ಬಿಜೆಪಿಗೇ ನಿದ್ದೆಗೆಡಿಸಿದ ಬಿಜೆಪಿ ಪರಿವರ್ತನಾ ರ‌್ಯಾಲಿ !! ಹೋದಲ್ಲೆಲ್ಲಾ ಗದ್ದಲ !!

ಕಾಂಗ್ರೆಸ್ ನಿದ್ದೆಗೆಡಿಸಬೇಕಿದ್ದ ಬಿಜೆಪಿ ಪರಿವರ್ತಾನಾ ರ‌್ಯಾಲಿ ಬಿಜೆಪಿಗರದ್ದೇ ನಿದ್ದೆಗೆಡಿಸುತ್ತಿದೆ. ಮೊನ್ನೆ ವೇದಿಕೆಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಬಿಎಸ್ ವೈ ಮೈಕ್ ಕಿತ್ತುಕೊಂಡ ಘಟನೆ ನಡೆದಿದ್ದರೆ ಇಂದುಬೀದರ್ ಪರಿವರ್ತನಾ ಯಾತ್ರೆಯಲ್ಲಿ ವೇದಿಕೆಯಲ್ಲೇ ರಂಪಾಟವಾಗಿದೆ. ಬಿಜೆಪಿ ಪರಿವರ್ತನಾ ರ‌್ಯಾಲಿಯಲ್ಲಿ ಬಿಜೆಪಿಗಿಂತ ಕೆಜೆಪಿ ಮಾಜಿ ಅಭ್ಯರ್ಥಿಗಳಿಗೇ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂಬುದು ಮೂಲ ಬಿಜೆಪಿಗರ ಆಕ್ರೋಶಕ್ಕೆ ಕಾರಣ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧೆ ಮಾಡಿದ ಜಾದವ್ ರನ್ನು ಪರಿವರ್ತನಾ ರಾಲಿ ಸ್ಟೇಜ್ ಗೆ ಬರಲು ಅವಕಾಶ ನೀಡಬಾರದು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.ಇದೇ ವೇಳೆ ಬಿಜೆಪಿ-ಕೆಜೆಪಿ ಕಾರ್ಯಕರ್ತರ ಮಧ್ಯೆ ನೂಕುನುಗ್ಗಲು ನಡೆದಿದೆ.

ಇಷ್ಟಕ್ಕೇ ಸುಮ್ಮನಾಗದ ಬಿಜೆಪಿ ಮೂಲ ಕಾರ್ಯಕರ್ತರು, ಬಿಎಸ್ವೈ ವೇದಿಕೆ ಮೇಲೆ ಬರುತ್ತಿದ್ದಂತೆ ವೇದಿಕೆಗೆ ನುಗ್ಗಲು ಯತ್ನಿಸಿದರು‌. ಇದು ಬಿಜೆಪಿಯಲ್ಲಿನ ಎರಡು ಬಣಗಳ ನಡುವೆ ಗಲಾಟೆಗೆ ಕಾರಣವಾಯ್ತು. ಬಿಜೆಪಿ ಪರಿವರ್ತನಾ ರ‌್ಯಾಲಿಯ ವೇದಿಕೆಗೆ ಕೆಜೆಪಿ ಕಾರ್ಯಕರ್ತರನ್ನು ಬರಲು ಅವಕಾಶ ನೀಡಬಾರದು ಎಂದು ವೇದಿಕೆಗೆ ನುಗ್ಗಿ ಬಿ ಎಸ್ ವೈಯನ್ನು ಒತ್ತಾಯ ಮಾಡಿದರು. ಅಂತಿಮವಾಗಿ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಒತ್ತಾಯದಂತೆ ಕೆಜೆಪಿಯ ಬಿಎಸ್ ವೈ ಆಪ್ತ ಮುಖಂಡರನ್ನು ವೇದಿಕೆಯಿಂದ ದೂರ ಇರಿಸಲಾಯಿತು.