ಸಿಲಿಕಾನ ಸಿಟಿಯಲ್ಲಿ ರಾಜಕಾಲುವೆಗೆ ಮತ್ತೊಂದು ಮಗು ಬಲಿ

ನಗರದಲ್ಲಿ ಮತ್ತೊಮ್ಮೆ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಾಳಿಬದುಕಬೇಕಿದ್ದ ಮಗುವೊಂದು ಪ್ರಾಣ ಕಳೆದುಕೊಂಡಿದೆ.

ad


 ಹೌದು ನಗರದ ದೊಡ್ಡಬೊಮ್ಮಸಂದ್ರದ ಬಳಿಯಲ್ಲಿ ಘಟನೆ ನಡೆದಿದ್ದು, ರಾಜಕಾಲುವೆ ಬಿದ್ದು ಎರಡೂವರೆ ವರ್ಷದ ಮಗು ತನುಶ್ರೀ ಸಾವನ್ನಪ್ಪಿದ್ದಾಳೆ. ಕಲುಬುರಗಿ ಮೂಲದ ಕುಟುಂಬವೊಂದು ಗಾರೆ ಕೆಲಸಕ್ಕೆ ಬಂದಿದ್ದು, ದೊಡ್ಡಬೊಮ್ಮಸಂದ್ರದ ರಾಜಕಾಲುವೆ ಬಳಿ ಟೆಂಟ್​ ಹಾಕಿಕೊಂಡು ವಾಸವಾಗಿತ್ತು. ಇಂದು ಮುಂಜಾನೆ ಮನೆ ಬಳಿ ಆಟವಾಡುತ್ತಿದ್ದ ವೇಳೆ ತನುಶ್ರೀ ಆಯತಪ್ಪಿ ರಾಜಕಾಲುವೆಗೆ ಬಿದ್ದ ಪರಿಣಾಮ ಸಾವನ್ನಪ್ಪಿದೆ. ಕಳೆದ ಎಂಟು ವರ್ಷಗಳಿಂದ ತನುಶ್ರೀ ಪೋಷಕರು ಇದೇ ಟೆಂಟ್​​ನಲ್ಲಿ ವಾಸವಾಗಿದ್ದರು.

 

ವಿದ್ಯಾರಣ್ಯ ಪೊಲೀಸರು ತನುಶ್ರೀ ಶವವನ್ನು ರಾಜಕಾಲುವೆಯಿಂದ ಮೇಲಕ್ಕೆ ಎತ್ತಿದ್ದು, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಹೆತ್ತ ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಎಂಪಿ ಅಧಿಕಾರಿಗಳು ಬೇಕಾಬಿಟ್ಟಿ ರಾಜಕಾಲುವೆ ನಿರ್ಮಿಸಿ ಬಿಟ್ಟಿದ್ದು, ಅದರ ಸುತ್ತ ಮಕ್ಕಳು ಆಟವಾಡುತ್ತಾರೆ. ಆದರೇ ಕಾಲುವೆಗೆ ಯಾವುದೇ ತಡೆಗೋಡೆ ನಿರ್ಮಿಸಲಾಗಿಲ್ಲ. ಹೀಗಾಗಿ ಈ ರೀತಿ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.