ಕೊನೆಕ್ಷಣದಲ್ಲಿ ಸುರೇಶ್ ಕುಮಾರ್ ನಾಮಪತ್ರ ವಾಪಸ- ನೂತನ ಸ್ಪೀಕರ್​​ ಸ್ಥಾನಕ್ಕೆ ರಮೇಶ್ ಕುಮಾರ್ ಆಯ್ಕೆ!

 

ವಿಧಾನಸಭೆಯ ನೂತನ ಸ್ಪೀಕರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಕಾಂಗ್ರೆಸ್​ನ ಹಿರಿಯ ನಾಯಕ ರಮೇಶ್ ಕುಮಾರ್ ಸರ್ವಾನುಮತದಿಂದ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯಿಂದ ಸ್ಪೀಕರ್​ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಿಜೆಪಿಯ ಹಿರಿಯ ನಾಯಕ ಶಾಸಕ ಸುರೇಶ್ ಕುಮಾರ್ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ನಿನ್ನೆ ಬಿಜೆಪಿಯಿಂದ ಸ್ಪೀಕರ್ ಸ್ಥಾನಕ್ಕಾಗಿ ಶಾಸಕ ಸುರೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಇನ್ನು ಜೆಡಿಎಸ್​ ಹಾಗೂ ಕಾಂಗ್ರೆಸ್​​ ಜಂಟಿ ಅಭ್ಯರ್ಥಿಯಾಗಿ ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಹೈಕಮಾಂಡ ಸೂಚನೆಯಂತೆ ನಾಮಪತ್ರ ವಾಪಸ ಪಡೆದಿದ್ದಾರೆ. ಈ ಬಗ್ಗೆ ಸುರೇಶ್ ಕುಮಾರ್ ತಮ್ಮ ಟ್ವಿಟರ್ ಹಾಗೂ ಪೇಸ್​ಬುಕ್​ನಲ್ಲಿ ಪ್ರಕಟಿಸಿದ್ದಾರೆ.

 

ನಾಮಪತ್ರ ವಾಪಾಸ್ ಪಡೆಯುವ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಸುರೇಶ್ ಕುಮಾರ್ ಅವರು, ‘ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಸಭಾಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗುವುದು ಸೂಕ್ತವೆಂದು ಅಭಿಪ್ರಾಯ ಪಟ್ಟ ಕಾರಣ ನನ್ನ ನಾಮಪತ್ರ ವಾಪಸ್ಸು ಪಡೆಯಲಿದ್ದೇನೆ’ ಎಂದಿದ್ದಾರೆ.ಬಳಿಕ ಸರ್ವಾನುಮತದಿಂದ ರಮೇಶ್ ಕುಮಾರ್ ಸ್ಪೀಕರ್ ಆಗಿ ಆಯ್ಕೆಯಾಗಿದ್ದು, ಹಂಗಾಮಿ ಸ್ಪೀಕರ್​ ಕೆ.ಜಿ.ಬೋಪಯ್ಯ ನೂತನ ಸ್ಪೀಕರ್ ರಮೇಶ್ ಕುಮಾರ್​ಗೆ ಅಧಿಕಾರ ಹಸ್ತಾಂತರಿಸಿದರು. ಬಳಿಕ ಅಧಿವೇಶನ ನಡೆದಿದ್ದು, ನೂತನ ಸ್ಪೀಕರ್ ಕುರಿತು ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್​ವೈ, ಸಿದ್ಧರಾಮಯ್ಯ,ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಕುಡಚಿ ಶಾಸಕ ಪಿ.ರಾಜೀವ್ ಸೇರಿದಂತೆ ಹಲವರು ಅಭಿನಂದನಾ ನುಡಿಗಳನ್ನು ಹಂಚಿಕೊಂಡರು.