ಮಳೆ ಬಂದು ಜಲಾಶಯ ತುಂಬಿದರಷ್ಟೇ ತಮಿಳುನಾಡಿಗೆ ನೀರು! ರೈತರಿಗೆ ರಿಲೀಫ್​ ತಂದ ಪ್ರಾಧಿಕಾರದ ಆದೇಶ!!

ಮುಂಗಾರು ಹಂಗಾಮಿಯಲ್ಲಿ ಉತ್ತಮ ಮಳೆ ಸುರಿದು ರಾಜ್ಯದ ಜಲಾಶಯಗಳಿಗೆ ಒಳಹರಿವು ಬಂದರೆ ಮಾತ್ರ ತಮಿಳುನಾಡಿಗೆ 9.19 ಟಿಎಂಸಿ. ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿದೆ. ಪ್ರಾಧಿಕಾರದ ಈ ಆದೇಶದಿಂದ ಮಂಡ್ಯ ರೈತರ ಮುಖದಲ್ಲಿ ನಗೆ ಮೂಡಿದೆ.

ad

ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ಬೆಳಗ್ಗೆ 11 ರಿಂದ ಸತತ ಮೂರು ಗಂಟೆ ನಡೆದ ಸಭೆಯಲ್ಲಿ ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ತಮಿಳುನಾಡು ಒಟ್ಟು 40.43 ಟಿಎಂಸಿ ನೀರು ಕೇಳಿತ್ತು. ಜೂನ್ ತಿಂಗಳ 9.19, ಜುಲೈ ತಿಂಗಳ 31.24 ಟಿಎಂಸಿ ನೀರು ಬಿಡುವಂತೆ ಕೋರಿತ್ತು.

ಆದರೆ ಕರ್ನಾಟಕದ ಪ್ರತಿನಿಧಿ ರಾಕೇಶ್​ ಸಿಂಗ್ ಕಾವೇರಿ‌ ಕೊಳ್ಳದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಮಳೆ ಆಗಿಲ್ಲದಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯದಲ್ಲೇ ಬೆಳೆಗಳಿಗೆ ಮತ್ತು ಕುಡಿಯಲು ನೀರಿಲ್ಲ. ನೀರಿಲ್ಲದೇ ಇರುವುದರಿಂದ ನೀರು ಬಿಡಲು ಸಾಧ್ಯವಿಲ್ಲ. ಮುಂದೆ ಮಳೆ ಚೆನ್ನಾಗಿ ಬಂದರಷ್ಟೇ ನೀರು ಬಿಡಲಾಗುವುದು ಎಂಬುದನ್ನು ಮನವರಿಕೆ ಮಾಡಿಸಿದ್ದರು. ಹೀಗಾಗಿ ಪ್ರಾಧಿಕಾರ ಪರಿಸ್ಥಿತಿ ಅರಿತು ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ಕರ್ನಾಟಕಕ್ಕೆ ಬಿಗ್ ರಿಲೀಫ್​ ಸಿಕ್ಕಂತಾಗಿದ್ದು, ರೈತರು ಹಾಗೂ ಕಾವೇರಿ ಕೊಳ್ಳದ ಜನರ ಮುಖದಲ್ಲಿ ಆತಂಕ ಮರೆಯಾಗಿದೆ.

ಜೂನ್​​​ 4ರಂದು ರಾಜ್ಯದ ನಾಲ್ಕು ಅಣೆಕಟ್ಟುಗಳಿಗೆ ಭೇಟಿ ನೀಡಿದ್ದ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಇಇ ಮುರಳಿಮೋಹನ್ ತಂಡಕ್ಕೆ ನಮ್ಮ ಅಣೆಕಟ್ಟೆಗಳ ವಸ್ತು ಸ್ಥಿತಿಯನ್ನು ವಿವರಿಸಿದ್ದ ರಾಕೇಶ್​ ಸಿಂಗ್​​​, ಇಂದಿನ ಸಭೆಯಲ್ಲೂ ತಮಿಳುನಾಡಿನ ವಾದಕ್ಕೆ ಸಮರ್ಥ ಕೌಂಟರ್​​​ ಕೊಟ್ಟ ರಾಜ್ಯದ ಹಿತ ಕಾಪಾಡಿರುವುದರಿಂದ ರಾಕೇಶ್​ ಸಿಂಗ್​​ಗೆ ರಾಜ್ಯದೆಲ್ಲೆಡೆ ಜನರು ಹ್ಯಾಟ್ಸಾಫ್​​​​​​ ಹೇಳುತ್ತಿದ್ದಾರೆ