ಬಿಜೆಪಿಯ ಫೈರ್​ ಬ್ರ್ಯಾಂಡ್​​ -ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹತ್ಯೆ ಯತ್ನ- ಬೆಚ್ಚಿಬಿದ್ದ ರಾಜ್ಯ!

 

ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿರುವ ಬೆನ್ನಲ್ಲೇ ಬಿಜೆಪಿಯ ಫೈರ್​ ಬ್ರ್ಯಾಂಡ್​ ಖ್ಯಾತಿಯ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹತ್ಯೆ ಯತ್ನ ನಡೆದಿದೆ ಎಂಬ ಸ್ಪೋಟಕ ವಿಚಾರವನ್ನು ಸ್ವತಃ ಕೇಂದ್ರ ಸಚಿವ ಹೆಗಡೆ ಹೇಳಿದ್ದು, ರಾಜ್ಯದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ನಿನ್ನೆ ಹಾವೇರಿಯಲ್ಲಿ ಘಟನೆ ನಡೆದಿದ್ದು, ಸಚಿವರ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆಯುವ ಪ್ರಯತ್ನ ನಡೆಸಿದ್ದು, ಬಳಿಕ ಹೆಗಡೆ ಎಸ್ಕಾರ್ಟ್​​ ವಾಹನಕ್ಕೆ ಡಿಕ್ಕಿಯಾಗಿದ್ದು, ಒಬ್ಬ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ.
ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಇದು ನನ್ನ ಹತ್ಯೆಯ ಯತ್ನ ಎಂದು ಸ್ವತಃ ಅನಂತಕುಮಾರ್ ತಮ್ಮ ಟ್ವಿಟರ್​​ ಅಕೌಂಟ್​ ನಲ್ಲಿ ಹೇಳಿಕೊಂಡಿದ್ದಾರೆ. ಅನಂತಕುಮಾರ ಹೆಗಡೆ ನಿನ್ನೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಂತಕುಮಾರ ಹೆಗಡೆ ಹತ್ಯೆ ಯತ್ನ ನಡೆದಿದೆ. ಅದೃಷ್ಟವಶಾತ ಅನಂತಕುಮಾರ ಹೆಗಡೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಅನಂತ್ ಕುಮಾರ್ ಹೆಗಡೆಯವರು ಕಾರ್ ನಲ್ಲಿ ಚಲಿಸುತ್ತಿದ್ದ ವೇಳೆ, ಅವರ ಕಾರನ್ನು ಟಾರ್ಗೆಟ್ ಮಾಡಿ ವಿರುದ್ಧ ದಿಕ್ಕಿನಿಂದ ಟ್ರಕ್ ನಿಂದ ಡಿಕ್ಕಿ ಹೊಡೆಸುವ ಯತ್ನ ನಡೆದಿದೆ. ಅದೃಷ್ಟವಶಾತ್ ಅನಂತ್ ಕುಮಾರ್ ಹೆಗಡೆಯವರ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣದಿಂದ ಸಚಿವರ ಕಾರಿನ ಬದಲಾಗಿ ಅವರ ಬೆಂಗಾವಲು ಪಡೆಯ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಟ್ರಕ್ ಡ್ರೈವರ್ ಆಗಿದ್ದಂತಹ ನಾಸಿರ್ ಎಂಬುವವನನ್ನು ತಕ್ಷಣ ಸ್ಥಳೀಯರು ಬೆಂಗಾವಲು ಪಡೆಯವರ ಸಹಾಯದಿಂದ ಹಿಡಿದಿದ್ದಾರೆ.
ಘಟನೆಯ ನಂತರ ಸಾಲು ಸಾಲು ಟ್ವೀಟ್ ಗಳನ್ನು ಮಾಡಿರುವ ಅನಂತ್ ಕುಮಾರ್ ಹೆಗಡೆಯವರು, ಇದು ನನ್ನನ್ನು ಹತ್ಯೆ ಮಾಡುವ ಸಂಚು ಎಂದು ಹೇಳಿದ್ದಾರೆ. ಅದೃಷ್ಟವಷಾತ್ ನನ್ನ ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಟ್ರಕ್ ನನ್ನ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದಿದೆ. ನನ್ನ ಸ್ಟಾಫ್ ಓರ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಡ್ರೈವರ್ ನಾಸಿರ್ ನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದೇವೆ. ಆದಷ್ಟು ಬೇಗ ವಿಚಾರಣೆ ನಡೆಸಿ ಇದರ ಹಿಂದಿರುವ ಸಂಚನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಘಟನೆ ಬಗ್ಗೆ ಈಗಾಗಲೇ ಬಿಜೆಪಿ ನಾಯಕರಾದ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಹಾಗೂ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದು, ಇದೊಂದು ಗಂಭೀರ ಪ್ರಕರಣ. ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆಹಚ್ಚಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸಚಿವರ ಹತ್ಯೆ ಯತ್ನ ಆರೋಪ ರಾಜ್ಯವನ್ನೇ ತಲ್ಲಣಗೊಳಿಸಿದೆ.