ಬಿಸಿಯೂಟ ಕಾರ್ಯ ಕರ್ತೆಯರ ಪ್ರತಿಭಟನೆ ಸಿಕ್ಕಿದ್ದು ಬರಿ ಭರವಸೆ!!

ಕಳೆದ ನಾಲ್ಕುದಿನಗಳಿಂದ ರಾಜಧಾನಿಯಲ್ಲಿ ನೂರಾರು ಬೇಡಿಕೆ ಹೊತ್ತು ಪ್ರತಿಭಟನೆ ನಡೆಸಿದ್ದ ಬಿಸಿಯೂಟದ ತಾಯಂದಿರು ಕೇವಲ ಭರವಸೆ ಜೊತೆ ಮರಳುವಂತಾಗಿದೆ. ಸಿಎಂ ಸಭೆಯಲ್ಲಿ ಬೇಡಿಕೆ ಈಡೇರುವ ಭರವಸೆ ದೊರೆತಿದ್ದ ಹಿನ್ನೆಲೆಯಲ್ಲಿ ಮಳೆ-ಚಳಿ ಎನ್ನದೇ ಪ್ರತಿಭಟನೆ ನಡೆಸಿದ್ದ ಮಹಿಳೆಯರು ಮನೆಯತ್ತ ಮುಖಮಾಡಿದ್ದಾರೆ.

ಕನಿಷ್ಠ ವೇತನ, ಇಎಸ್‌ಐ, ಪಿಎಫ್‌ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಬಿಸಿಯೂಟದ ಕಾರ್ಯಕರ್ತರು ಬೆಂಗಳೂರಿಗೆ ಬಂದಿದ್ದರು. ಈ ಬಾರಿಯಾದರೂ ಶಾಶ್ವತ ಪರಿಹಾರ ಪಡೆದುಕೊಂಡೇ ಊರಿಗೆ ವಾಪಸ್‌ ಹೋಗಬೇಕು ಎಂದು ನಿರ್ಧರಿಸಿದ್ದರು. ಮೂರು ದಿನಗಳಿಂದ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಶುಕ್ರವಾರ ಸಂಜೆ ಬಿಸಿಯೂಟದ ಕಾರ್ಯಕರ್ತೆಯರ ಮುಖಂಡರ ಜೊತೆ ಸಿಎಂ ಸಿದ್ದರಾಮಯ್ಯ ಸುದೀರ್ಘ ಸಭೆ ನಡೆಸಿದರು. ಈ ವೇಳೆ ಬಿಸಿಯೂಟದ ತಯಾರಕರ ಹೋರಾಟದ ನೇತೃತ್ವ ವಹಿಸಿದ್ದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹಾಗೂ ಎಐಟಿಯುಸಿ ಮುಖಂಡರು ಸಿಎಂ ಸಿದ್ದರಾಮಯ್ಯಗೆ ಬೇಡಿಕೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ, ಸದ್ಯ 2200 ರಿಂದ 2600ಕ್ಕೆ ಹೆಚ್ಚಳ ಮಾಡುವುದಾಗಿ ತಿಳಿಸಿದರು.

ಆದರೆ, ಮೂರು ಸಾವಿರಕ್ಕೆ ಹೆಚ್ಚಳ ಮಾಡುವಂತೆ ಬಿಸಿಯೂಟ ಕಾರ್ಯಕರ್ತರ ಮುಖಂಡರು ಒತ್ತಾಯಿಸಿದರು. ಇದಕ್ಕೆ ಬಗ್ಗದ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಉತ್ತಮ ಅನುದಾನ ನೀಡುವುದಾಗಿ, ಸಕರಾತ್ಮಕವಾಗಿ ಸ್ಪಂದಿಸಿದರು. ಜೊತೆಗೆ ಪಿಎಫ್ ಹಾಗೂ ಇಎಸ್‌ಐ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಚರ್ಚಿಸೋದಾಗಿ ಭರವಸೆ ನೀಡಿದರು. ಸಿದ್ದರಾಮಯ್ಯ ನೀಡಿದ ಭರವಸೆಗೆ ಒಪ್ಪಿದ ಬಿಸಿಯೂಟದ ಕಾರ್ಯಕರ್ತರು ಪ್ರತಿಭಟನೆ ವಾಪಸ್‌ ಪಡೆದರು. ರಾತ್ರಿ 11 ಗಂಟೆ ವೇಳೆಗೆ ಮುಷ್ಕರ ಕೈಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳಿದರು. ಕೆಲವರು ಫ್ರೀಡಂಪಾರ್ಕ್‌ ಹಾಗೂ ಸಿಟಿ ರೈಲ್ವೇ ನಿಲ್ದಾಣದಲ್ಲೇ ರಾತ್ರಿ ವಾಸ್ತವ್ಯ ಹೂಡಿದರು. ಇನ್ನು, ಬಾಗಲಕೋಟೆ, ಬೀದರ್ ಸೇರಿದಂತೆ ಕೆಲವರು ದೂರಾದೂರುಗಳಿಗೆ ತೆರಳಲು ಶನಿವಾರ ಸಂಜೆ 7 ಗಂಟೆ, ರಾತ್ರಿ 11 ಗಂಟೆವರೆಗೂ ರೈಲು ವ್ಯವಸ್ಥೆ ಇಲ್ಲ. ಬಸ್‌ ದುಪ್ಪಟ್ಟು ದರವನ್ನ ಭರಿಸಲು ಹಣವಿಲ್ಲ. ಹೀಗಾಗಿ, ರಾತ್ರಿವರೆಗೂ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲೇ ವಾಸ್ತವ್ಯ ಹೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.