ಕುಮಾರಸ್ವಾಮಿ ಪದಗ್ರಹಣಕ್ಕೆ‌ ಬಿಜೆಪಿ ಗೈರು !! ಕರಾಳ ದಿನಾಚರಣೆ !! ಹಿಟ್ಟು ಹಳಸಿತ್ತು ನಾಯಿ ಹಸಿದಿತ್ತು ಎಂದ ಸಿ ಟಿ ರವಿ !!

 

ಜನಾದೇಶಕ್ಕೆ ವಿರುದ್ಧವಾಗಿ ಅಸ್ತಿತ್ವಕ್ಕೆ ಬರುತ್ತಿರುವ ಅವಕಾಶವಾದಿಗಳ ಕೂಟದ ಪದಗ್ರಹಣವನ್ನು ಖಂಡಿಸಿ ಬಿಜೆಪಿ ಕರಾಳ ದಿನಾಚರಣೆ ಆಚರಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಮಗೆ ಜನಾದೇಶವಾಗಿಲ್ಲ, ಜನ ನಮಗೆ ಆಶೀರ್ವಾದ ಮಾಡಿಲ್ಲ,ಹಾಗಾಗಿ ಪ್ರಣಾಳಿಕೆ ಈಡೇರಿಸಲ್ಲ ಎಂದು ಚಿಕ್ಕಮಗಳೂರಿನಲ್ಲಿ ನಿಯೋಜಿತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಚುನಾವಣೆಗೂ ಮುನ್ನ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ, ಬಹುಮತ ಬಾರದಿದ್ದಲ್ಲಿ ವಿರೋಧ ಪಕ್ಷದಲ್ಲಿ ಕೂರುತ್ತೇವೆ, ಜನರ ಬಳಿ ಹೋಗುತ್ತೇವೆ ಎಂದಿದ್ದಿರಿ ಆದರೆ ಈಗ ನೀವು ಮಾಡುತ್ತಿರುವುದು ಏನು? ಲೋಕಾಯುಕ್ತ ಪುನಶ್ಚೇತನಗೊಳಿಸುವ ಭರವಸೆ, ರೈತರ ಸಾಲಮನ್ನಾ ಸಾಧ್ಯವಿಲ್ಲ ಎಂದಿದ್ದೀರಿ. ನಿಮ್ಮ ಪ್ರಣಾಳಿಕೆ ಬಗ್ಗೆ ನಿಮಗೆ ಬದ್ದತೆ ಇಲ್ಲ,ನಿಮ್ಮ ಮಾತಿಗೂ ಬದ್ದತೆ ಇಲ್ಲ ಎಂದು ಟೀಕಿಸಿದರು. ನಮಗೆ ಜನಾದೇಶವಾಗಿಲ್ಲ ಹಾಗಾಗಿ ಪ್ರಣಾಳಿಕೆ ಈಡೇರಿಸಲು ಸಾಧ್ಯವಿಲ್ಲ ಎಂದಿದ್ದೀರಿ ಹಾಗಾದರೆ ಯಾವ ಪುರುಷಾರ್ಥಕ್ಕೆ ಯಾವ ಉದ್ದೇಶಕ್ಕೆ ನಿಮಗೆ ಅಧಿಕಾರ ಬೇಕು ಎಂದು ಪ್ರಶ್ನಿಸಿದರು. ಜೆಡಿಎಸ್ ಹಾಗು ಕಾಂಗ್ರೆಸ್ ಅಪವಿತ್ರ ಮೈತ್ರಿ ಅವಕಾಶವಾದಿಗಳ ಕೂಟವಾಗಿದೆ ಇದನ್ನು ಖಂಡಿಸಿ ನಾಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದನ್ನು ಖಂಡಿಸಿ ಬಿಜೆಪಿ ಕಪ್ಪುಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಿಸಲಿದೆ,
ರಾಜ್ಯದ ಉದ್ದಗಲಕ್ಕೆ‌ ಕಪ್ಪು‌ಪಟ್ಟಜ ಧರಿಸಿ ಬಿಜೆಪಿ ಪ್ರತಿಭಟನೆ ನಡೆಸಲಿದೆ, ಪ್ರಮಾಣ ವಚನವನ್ನು ಬಿಜೆಪಿ ಬಹಿಷ್ಕಾರ ಮಾಡಿದ್ದು ಬಿಜೆಪಿಯಿಂದ ಯಾರೂ ಪಾಲ್ಗೊಳ್ಳುವುದಿಲ್ಲ ಎಂದರು.

ಈ ಅವಕಾಶವಾದಿಗಳ ಕೂಟ ಬಹಳ ದಿನ ಬದುಕುವುದಿಲ್ಲ, ಹಿಟ್ಟು ಹಳಸಿತ್ತು,ನಾಯಿ ಹಸಿದಿತ್ತು ಎನ್ನುವಂತೆ ಅಧಿಕಾರ ಹಿಡಿಯುತ್ತಿವೆ. ಪರಸ್ಪರ ವೈಯಕ್ತಿ ನಿಂದನೆ ಮಾಡಿಕೊಂಡಿದ್ದ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಈ ಕೂಟ ರಚಿಸಿಕೊಂಡಿದ್ದಾರೆ.ಈ ಸರ್ಕಾರ ಬಹಳ ದಿನ ಇರಲ್ಲ.78 ಸ್ಥಾನ ಬಂದವರು ಪಟಾಕಿ ಹೊಡೆಯುತ್ತಿದ್ದಾರೆ, 118 ಕಡೆ ಠೇವಣಿ ಕಳೆದುಕೊಂಡವರು ಮುಖ್ಯಮಂತ್ರಿ ಆಗುತ್ತಿದ್ದಾರೆ, ಅತಿ ಹೆಚ್ಚು ಸ್ಥಾನ ಬಂದವರು ವಿರೋಧಪಕ್ಷದಲ್ಲಿ ಕೂರಬೇಕಿದೆ ಎಂದು ಲೇವಡಿ ಮಾಡಿದರು. 40 ವರ್ಷ ರಾಜಕೀಯದಲ್ಲಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿಯೂ ಚಾಮುಂಡೇಶ್ವರಿಯಲ್ಲಿ ಸೋತರು, ಯಾರ ವಿರುದ್ಧ ಸೋತಿದ್ದಾರೋ ಅವರನ್ನೇ ಇದೀಗ ಅಪ್ಪಿಕೊಂಡರೆ ಅದು ಹೇಗೆ ಜನಾದೇಶವಾಗಲಿದೆ, ಅದು ಜನಾದೇಶವಲ್ಲ, ಜನಾಕ್ರೋಶ, ಹೊಂದಾಣಿಕೆ ಮೊದಲೇ ಹೇಳಿದ್ದರೆ ಜನ ಬೇರೆ ಆಯ್ಕೆ ಮಾಡಿಕೊಳ್ಳುತ್ತಿದ್ದರು.‌ಸರ್ಕಾರದ ವಿರುದ್ದ ಜನಾಕ್ರೋಶವಿತ್ತು.ಕಾಂಗ್ರೆಸ್ ಪ್ರಾಯೋಜಿತ ಹಿಂಸೆ, ಭಷ್ಟಾಚಾರ,ವೈಫಲ್ಯಗಳ ವಿರುದ್ಧ ಅಲ್ಲಿ ಜನತಾದಳಕ್ಕೆ ಮತ ಹಾಕಿದ್ದಾರೆ ಎಂದರು. ಇಂತಹ ನೀಚನನ್ನು ಬೆಳೆಸಬಾರದಿತ್ತು ಎಂದು‌ ದೇವೇಗೌಡರೇ ಸಿದ್ದರಾಮಯ್ಯ ವಿರುದ್ಧ ಹೇಳಿದ್ದರು, ಅವರಿಗೆ ಈಗ ಆ ಮಾತು ಮರೆತುಹೋಯಿತಾ? ಅಧಿಕಾರಕ್ಕಾಗಿ ಎಂತಹ ಮಟ್ಟಕ್ಕೆ ಬೇಕಾದರೂ ಇಳಿಯಿತ್ತೀರಿ ಎನ್ನುವಿದಕ್ಕೆ ಇದೇ ನಿದರ್ಶನ ಎಂದು ಸಿ.ಟಿ ರವಿ ಟೀಕಿಸಿದರು. ತಾಂತ್ರಿಕವಾಗಿ ನಮಗೆ 8 ಸ್ಥಾನ ಕಡಿಮೆ‌ ಬಂದಿದ, 40 ರಿಂದ 104 ಕ್ಕೆ ಹೋಗಿದೆ, ನಮಗೆ ಪೂರ್ಣ ಬಹುಮತ ಕೊಟ್ಟಿಲ್ಲ ಎನ್ನುವುದನ್ನು ಒಪ್ಪುವೆ ಆದರೆ ಜನ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ, ಬಿಜೆಪಿ ಪರ ಮತ ಚಲಾಯಿಸಿದ್ದಾರೆ ಎಂದು ಸಿ ಟಿ ರವಿ ಹೇಳಿದ್ದಾರೆ.