ಬೀದರ್ ಪ್ರತಿಭಟನೆ ವೇಳೆ ಲಾಠಿಚಾರ್ಜ್- ಸಂಸದ ಖೂಬಾ ಸೇರಿ ಹಲವರಿಗೆ ಗಾಯ!!

ವಿದ್ಯಾರ್ಥಿನಿ ಪೂಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್​ ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಿಂಸಾ ರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿ ಚಾರ್ಜ್ ನಡೆಸಿದ್ದು, ಸಂಸದ ಭಗವಂತ ಖೂಬಾ ಸೇರಿ ಐವರಿಗೆ ಗಾಯವಾಗಿದೆ.

ad


ವಿದ್ಯಾರ್ಥಿನಿ ಪೂಜಾ ಮೇಲಿನ ಅತ್ಯಾಚಾರ, ಹತ್ಯೆ ಖಂಡಿಸಿ ಬೀದರ್​​​ ಬಂದ್​ ಗೆ ಕರೆ ನೀಡಲಾಗಿತ್ತು. ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ ಎಸ್​ಪಿ ಡಿ.ದೇವರಾಜ್​ ಅವ್ರೆ ಲಾಠಿ ಹಿಡಿದುಕೊಂಡು ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು.ಕೊನೆಗೂ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರು ನೆರೆದಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಚಾರ್ಜ್ ನಡೆಸಿದ್ದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಓಡಿಸಲಾಯಿತು.

ಈ ವೇಳೆ ಸಂಸದ ಭಗವಂತ ಖೂಬಾ ಮುಖಕ್ಕೆ ಗಾಯವಾಗಿದ್ದರೇ ಹಲವರ ಕೈ-ಕಾಲುಗಳಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಖಾಸಗಿ ಕಾಲೇಜುಗಳು ರಜೆ ಘೋಷಿಸಿದ್ದವು. ಆದರೂ ಅಪಾರ ಪ್ರಮಾಣ ಜನರು ಪ್ರತಿಭಟನೆಯಲ್ಲಿ ಸೇರಿದ್ದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಬೀದರ ಸ್ಥಿತಿ ಕೆಂಡ ಮುಚ್ಚಿದ ಬೂದಿಯಂತಿದೆ. ಇತ್ತೀಚೆಗೆ ಬಾಲ್ಕಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಪೂಜಾ ಕೊಲೆ ಆಗಿತ್ತು. ಅಕ್ಕಮಹಾದೇವಿ ಕಾಲೇಜಿನನಲ್ಲಿ ದ್ವಿತೀಯ ಪದವಿಯಲ್ಲಿ ಓದುತ್ತಿದ್ದ ಪೂಜಾಳ ಮೇಲೆ ಅತ್ಯಾಚಾರ ಮಾಡಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅನ್ಯಕೋಮಿನ ಶಂಶುದ್ದೀನ್​​ ಎಂಬುವನನ್ನು ಪೊಲೀಸರು ಬಂಧಿಸಿದ್ದರು.