ಹೃದಯರೋಗಿಗಳಿಗೆ ಸಹಾಯಹಸ್ತ ಚಾಚಿದ ಬಿಬಿಎಂಪಿ- ಬಡವರಿಗೆ ಇನ್ನು ಉಚಿತವಾಗಿ ಸ್ಟಂಟ್​​ ಅಳವಡಿಕೆ

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬೆಂಗಳೂರು ಮಂದಿಗೆ ಇಲ್ಲಿದೆ ಸಿಹಿಸುದ್ದಿ. ಹೃದಯ ಸಂಬಂಧಿ ಕಾಯಿಲೆ ಇರೋರಿಗೆ ಉಚಿತ‌ ಸ್ಟಂಟ್ ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

 198 ವಾರ್ಡ್‌ಗಳಲ್ಲಿ ಹೃದಯ ಸಮಸ್ಯೆಗೊಳಗಾಗಿರುವ ಕಡು ಬಡವರಿಗೆ ಉಚಿತವಾಗಿ ಆ್ಯಂಜಿಯೋಪ್ಲಾಸ್ಟ್‌ ಹಾಗೂ ಸ್ಟಂಟ್‌ ಅಳವಡಿಸಲು ಬಿಬಿಎಂಪಿ ನೆರವು ನೀಡಲಿದೆ. ಪ್ರತಿ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯರು ಇಬ್ಬರು ಅಥವಾ ಮೂವರು ಬಡವರನ್ನ ಗುರುತಿಸಿ ಅವರಿಗೆ ಉಚಿತವಾಗಿ ಸ್ಟಂಟ್ ಅಳವಡಿಸಲಾಗುತ್ತದೆ. ಈ ಬಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರ ಜೊತೆ ಬಿಬಿಎಂಪಿ ಮಾತುಕತೆ ನಡೆಸಲಾಗಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ಬಿಬಿಎಂಪಿ ಮೇಯರ್ ಸಂಪಂತ್‌ ರಾಜ್ ತಿಳಿಸಿದರು.

ಬಡವರಿಗೆ ಉಚಿತವಾಗಿ ಆ್ಯಂಜಿಯೋಫ್ಲಾಸ್ಟ್ ಹಾಗೂ ಸ್ಟಂಟ್ ಅಳವಡಿಸಲಾಗುವುದು ಎಂದು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕೆ ಸುಮಾರು ನಾಲ್ಕು ಕೋಟಿ ಹಣವನ್ನ ಮೀಸಲಿಡಲಾಗಿತ್ತು. ಅದರಂತೆ ಈಗಾಗಲೇ ಸುಮಾರು ಮೂರುವರೆ ಕೋಟಿ ಹಣವನ್ನ ಜಯದೇವ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಮೇಯರ್​ ಸಂಪತ್ ರಾಜ್​​ ಬಿಟಿವಿನ್ಯೂಸ್​ಗೆ ಮಾಹಿತಿ ನೀಡಿದ್ದು, ಬಡವರಿಗೆ ನೆರವಾಗುವ ದೃಷ್ಟಿಯಿಂದ ಬಿಬಿಎಂಪಿ ಈ ಪ್ರಯತ್ನಕ್ಕೆ ಮುಂಧಾಗಿದೆ ಎಂದರು.