ಅಂತ್ಯಸಂಸ್ಕಾರಕ್ಕೆ ಶವಹೊತ್ತುಕೊಂಡು ಹೊಳೆದಾಟಬೇಕು : ಇದು ಕರ್ನಾಟಕದ ಕುಗ್ರಾಮ !!

ಕರ್ನಾಟಕದ ಅಭಿವೃದ್ಧಿಯಾಗಿದೆ ಎಂದು ರಾಜಕಾರಣಿಗಳು ಬಡಬಡಿಸುತ್ತಲೇ ಇದ್ದಾರೆ. ಆದರೆ ಹಳ್ಳಿಗಳಲ್ಲಿ ಬದುಕು ಇನ್ನು ನರಕ ಸದೃಶವಾಗಿಯೇ ಇದೆ. ಕೇವಲ ಬದುಕು ಮಾತ್ರವಲ್ಲ ಸಾವಿಗೂ ಘನತೆಯಿಲ್ಲ. ಹೌದು ಬೀದರ್ ನ ಬಸವಕಲ್ಯಾಣ ತಾಲೂಕಿನ ಧನ್ನೂರಿನಲ್ಲಿ ಯಾರಾದ್ರೂ ಸಾವನ್ನಪ್ಪಿದರೇ ಅಂತ್ಯಸಂಸ್ಕಾರಕ್ಕೆ ತೆರಳಲು ಸೂಕ್ತವಾದ ರಸ್ತೆಯಿಲ್ಲ. ಹೀಗಾಗಿ ಶವವನ್ನು ಹೊತ್ತು ಗದ್ದೆಯಲ್ಲಿ ನಡೆಯಬೇಕು. ಅಲ್ಲದೇ ಚುಳಕಿನಾಲಾ ಜಲಾಶಯದ ಹಿನ್ನೀರು ದಾಟಿ ಹೋಗಬೇಕು.

ನಿನ್ನೆ ಈ ಗ್ರಾಮದ 56 ವಯಸ್ಸಿನ ಖೈದರ್ ಸಾಬ್ ಎಂಬುವವರು ನಿಧನರಾಗಿದ್ದರು. ಸೂಕ್ತರಸ್ತೆಯಿಲ್ಲದ ಕಾರಣ ಮೃತನ ಸಂಬಂಧಿಕರು ಅವರ ಶವವನ್ನು ಸೊಂಟದವರೆಗಿನ ನೀರಿನಲ್ಲಿ ಪರದಾಡಿಕೊಂಡು ಹೊತ್ತೊಯ್ದಿದ್ದಾರೆ. ರಸ್ತೆ ವ್ಯವಸ್ಥೆಯಿಲ್ಲದ ಕಾರಣ ಅದೆಷ್ಟೋ ಸಂಬಂಧಿಕರಿಗೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲ ದಿನದ ಹಿಂದೆ ಮಹಾದೇವಿ ಎಂಬ ಮಹಿಳೆ ಸಾವನ್ನಪ್ಪಿದ ವೇಳೆಯೂ ಹೀಗೆ ಪರದಾಡುವ ಸ್ಥಿತಿ ಇತ್ತು.

ಕಳೆದ ಹತ್ತಾರು ವರ್ಷಗಳಿಂದ ಊರಿಗೆ ಸೂಕ್ತ ಸ್ಮಶಾನ, ರಸ್ತೆ ವ್ಯವಸ್ಥೆ ಕೇಳಿದರೂ ಸ್ಥಳೀಯ ಶಾಸಕರು-ಸಚಿವರು ಸ್ಪಂದಿಸುತ್ತಿಲ್ಲ. ಹೀಗಾಗಿ ಯಾರಾದರೂ ಸಾವನ್ನಪ್ಪಿದರೇ ಅಂತ್ಯಕ್ರಿಯೆ ನಡೆಸೋದೆ ದೊಡ್ಡ ಸಾಹಸದ ಕೆಲಸವಾಗಿದೆ. ನಮ್ಮ ಗೋಳು ಕೇಳೋರೆ ಇಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Avail Great Discounts on Amazon Today click here