ಮುಗಿಯದ ಅಂಜನಾಮೂರ್ತಿ ಆಕ್ರೋಶ- ಸ್ಪಂದಿಸದ ಕಾಂಗ್ರೆಸ್ ಹೈಕಮಾಂಡ್

ಬೆಂಗಳೂರು ಹೊರವಲಯ ನೆಲಮಂಗಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಆಂಜನಮೂರ್ತಿಗೆ ಟಿಕೆಟ್ ಕೈ ತಪ್ಪಿರುವುದಕ್ಕೆ ನಿನ್ನೆಯೇ ಕೆಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಯೂತ್ ಹಾಗೂ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಹಲವು ಪಧಾದಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೇ ವರಿಷ್ಠರು ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ಮುಂದುವರೆದಿದೆ.

ನಿನ್ನೆ ಅಂಜನಾಮೂರ್ತಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರೂ ಪಕ್ಷದ ಹೈಕಮಾಂಡ್ ನಾಯಕರು ಆಂಜನಮೂರ್ತಿ ಯನ್ನು ಕರೆದು ಸಮಾಧಾನ ಪಡಿಸಿ ಮನ ಓಲೈಸಿರಲಿಲ್ಲ. ಹೀಗಾಗಿ ಇಂದು ಆಂಜನಮೂರ್ತಿ ಬೆಂಬಲಿಗರು ಮತ್ತಷ್ಟು ಕೆರಳಿದ್ದು ಶತಾಯಗತಯ ಆಂಜನಮೂರ್ತಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು. ಅಲ್ಲದೆ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆದು ಟೈರ್ ಗೆ ಬೆಂಕಿ ಹಚ್ಚಿ, ರಣ ಬಿಸಿಯಂತೆ ಸುಡುತ್ತಿದ್ದ ರಸ್ತೆಯಲ್ಲಿ ಅರೆಬೆತ್ತಲೆಯಲ್ಲೇ ಉರುಳು ಸೇವೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಆಂಜನಮೂರ್ತಿ ನಿಷ್ಠಾವಂತ ಬೆಂಬಲಿಗ ಹಾಗೂ ಇಲ್ಲಿನ ಬಸವನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಚೇಣ ಎಂಬುವರು ವಿಷ ಸೇವನೆಗೆ ಯತ್ನಿಸಿದರು. ಈ ವೇಳೆ ಪಕ್ಕದಲ್ಲಿದ್ದ‌ ಕಾರ್ಯಕರ್ತರು ವಿಷದ ಬಾಟೆಲ್ ಬಿಸಾಡಿ ಅನಾಹುತ ತಪ್ಪಿಸದರು. ಮೆರವಣಿಗೆ ವೇಳೆ ಆಂಜನಮೂರ್ತಿಗೆ ಟಿಕೆಟ್ ತಪ್ಪಲು ಸಂಸದ ವೀರಪ್ಪ ಮೊಯ್ಲಿಯೇ‌ ಕಾರಣ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.