ವಿಳಾಸ ಕೇಳುವ ನೆಪದಲ್ಲಿ ಚಿನ್ನಾಭರಣ ದೋಚಿದ್ದ ಖತರ್ನಾಕ್​ ದಂಪತಿ ಅಂದರ್​..!

ವಿಳಾಸ ಕೇಳುವ ನೆಪದಲ್ಲಿ‌ ಮಹಿಳೆಯೊಬ್ಬರನ್ನು‌ ಕಾರಿನಲ್ಲಿ ಕರೆದೊಯ್ದು ಚಿನ್ನಾಭರಣ ದೋಚಿ ಪರಾರಿಯಾದ ಆರೋಪದಲ್ಲಿ ದಂಪತಿಯನ್ನು ನಗರದ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಬಂದಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿಯ ನಗರದ ವಿಜಯ್​ ಕುಮಾರ್ ಸ್ಥಾವರಮಠ, ನಾಗರತ್ನ ಅಲಿಯಾಸ್ ನಿಷಾ ಸ್ಥಾವರಮಠ ಬಂಧಿತ ಖತರ್ನಾಕ್​ ದಂಪತಿ. ಜುಲೈ 10ರಂದು ಮಧ್ಯಾಹ್ನ 2.30ರ ವೇಳೆಗೆ ಈ ನಡೆದಿತ್ತು. ಅಲ್ಲದೆ ಖದೀಮರ ಈ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ವಿಜಯಕುಮಾರ್ ಬಿ.ಕಾಂ ಪದವಿ ಮುಗಿಸಿ ಕಾಂಟ್ರ್ಯಾಕ್ಟರ್ ಆಗಿ ಕೆಲಸ ನಿರ್ವಹಿಸುತಿದ್ದ. ಇನ್ನು ಆರೋಪಿಯ ಪತ್ನಿ ನಾಗರತ್ನ ಅಲಿಯಾಸ್​ ನಿಷಾ, ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ನಂತರ ಕಲಬುರ್ಗಿ ನಗರದ ಬಸವೇಶ್ವರ ಕಾಲೋನಿಯಲ್ಲಿ ವಾಸವಾಗಿದ್ದರು.

ಮಾಡಿದ ಸಾಲ ತೀರಿಸಲು ಹಿಡಿದ್ರು ಕಳ್ಳದಾರಿ..!

 

ಇನ್ನು ಈ ಇಬ್ಬರೂ ಮಾಡಿದ ಸಾಲ ತೀರಿಸಲು ಈ ಕೃತ್ಯ ವೆಸಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಜುಲೈ 10ರಂದು ಮಧ್ಯಾಹ್ನ 2.30ರ ವೇಳೆಗೆ ಜಯನಗರ ನಿವಾಸಿ ಸುಷ್ಮಾ ಅವರನ್ನು‌ ವಿಳಾಸ ಕೇಳಿದ್ದಾರೆ. ಕೊನೆಗೆ ಅದನ್ನ ನೀವೇ ತೋರಿಸಿ ಎಂದು ಕೇಳಿಕೊಂಡು ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ. ನಂತರ ತಮ್ಮ ಬಳಿ ಇದ್ದ ಲೈಟರ್ ತರಹದ ಪಿಸ್ತೂಲ್ ತೋರಿಸಿ, ಕಣ್ಣಿಗೆ ಬಟ್ಟೆ ಕಟ್ಟಿ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಸುಷ್ಮಾರ ಬಳಿ ಇದ್ದ ಚಿನ್ನದ ತಾಳಿ, ಬಳೆ, ಮೊಬೈಲ್, ಪರ್ಸ್ ಸೇರಿ‌ 4,74,000 ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಇನ್ನು ದೋಚಿದ್ದ ಚಿನ್ನಾಭರಣವನ್ನು ಜೇವರ್ಗಿಯ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟಿದ್ದರು. ಈ ಸಂಬಂಧ ಸಂತ್ರಸ್ತೆ ಸುಷ್ಮಾ ಸ್ಟೇಷನ್ ಬಜಾರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್​ ದಂಪತಿಯನ್ನು ಬಂಧಿಸಿದ್ದಾರೆ. ಅವರಿಂದ ‌150 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಮಾರುತಿ ಎರ್ಟಿಗಾ ಕಾರು, ಲೈಟರ್ ತರಹದ ಪಿಸ್ತೂಲ್ ಜಪ್ತಿ ಮಾಡಿದ್ದಾರೆ.