ಮಾಮೂಲಿಗಾಗಿ ಕಳ್ಳರಂತೆ ಕಿತ್ತಾಡಿಕೊಂಡ ಪೊಲೀಸರು.

ಜನರಿಗೆ ರಕ್ಷಣೆ ನೀಡಿ, ಸಮಾಜದ ಸ್ವಾಸ್ಥ್ಯ ಕಾಪಾಡ ಬೇಕಾದ ಪೊಲೀಸರೇ ಪೊಲೀಸ್ ಠಾಣೆಯಲ್ಲಿ ಪಕ್ಕಾ ರೌಡಿಗಳಂತೆ ಕೈ-ಕೈ ಮಿಲಾಯಿಸುವಂತೆ ಜಗಳವಾಡಿದ ಘಟನೆ ನಿನ್ನೆ ಬೆಂಗಳೂರು ಹೊರವಲಯದ ಮಹದೇವಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಂದರ್-ಬಾಹರ್ ಅಡ್ಡೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಹಣ ಹಂಚಿಕೊಳ್ಳುವ ವಿಚಾರಕ್ಕೆ ಜಗಳ ನಡೆದಿದೇ ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಡಿಸಿಪಿ ಓರ್ವ ಎಎಸ್​ಐ ಮತ್ತು ಓರ್ವ ಹೆಡ್​ ಕಾನ್ಸಟೇಬಲ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.


ನಿನ್ನೆ ಸಂಜೆ ವೇಳೆಗೆ ಮಹದೇವಪುರ ವ್ಯಾಪ್ತಿಯ ನಾರಾಯಣಪುರದಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಅಡ್ಡೆ ಮೇಲೆ ಎಎಸ್​ಐ ಅಮೃತೇಶ್ ಹಾಗೂ ಮುಖ್ಯಪೇದೆ ಜಯಕಿರಣ ದಾಳಿ ನಡೆಸಿದ್ದು, ದಾಳಿ ವೇಳೆ 10 ಜನರನ್ನು ಬಂಧಿಸಿ 42 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದರು. ಆದರೇ ಪೊಲೀಸ್ ಠಾಣೆಗೆ ಆರೋಪಿಗಳನ್ನು ಕರೆತಂದ ಅಮೃತೇಶ್​ ಮತ್ತು ಜಯಕಿರಣ ಸಂಜೆ 8 ಗಂಟೆ ವೇಳೆಗೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನು ಪ್ರಶ್ನಿಸಿದ ಠಾಣೆಯ ಸಬ್​ ಇನ್ಸಪೆಕ್ಟರ್ ಅಶ್ವತ್ಥ ಅವರೊಂದಿಗೆ ಜಗಳಕ್ಕಿಳಿದ ಎಎಸ್​ಐ ಮತ್ತು ಮುಖ್ಯಪೇದೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವಾಡಿದ್ದಾರೆ. ಬಳಿಕ ಪಿಎಸ್​ಐ ಅಶ್ವತ್ಥ ಇವರಿಬ್ಬರ ವರ್ತನೆ ಕುರಿತು ಠಾಣೆಯ ಡೈರಿಯಲ್ಲಿ ನಮೂದಿಸಿ ಡಿಸಿಪಿ ಗಮನಕ್ಕೆ ತಂದಿದ್ದಾರೆ. ಮಾಹಿತಿ ಪಡೆದ ಡಿಸಿಪಿ ಅಬ್ದುಲ್ ಅಹದ್ ಎಎಸ್​​ಐ ಅಮೃತೇಶ್ ಮತ್ತು ಎಚ್​ಸಿ ಜಯಕಿರಣರನ್ನು ಅಮಾನತುಗೊಳಿಸಿದ್ದು, ಪ್ರಕರಣವನ್ನು ಮಾರತಹಳ್ಳಿ ಎಸಿಪಿಯವರಿಗೆ ಹೆಚ್ಚಿನ ತನಿಖೆಗೆ ವಹಿಸಿದ್ದಾರೆ. ಒಟ್ಟಿನಲ್ಲಿ ನ್ಯಾಯಕಾಪಾಡಬೇಕಾದ ಪೊಲೀಸ್ ಠಾಣೆಯಲ್ಲೇ ಪೊಲೀಸರೇ ಸಮವಸ್ತ್ರದಲ್ಲಿ ಕಳ್ಳರಂತೆ ಕಿತ್ತಾಡಿಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here