ಲಿಂಗಾಯತ-ವೀರಶೈವರ ತಂದೆಯ ಕುರಿತಾದ ಹೇಳಿಕೆ ಹಿನ್ನಲೆಯೇನು ? ಬಸವಮೃತ್ಯುಂಜಯ ಸ್ವಾಮೀಜಿ ಹೇಳ್ತಾರೆ. ಕೇಳಿ !!

ಒಬ್ಬ ತಂದೆಯನ್ನು ಹೊಂದಿರುವವನು ಲಿಂಗಾಯತ. ಐದು ತಂದೆಯನ್ನು ಹೊಂದಿರುವವನು ವೀರಶೈವ ಎಂದು ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕೂಡಲಸಂಗಮದ ಬಸವ ಮೃತ್ಯುಂಜಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸ್ವಾಮೀಜಿ ಮಾತು ಹಲವು ಕೋನಗಳಲ್ಲಿ ಚರ್ಚೆಯಾಗಿತ್ತು. ಬಸವ ಮೃತ್ಯುಂಜಯ ಸ್ವಾಮೀಜಿ ಯಾಕಾಗಿ ಇಂತಹ ಹೇಳಿಕೆ ಕೊಟ್ಟರು ಎಂಬ ಬಗ್ಗೆ ಬಿಟಿವಿ ಜೊತೆ ವಿಸ್ತೃತವಾಗಿ ಮಾತನಾಡಿದ್ದಾರೆ.

” ಬಸವಣ್ಣ ನಮ್ಮ ತಂದೆ. ಆ ಕಾರಣಕ್ಕಾಗಿ ಲಿಂಗಾಯತರಿಗೆ ಒಂದೇ ತಂದೆ ಅಂದೆ. ವೀರಶೈವರು ಪಂಚಾಚಾರ್ಯರ ಅನುಯಾಯಿಗಳು. ಅವರಿಗೆ ಪಂಚ ಪೀಠಗಳಿವೆ. ಪಂಚ ಪೀಠಗಳನ್ನೂ ತಂದೆ ಎಂದು ಉಲ್ಲೇಖಿಸಿ ಐವರು ತಂದೆಯರು ಎಂದಿದ್ದೆ. ಶಿಷ್ಯರನ್ನು ಮಕ್ಕಳು ಎನ್ನುವುದರಿಂದ ಹಾಗೆ ಹೇಳಿರುವೆ” ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ತಂದೆ ಎನ್ನುವ ಪದವನ್ನು ಲೌಕಿಕವಾಗಿ ಅರ್ಥೈಸಬಾರದು. ತಾತ್ವಿಕವಾಗಿ ಹೇಳಿರುವಂತದ್ದನ್ನು ಅದೇ ರೀತಿ ಅರ್ಥೈಸಿಕೊಳ್ಳಬೇಕು. ಈ ಗೊಂದಲದಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ.

ಇನ್ನೂ ಮುಂದುವರಿದ ಮಾತನಾಡಿದ ಸ್ವಾಮೀಜಿ, ವೀರಶೈವರೂ ನಮ್ಮ ಬಂಧುಗಳೇ. ಎಲ್ಲರ ಜೊತೆಗೂಡಿ ಲಿಂಗಾಯತ ಧರ್ಮಕ್ಕೆ ಸಾಂವಿದಾನಿಕ ಮಾನ್ಯತೆಗಾಗಿ ಹೋರಾಟ ಮಾಡುತ್ತೇವೆ. ನಾನು ಹೋರಾಟದ ಮುಂಚೂಣಿಯಲ್ಲಿ ಇರೋದ್ರಿಂದ ಬೆದರಿಕೆಗಳು ನಿರಂತರ ಬರುತ್ತಿದೆ. ಅವೆಲ್ಲವನ್ನೂ ಮೆಟ್ಟಿ ನಿಂತು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಸ್ವಾಮೀಜಿ ಹೇಳಿದ್ದಾರೆ
—–