ಬಿರುಬೇಸಿಗೆಯಲ್ಲಿ ಬೆಂಗಳೂರಿಗರಿಗೆ ಜಲಮಂಡಳಿ ಶಾಕ್​​! ಗಗನಕ್ಕೇರಲಿದೆ ಕಾವೇರಿ ನೀರಿನ ದರ!!

ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಈ ಬಿರುಬೇಸಿಗೆಯ ಬಿಸಿಲಿನ ತಾಪ ಹಾಗೂ ನೀರಿನ ಬರದ ನಡುವೆ  ಬೆಂಗಳೂರು ಜಲಮಂಡಳಿ ಕಾವೇರಿ ನೀರಿನ ಶುಲ್ಕ ಏರಿಕೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಜನರಿಗೆ ಶಾಕ್​ ನೀಡಲು ಮುಂದಾಗಿದೆ.

ad

ಬೆಂಗಳೂರು ಜಲಮಂಡಳಿ ಕಾವೇರಿ ನೀರಿನ ದರ ಶೇ.15 ರಷ್ಟು ಏರಿಕೆ ಮಾಡಲು ಪ್ರಸ್ತಾವನೆ ಸಿದ್ಧಪಡಿಸಿದ್ದು, 2014 ರ ಬಳಿಕ ದರವನ್ನು ಪರಿಷ್ಕರಣೆ ಮಾಡಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಜಲಮಂಡಳಿ, ದರವನ್ನು ಪರಿಷ್ಕರಣೆ ಮಾಡಿದ್ದು, ಶೀಘ್ರದಲ್ಲಿಯೇ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ನೀರಿನ ದರ ಏರಿಕೆ ಮಾಡಲು ಜಲಮಂಡಳಿ ಆಂತರಿಕ ಸಮಿತಿಯನ್ನು ರಚಿಸಿದ್ದು, ಪ್ರಸ್ತುತ ಖರ್ಚು, ವೆಚ್ಚಗಳನ್ನು ಲೆಕ್ಕ ಹಾಕುವುದರೊಂದಿಗೆ ಮುಂದಿನ ಐದಾರು ವರ್ಷಕ್ಕೆ ಲೆಕ್ಕ ಸರಿದೂಗುವಂತೆ ನೋಡಿಕೊಂಡು ದರಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ನೀರಿನ ದರ ಏರಿಕೆ ಸಂಬಂಧ ಜಲಮಂಡಳಿಯು ಮೇ 20 ರಂದು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ಪ್ರಸ್ತುತ ಗೃಹ ಸಂಪರ್ಕಕ್ಕೆ ಪ್ರತಿ ಸಾವಿರ ಲೀಟರ್‌ಗೆ 7 ರೂ., 8 ರಿಂದ 25 ಸಾವಿರ ಲೀಟರ್‌ಗೆ 11 ರೂ., 25 ರಿಂದ 50 ಸಾವಿರ ಲೀಟರ್‌ಗೆ 26 ರೂ., 50 ಸಾವಿರ ಮೇಲ್ಪಟ್ಟು ನೀರು ಬಳಸುವ ಕಟ್ಟಡಗಳಿಗೆ ಪ್ರತಿ ಸಾವಿರ ಲೀಟರ್‌ಗೆ 45 ರೂ. 8 ಸಾವಿರ ಲೀಟರ್‌ವರೆಗೆ ನೀರು ಬಳಸುವ ಕಟ್ಟಡಗಳಿಗೆ 14 ರೂ.ಒಳಚರಂಡಿ ಶುಲ್ಕವಿದ್ದು, ಅದರ ಮೇಲ್ಪಟ್ಟ ಕಟ್ಟಡಗಳಿಗೆ ಶೇ.25 ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ ಬೇಸಿಗೆಯಲ್ಲಿ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದ್ದು ಕಾವೇರಿ ನೀರಿಗೆ ಬೇಡಿಕೆ ಹೆಚ್ಚಿದೆ. ಇಂತಹ ಸಮಯದಲ್ಲಿಯೇ ನೀರಿನ ದರವನ್ನು ಏರಿಕೆ ಮಾಡಲು ಜಲಮಂಡಳಿ ಮುಂದಾಗಿದೆ.

ಇನ್ನು ಸಗಟು ಬಳಕೆದಾರರಿಗೆ ವಿಭಿನ್ನ ದರಗಳಿವೆ. ಕೈಗಾರಿಕೆ ಹಾಗೂ ಈಜುಕೊಳ, ಬಿಐಎಎಲ್, ಬಿಡದಿ ಕೈಗಾರಿಕೆ ಪ್ರದೇಶಗಳಿಗೆ ಸಾವಿರ ಲೀಟರ್‌ಗೆ 90 ರೂ. ದರವಿದೆ. ಸಗಟು ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 10 ರೂ. ದರ ನಿಗದಿಯಾಗಿದ್ದು, ಶೇ. 25 ಒಳಚರಂಡಿ ಶುಲ್ಕವಿದೆ. ಅಗರ ಗ್ರಾಪಂ ವ್ಯಾಪ್ತಿ, ಬಿಬಿಎಂಪಿ ವ್ಯಾಪ್ತಿಯ 7 ಸಿಎಂಸಿ, 1 ಟಿಎಂಸಿ ವ್ಯಾಪ್ತಿಯಲ್ಲಿ ಪ್ರತಿ ಸಾವಿರ ಲೀಟರ್‌ಗೆ 19 ರೂ. ಹಾಗೂ ಶೇ.25 ಒಳಚರಂಡಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.