ರಾಜ್ಯದಲ್ಲಿ ಕಾಂಗ್ರೆಸ್​ ಎಕ್ಸಿಟ್​ ಡೋರ್​ನಲ್ಲಿ ನಿಂತಿದೆ- ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ- ಅರಮನೆ ಮೈದಾನದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಕರ್ನಾಟಕದಲ್ಲಿ ಕಾಂಗ್ರೆಸ್​ ಎಕ್ಸಿಟ್​ ಡೋರ್​ನಲ್ಲಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ​ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಬಹುನೀರಿಕ್ಷಿತ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ ಕೇಂದ್ರ ರಾಜ್ಯಕ್ಕೆ ನೀಡಿದ ಅನುದಾನಗಳ ಮಾಹಿತಿ ನೀಡುತ್ತಿದ್ದಾರೆ.

ಕರ್ನಾಟಕದ ನನ್ನ ಪ್ರೀತಿಯ ಬಂಧುಭಗಿನಿಯರೇ, ನಿಮಗೆಲ್ಲಾ ನಮಸ್ಕಾರಗಳು. ನಾಡಪ್ರಭುಕೆಂಪೇಗೌಡ್​​, ಬಸವೇಶ್ವರ್, ಮಾದಾರ ಚೆನ್ನಯ್ಯ, ಕಿತ್ತೂರು ಚೆನ್ನಮ್ಮ, ಸರ್​ ಎಂ.ವಿಶ್ವೇಶ್ವರಯ್ಯನಂತಹ ಮಹಾನ ಪುರುಷರ ನಾಡು ಇದು ಎಂದು ಮೋದಿ ಅಚ್ಚ ಕನ್ನಡದಲ್ಲಿ ಭಾಷಣ ಆರಂಭಿಸಿ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರನ್ನು ಪುಳಕಿತಗೊಳಿಸಿದ್ದಾರೆ. ಕರ್ನಾಟಕದಲ್ಲಿ ಬದಲಾವಣೆಗಾಗಿ ಬಿಜೆಪಿಯನ್ನು ಗೆಲ್ಲಿಸಿ. ಹವಾಯಿ ಚಪ್ಪಲಿ ಹಾಕಿಕೊಂಡು ನಡೆಯುವ ವ್ಯಕ್ತಿಯೂ ಹವಾಯಜಹಾಜ್​( ಪ್ಲೈಟ್​​ನಲ್ಲಿ ) ನಲ್ಲಿ ಪ್ರಯಾಣಿಸಬೇಕೆಂಬುದು ನನ್ನ ಕನಸು. ಈ ಭೂಮಿ ಭಾರತದ ಗೌರವ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಕೌಂಟ್ ಡೌನ್ ಶುರುವಾಗಿದೆ. ಕಾಂಗ್ರೆಸ್ ಎಕ್ಸಿಟ್‌ ಗೇಟ್‌ನಲ್ಲಿ ನಿಂತಿದೆ. ಕರ್ನಾಟಕವನ್ನ ಕಾಂಗ್ರೆಸ್ ಮುಕ್ತವಾಗಿಸುತ್ತೇವೆ. ಈ ರಾಜ್ಯವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತವಾಗಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದರು. ಕೇಂದ್ರದ ಹಲವು ಯೋಜನೆಗಳು ನಿಮ್ಮನ್ನು ತಲುಪುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ಆಗಿದ್ದರೆ ಯೋಜನೆ ನಿಮ್ಮನ್ನು ತಲುಪುತ್ತಿತ್ತು.

ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ರಾಜ್ಯದ ಬಡವರು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದಾರೆ. ಜನಧನ್ ಯೋಜನೆಯಿಂದ ರಾಜ್ಯದ 1.70 ಲಕ್ಷ ಜನರು ಬ್ಯಾಂಕ್​​ ಮೆಟ್ಟಿಲೇರುವಂತಾಗಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಸ್ವಚ್ಛ ಭಾರತ ಯೋಜನೆಯಡಿ ಲಕ್ಷಾಂತರ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಬಡವರ ಬದುಕನ್ನು ಹಸನಾಗಿಸುವುದು ಬಿಜೆಪಿಯ ಕಾರ್ಯ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರದಿಂದ ಬಂದ ಅನುದಾನ ರಾಜ್ಯದ ಜನರಿಗೆ ತಲುಪಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯಕ್ಕೆ 73,000 ಕೋಟಿ ಸಿಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಬಂದಾಗ ರಾಜ್ಯಕ್ಕೆ 2 ಲಕ್ಷ ಕೋಟಿಗೂ ಅಧಿಕ ಅನುದಾನ ಸಿಗುತ್ತಿದೆ ಎಂದು ಮೋದಿ ತಮ್ಮ ಸಾಧನೆ ಪಟ್ಟಿಯನ್ನು ಬಿಚ್ಚಿಟ್ಟಿದ್ದಾರೆ. ಮೋದಿ ಭಾಷಣಕ್ಕೂ ಮುನ್ನ ಕರ್ನಾಟಕದ ಪರವಾಗಿ ನರೇಂದ್ರ ಮೋದಿಯವರಿಗೆ ಶಾಲು ಹೊದೆಸಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ನೀಡಿ ಗೌರವಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಸಂಸದ ಬಿ.ಶ್ರೀರಾಮುಲು, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಮಾಜಿ ಸಚಿವರಾದ ಆರ್.ಅಶೋಕ್ ಮುಂತಾದವರು ಉಪಸ್ಥಿತರಿದ್ದರು.