬೆಳಗರೆ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ ಎನ್ನುವ ರೀತಿಯಲ್ಲಿ ಕೆಲವು ಹಿರಿಯರು, ಸಾಹಿತಿಗಳು ಒತ್ತಡ ಹಾಕಿದ್ರು. ಅದಕ್ಕಾಗಿ ಮಾತನಾಡುತ್ತಿದ್ದೇನೆ.

ನನ್ನನ್ನೂ ಸೇರಿಸಿ ನಾವೆಲ್ಲರೂ ಕೂಡಾ ನಾಗರೀಕ ಸಮಾಜದಲ್ಲಿ ಪರದೇ ತೊಟ್ಟುಕೊಂಡು ಓಡಾಡ್ತಿದ್ದೀವಿ. ಪರದೆಯ ಒಳಗಡೆ ನಮ್ಮೆಲ್ಲರಲ್ಲೂ ಬೇರೆಯವರಲ್ಲಿ ಇರುವಷ್ಟೇ ಒಂದಷ್ಟು ವಿಕೃತತ್ವ, ಒಂದಷ್ಟು ಸಣ್ಣತನ, ಒಂದಷ್ಟು ಕ್ರಿಮಿನಲ್ ಮೆಂಟಾಲಿಟಿ ಇತ್ಯಾದಿಗಳೆಲ್ಲವೂ ಇರುತ್ತವೆ.

ನಮ್ಮೊಳಗಿರುವ ವಿಕೃತತ್ವ, ಸಣ್ಣತನ, ಕ್ರಿಮಿನಲ್ ಟೆಂಡೆನ್ಸಿಯನ್ನು ಕಳೆದುಕೊಳ್ಳೊದಕ್ಕಾಗಿಯೇ ನಾವುಗಳು ಸಾಹಿತ್ಯ, ಬರಹ, ನಾಟಕ, ಸಿನೇಮಾ, ಓದಿ ನಲ್ಲಿ ತೊಡಗಿಸಿಕೊಳ್ಳುತ್ತೇವೆ. ರವಿ ಬೆಳಗರೆ ಕೂಡಾ ಒಬ್ಬ ಸಾಹಿತಿ. ಆದರೆ ಆತ ಸಾಹಿತ್ಯದ ಪ್ರಾಥಮಿಕ ಉದ್ದೇಶವನ್ನೇ ಮರೆತುಬಿಟ್ಟ. ಅಲ್ಲಿಂದಲೇ ಆತನನ್ನು ನೋಡಬೇಕಾಗುತ್ತದೆ.

ತನ್ನ ಓದು, ತನ್ನ ಬರವಣಿಗೆ ಮೊದಲು ತನ್ನನ್ನು ಬೆಳಸಬೇಕು. ತನ್ನೊಳಗನ್ನು ಬೆಳೆಸಬೇಕು. ಅದರ ನಂತರ ತನ್ನ ಪರಿಸರ, ತನ್ನ ಓದುಗರನ್ನು ತನ್ನ ಬರಹಗಳು ತಲುಪಬೇಕು ಎಂಬುದನ್ನು ಬರಹಗಾರ ತಿಳಿದಿರಬೇಕು. ಆದರೆ ರವಿ ಬೆಳಗೆರೆ ಅದನ್ನು ಮರೆತುಬಿಟ್ಟ.

ರವಿ ಬೆಳಗೆರೆ ಹಾಯ್ ಬೆಂಗಳೂರು ಪತ್ರಿಕೆ ಶುರು ಮಾಡಿರೋದಕ್ಕಿಂತ ಮೊದಲಿನಿಂದಲೂ ನನಗೆ ಗೊತ್ತು. ಆತ ಕರ್ಮವೀರ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಆ ದಿನಗಳಲ್ಲಿ ಈತನನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಕರ್ಮವೀರ ಪತ್ರಿಕೆಯಲ್ಲಿ ಪಾಪಿಗಳ ಲೋಕದಲ್ಲಿ ಅಂತ ಭೂಗತ ಜಗತ್ತಿನ ಬಗ್ಗೆ ಎಕ್ಸ್ ಕ್ಲೂಸಿವ್ ಆಗಿ ಬರೆಯೋಕೆ ಶುರು ಮಾಡಿದ. ಭೂಗತ ಜಗತ್ತಿನ ಬಗ್ಗೆ ರಸವತ್ತಾಗಿ, ರಂಜನೀಯವಾಗಿ ರವಿ ಬೆಳಗೆರೆ ಬರೆಯುತ್ತಿದ್ದ. ಆತನೇ ಹೇಳುತ್ತಿದ್ದ – ಶ್ರೀದರ್, ನಾನು ಈವರೆಗೂ ಬಹಳಷ್ಟು ಪುಸ್ತಕಗಳನ್ನು, ಲೇಖನಗಳನ್ನು ಬರೆದಿದ್ದೇನೆ. ಯಾರೂ ನನ್ನನ್ನು ಗಮನಿಸುತ್ತಾ ಇರಲಿಲ್ಲ. ಕ್ರೈಂ ಬಗ್ಗೆ ಬರೆಯೋಕೆ ಶುರು ಮಾಡಿದ ನಂತರ ಜನ ನನ್ನನ್ನು ನೋಡ್ತಾ ಇದ್ದಾರೆ ಅಂತ ಹೇಳ್ತಾ ಇದ್ದ.
ಹಾಯ್ ಬೆಂಗಳೂರು ಪತ್ರಿಕೆ ಶುರು ಮಾಡಿದ ನಂತರವೂ ಅಷ್ಟೆ. ಅದೊಂದು ಕ್ರೈಂ ಮತ್ತು ಸೆಕ್ಸ್ ನ ಕೈಪಿಡಿ ಆಗಿತ್ತಷ್ಟೆ. ಇಡೀ ಕನ್ನಡ ಪತ್ರಿಕಾ ರಂಗದಲ್ಲೇ ಅತೀ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವ ಪತ್ರಿಕೆ ಇದ್ದರೆ ಅದು ರತಿ ವಿಜ್ಞಾನ. ಒಂದು ತಿಂಗಳಿಗೆ ಎಂಟು ಲಕ್ಷ ರತಿ ವಿಜ್ಞಾನದ ಪ್ರತಿ ಮಾರಾಟ ಆಗುತ್ತಿತ್ತು. ಜನರಿಗೆ ಸೆಕ್ಸ್ ಮತ್ತು ಕ್ರೈಂ ಜಗತ್ತಿನಲ್ಲಿ ಬಹಳ ಆಕರ್ಷಿಸುತ್ತೆ. ಅದ್ದರಿಂದಲೇ ರವಿ ಬೆಳಗೆರೆ ಕನ್ನಡದ ಸಾಂಸ್ಕೃತಿಕ ಜಗತ್ತಿನ ಸನ್ನಿ ಲಿಯೋನ್ ಆಗಿದ್ದ.

ಎಲ್ಲಿಯವರೆಗೆ ರವಿ ಬೆಳಗೆರೆ ಬರೆಯುತ್ತಾ ಬರೆಯುತ್ತಾ ಕ್ರೈಂ ನಲ್ಲಿ ಇನ್ವಾಲ್ವ್ ಆಗುತ್ತಾನೆ ಅಂದರೆ, ಬರೆಯುತ್ತಲೇ ಎರಡು ರೌಡಿ ಗುಂಪುಗಳ ಮದ್ಯೆ ವೈಷಮ್ಯ ಹುಟ್ಟಿಸಿಬಿಡುತ್ತಾನೆ.

ಶ್ರೀರಾಮ್ ಪುರ ಕಿಟ್ಟಿ ಮಾತು ಕೇಳಿಕೊಂಡು ಬಲರಾಮನ ವಿರುದ್ದ ಬರೆಯುತ್ತಾನೆ. ಬಲರಾಮನ ಹುಡುಗರು ಆಗ ರವಿ ಬೆಳಗೆರೆಯನ್ನು ಎತ್ತಾಕಿಕೊಂಡು ಹೋಗ್ತಾರೆ. ಬಹಳ ಒರಟು ಹುಡುಗರನ್ನು ಹೊಂದಿದ್ದ ಬಲರಾಮ, ರವಿ ಬೆಳಗೆರೆಗೆ ತಪರಾಕಿ ನೀಡಿದ್ದ. ಬಲರಾಮನ ಹುಡುಗರೂ ರವಿ ಬೆಳಗೆರೆಗೆ ತಲೆಗೆಲ್ಲಾ ಹೊಡೆದಿದ್ದರು. ಕೊನೆಗೆ ದಾರಿ ಕಾಣದೆ ಬಲರಾಮನಿಗೆ ರವಿ ಬೆಳಗೆರೆ ಶರಣಾಗುತ್ತಾನೆ. ಕೊನೆಗೆ ಇದೇ ರವಿ ಬೆಳಗೆರೆಯನ್ನು ಪ್ರೆಸ್ ಕ್ಲಬ್ಬಿಗೇ ಕರೆಸಿಕೊಂಡ ಬಲರಾಮ, ರವಿ ಬೆಳಗೆರೆಯನ್ನು ಕೂರಿಸಿಕೊಂಡು ಮಜಾ ತೆಗೆದುಕೊಳ್ಳುತ್ತಾನೆ. ರವಿ ಬೆಳಗೆರೆ ಆಗ ಪ್ರೆಸ್ ಕ್ಲಬ್ ಸದಸ್ಯ ಆಗಿದ್ದ. ಆಗಲೇ ಪ್ರೆಸ್ ಕ್ಲಬ್ಬಿಗೇ ಕರೆಸಿ, ಅಲ್ಲೇ ಕೂರಿಸಿ ಟಾರ್ಚರ್ ಕೊಟ್ಟು ಮಜಾ ತಗೋತಾರೆ. ಎಷ್ಟರವರೆಗೆ ಮಜಾ ತಗೋತಾರೆ ಅಂದರೆ, ರವಿ ಬೆಳಗೆರೆ ತನಗೆ ಟಾಯ್ಲೆಟ್ ಹೋಗಬೇಕು ಅಂದ್ರೂ ಬಾಸ್ ಬಲರಾಮನ ಪರ್ಮಿಶನ್ ಬೇಕು ಎಂದು ಹುಡುಗರು ಹೇಳುತ್ತಾರೆ. ಅದರಲ್ಲಿ ಒಬ್ಬಾತ ನವೀನ್ ಈಗ ಕಾರ್ಪೋರೇಟರ್ ಆಗಿದ್ದಾರೆ. “ಏಯ್, ನಮ್ಮ ಬಾಸ್ ಹೇಳಿದ್ರೆ ಮಾತ್ರ ನೀನು ಉಚ್ಚೆ ಹೊಯ್ಬೇಕು. ಗೊತ್ತಾಯ್ತೇನೋ” ಅಂತಾರೆ. ರವಿ ಬೆಳಗೆರೆ ಅದಕ್ಕೆ ತಲೆ ಅಲ್ಲಾಡಿಸಿದ್ದ. ಅಷ್ಟರವರೆಗೆ ಆತನನ್ನು ಪ್ರೆಸ್ ಕ್ಲಬ್ಬಿನಲ್ಲಿ ಬಲರಾಮನ ಹುಡುಗರು ಗೋಳು ಹೊಯ್ಕೊಂಡಿದ್ದರು.

ಆ ನಂತರ ಬಲರಾಮನ ಹುಡುಗರ ಸಂಗ ಬೆಳೆಸಿದ ರವಿ ಬೆಳಗೆರೆ, ಅವರ ಕೈ ಕಾಲು ಹಿಡಿದು ಶ್ರೀಧರ್ ಪರಿಚಯ ಮಾಡಿಕೊಡುವಂತೆ ಕೇಳುತ್ತಾನೆ. ಯಾಕೆಂದರೆ ನಾನಾಗ ಲಂಕೇಶ್ ಜೊತೆ ಆತ್ಮೀಯನಾಗಿದ್ದೆ. ಸಾಹಿತ್ಯ ಓದುತ್ತಿದ್ದೆ. ಅದ್ದರಿಂದ ನನ್ನನ್ನು ಬಳಸಿಕೊಂಡು ಬೇರೆಯದ್ದೇ ರೀತಿಯಲ್ಕಿ ಬೆಳೆಯಬಹುದು ಅಂದುಕೊಂಡಿದ್ದ. ಆದರೆ ನಾನವನ ಮನವಿಯನ್ನು ತಿರಸ್ಕರಿಸಿದ್ದೆ.

ರವಿ ಬೆಳಗೆರೆ ಬರಹಗಳು ಸರಿಯಾಗಿಲ್ಲ. ರಂಜನೀಯವಾಗಿ ಬರೀತಾನೆ. ಆದ್ದರಿಂದ ಬೇಟಿ ಮಾಡಲ್ಲ ಎಂದು ಹುಡುಗರಿಗೆ ಹೇಳಿದ್ದೆ. ಕೊನೆಗೆ ಬಚ್ಚನ್ ಮತ್ತು ರಾಜೇಂದ್ರನನ್ನು ರವಿ ಬೇಟಿಯಾಗಿ ಮನವಿ ಮಾಡ್ತಾನೆ. ಆಗ ಬಚ್ಚನ್ ನನಗೊಂದು ಚೀಟಿ ಕಳಿಸ್ತಾರೆ ” ರವಿ ಬೆಳಗೆರೆ ಅನ್ನೋನು ನಿಮ್ಮನ್ನು ಭೇಟಿ ಮಾಡೋಕೆ ಬರುತ್ತಾನೆ. ದಯವಿಟ್ಟು ಭೇಟಿ ಆಗಬೇಡಿ. ಅಶಿಸ್ತಿನ ಮನುಷ್ಯ ಆತ” ಎಂದು ಅದರಲ್ಲಿ ಬರೆದಿತ್ತು. ರವಿ ಬೆಳಗೆರೆ ಆಗ ಹರಿದೋಗಿರೋ ಚಪ್ಪಲಿ ಹಾಕ್ಕೊಂಡಿರ್ತಾನೆ. ಬಡತನದ ಕಾರಣಕ್ಕಲ್ಲ. ಅಶಿಸ್ತಿನ ಕಾರಣಕ್ಕೆ. ಕನಿಷ್ಟ ಹರಿದೋಗಿರೋ ಚಪ್ಪಲಿಯನ್ನು ಹೊಲಿಸಿ ಹಾಕುವಷ್ಟೂ ಶಿಸ್ತು ಇಲ್ಲ.

ಕಡೆಗೆ ಬಲರಾಮ ಹಠ ಮಾಡಿದ. ಸರ್ ಒಂದು ಹತ್ತು ನಿಮಿಷ ಮಾತಾಡಿ ಕಳ್ಸಿ ಅಂತ ಕೇಳಿಕೊಂಡ. ಕೊನೆಗೆ ಒತ್ತಡ ತಾಳಲಾರದೆ ಸ್ನೇಹಿತನ ಮನೆಗೆ ಕರೆಸಿಕೊಂಡೆ. ನಾನು ಬಿಯರ್ ತೆಗೆದುಕೊಂಡ್ರೆ ಈತ ತುಂಬಾನೇ ಕುಡಿದು ಬಿಟ್ಟಿದ್ದ. ಮೊದಲು ಸಾರ್ ಅಂತಿದ್ದ. ಸ್ವಲ್ಪ ಜಾಸ್ತಿ ಕುಡಿದ ಮೇಲೆ ಶ್ರೀದರ್ ರವರೇ ಅಂದ. ಕುಡಿದ ಮೇಲೆ ನನ್ನ ಕಾಲ ಬಳಿ ಕುಳಿತುಕೊಂಡ. ” ಗುರು ನೀವು. ನಾನು ಭೇಟಿ ಮಾಡಿದ ಅತ್ಯುನ್ನತ ವ್ಯಕ್ತಿಗಳು ಇಬ್ಬರೇ. ಒಬ್ಬರು ಕೊಂಡಪ್ಪಳ್ಳಿ ಸೀತಾರಾಮಯ್ಯ ಮತ್ತೊಬ್ಬರು ನೀವು. ನಾನು ನಿಮ್ಮ ವಾಯ್ಸ್ ಆಗ್ತೀನಿ. ನಿಮ್ಮ ಜೊತೆ ನನ್ನನ್ನು ಇಟ್ಕೊಳ್ಳಿ” ಅಂದ. ನನಗೆ ಅಸಹ್ಯ ಅನ್ನಿಸಿತು. ಅಲ್ಲಿಂದ ಆತನನ್ನು ದೂರವಿಟ್ಟೆ.

ಕೊನೆಗೊಂದು ದಿನ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಮುನಿರತ್ನ ಈತನನ್ನು ಕರೆದುಕೊಂಡು ಹೋಗಿ ರಾಜರಾಜೇಶ್ವರಿ ನಗರದ ಕ್ಲಬ್ ನಲ್ಲಿ ಕೂಡಿ ಹಾಕ್ತಾರೆ. ಹೊಡೆಯೋಕೆ ಅಂತ ದೊಣ್ಣೆ ಎಲ್ಲಾ ತಗೊಂಡು ಹೋಗಿದ್ದರು. ಅಷ್ಟರಲ್ಲಿ ಕ್ಲಬ್‌ ಓನರ್ ಗೂ ಕೃಷ್ಣಪ್ಪಗೂ ವಾಗ್ವಾದ ಆಗಿ ಈತ ಬಚಾವ್ ಆಗ್ತಾನೆ. ಕೊನೆಗೆ ಕರ್ಮವೀರ ಬಿಟ್ಟ ಈತ ಲಂಕೇಶ್ ಪತ್ರಿಕೆಗೆ ಮರಳಿ ಸೇರಿಕೊಳ್ಳುತ್ತಾನೆ.