ಹೊಟೇಲ್ ಮಾಲೀಕನ ಮೇಲೆ ಎಸಿಪಿ ದೌರ್ಜನ್ಯ- ಲಾಠಿ ಚಾರ್ಜಗೆ ಕಂಗಾಲಾದ ಗ್ರಾಹಕರು!!

ಬೆಂಗಳೂರಿನಲ್ಲಿ ತಡರಾತ್ರಿಯವರೆಗೆ ಹೊಟೇಲ್​ ಬಾಗಿಲು ತೆರೆದು ಗ್ರಾಹಕರಿಗೆ ಊಟ ಬಡಿಸುತ್ತಿದ್ದ ಮಾಲೀಕನಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರ್.ಟಿ.ನಗರ ದಿನ್ನೂರ ರಸ್ತೆಯಲ್ಲಿರುವ ಶೆಟ್ಟಿ ಲಂಚ್​ ಹೋಂನಲ್ಲಿ ಘಟನೆ ನಡೆದಿದೆ.

ಆರ್.ಟಿ.ನಗರದ ಶೆಟ್ಟಿ ಲಂಚ್ ಹೋಂನಲ್ಲಿ ನವೆಂಬರ್​​ 9 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಹಕರು ಊಟ ಮಾಡುತ್ತಿದ್ದರಿಂದ 11.50 ರವರೆಗೆ ಹೊಟೇಲ್ ಬಾಗಿಲು ತೆರೆದಿತ್ತು. ಈ ವೇಳೆ ಗಸ್ತಿನಲ್ಲಿದ್ದ ಎಸಿಪಿ ಹಾಗೂ ಸಿಬ್ಬಂದಿ ಹೋಟೇಲ್ ಗೆ ಬಂದಿದ್ದು, ಮಾಲೀಕನ ಮೇಲೆ ದರ್ಪ ತೋರಿಸಿ ಮನಬಂದಂತೆ ಥಳಿಸಿದ್ದಾರೆ. ಹೊಟೇಲ್​ ಮಾಲೀಕ ರಾಜೇಶ್ ಮಾತ್ರವಲ್ಲದೆ ಗ್ರಾಹಕರಿಗೂ ಪೊಲೀಸರು ಥಳಿಸಿದ್ದಾರೆ. ನಿಯಮ ಮೀರಿ ಹೊಟೇಲ್​ ತೆರೆದಿದ್ದು ತಪ್ಪಾಗಿದ್ದರೂ ಕೂಡ ಪೊಲೀಸರು ಅಮಾನವೀಯವಾಗಿ ಥಳಿಸಿರೋದು ಪೊಲೀಸರ ದರ್ಪಕ್ಕೆ ಸಾಕ್ಷಿಯಾಗಿದೆ.

ಜೆ.ಸಿ.ನಗರ ಎಸಿಪಿ ಮಂಜುನಾಥ ಬಾಬು ಲಾಠಿಯಿಂದ ಮನಬಂದಂತೆ ಥಳಿಸಿರುವ ದೃಶ್ಯ ಹೊಟೇಲ್​ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೀಗ ಈ ದೃಶ್ಯಾವಳಿಯನ್ನು ಹೊಟೇಲ್ ಮಾಲೀಕರು ಮಾಧ್ಯಮಗಳಿಗೆ ನೀಡಿದ್ದಾರೆ. ಅಲ್ಲದೇ ನ್ಯಾಯಕ್ಕೆ ಆಗ್ರಹಿಸಿದ್ದಾರೆ.