ವಿಧಾನಸಭೆಯಲ್ಲೇ ಸಚಿವರ ಜೊತೆ ಸಂಬಂಧ ಬೆಳೆಸಿದ ಬಿಜೆಪಿ ಶಾಸಕ !! ಮಾವ ಕೈ ಸಚಿವರನ್ನು ಊರಿಡೀ ಮೆರವಣಿಗೆ ಮಾಡಿಸ್ತಾರಂತೆ ಬಿಜೆಪಿ ಉಪನಾಯಕರು !!

ವಿಧಾನಸಭೆ ಕಲಾಪ ಇವತ್ತು ಗದ್ದಲದ ಗೂಡಾಗಿತ್ತು. ಬೆಳಗಿನ ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ಸುಸೂತ್ರವಾಗಿ ನಡೆಯಿತು. ಮಧ್ಯಾಹ್ನದ ಕಲಾಪದಲ್ಲಿ ಕೋಲಾಹಲ,ಗದ್ದಲಗಳದ್ದೇ ಸದ್ದು ಜೋರಾಗಿತ್ತು.ವಿಧಾನಮಂಡಲ ಅಧಿವೇಶನದ ವಿಸ್ತರಣೆಗೆ ಬಿಜೆಪಿ ಆಗ್ರಹಿಸಿದೆ. ಇವತ್ತು ವಿಧಾನಸಭೆ ಕಲಾಪದಲ್ಲಿ ಅಧಿವೇಶನವನ್ನು ಇನ್ನು ಮೂರು ದಿನಗಳ ಕಾಲ ವಿಸ್ತರಣೆ ಮಾಡುವಂತೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ರು. ಬಡ್ತಿ ಮೀಸಲಾತಿ ವಿಷಯದ ಮೇಲೆ ನಿಲುವಳಿ ಸೂಚನೆಯನ್ನು ಬಿಜೆಪಿಯ ಪರಿಶಿಷ್ಟ ಸಮುದಾಯದ ಶಾಸಕರು ಮಂಡಿಸಿ ಚರ್ಚೆಗೆ ಅವಕಾಶ ಕೋರಿದ್ರು. ಆದ್ರೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವಕಾಶ ನಿರಾಕರಿಸಿದಾಗ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದ್ರು. ಧರಣಿನಿರತ ಶಾಸಕರ ಬೆಂಬಲಕ್ಕೆ ಬಂದ ವಿಪಕ್ಷ ನಾಯಕ ಯಡಿಯೂರಪ್ಪ ಅಧಿವೇಶನ ವಿಸ್ತರಿಸಿ ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸಿದ್ರು. ಕೊನೆಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಬಂದ ಬಳಿಕ ಅವಕಾಶ ಕೊಡಿಸುವುದಾಗಿ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಶಾಸಕರು ಧರಣಿ ಕೈಬಿಟ್ರು.

ಇದಕ್ಕೂ ಮುನ್ನ ಬಜೆಟ್ ಮೇಲೆ ನಡೆದ ಚರ್ಚೆಯಲ್ಲಿ ಹಲವರು ಭಾಗವಹಿಸಿದ್ರು. ಬಿಜೆಪಿ ಹಿರಿಯ ಸದಸ್ಯ ಗೋವಿಂದ ಕಾರಜೋಳ ಬಜೆಟ್ ಮೇಲೆ ಚರ್ಚೆ ನಡೆಸುವಾಗ ಈ ಸರಕಾರ ಕುರುಡರ ಮೇಲೆ ಕುಂಟರು ಕೂತು ಪ್ರಯಾಣ ಮಾಡಿದ ಹಾಗಿದೆ ಎಂದು ಕಾಲೆಳೆದರು. ಕೃಷ್ಣಾ ಮೇಲ್ದಂಡೆ ಕಾಮಗಾರಿಗಳಿಗೆ ಐವತ್ತು ಸಾವಿರ ಕೋಟಿ ಖರ್ಚು ಮಾಡಬೇಕಾದ ಹಿಂದಿನ ಸರಕಾರ ಕೇವಲ ಎಂಟು ಸಾವಿರ ಕೋಟಿ ರೂ ಖರ್ಚು ಮಾಡಿದೆ. ಎಲ್ಲ ಬಗೆಯ ಸಾಲಮನ್ನಾ ಮಾಡಬೇಕು. ಅನ್ನಭಾಗ್ಯ ಅಕ್ಕಿ ಪ್ರಮಾಣ ಇಳಿಕೆ ವಾಪಸ್ ಪಡೆಯಬೇಕೆಂದು ಗೋವಿಂದ ಕಾರಜೋಳ ಆಗ್ರಹಿಸಿದ್ರು. ಇದೇವೇಳೆ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿಗೆ ಮಾವ ಎಂದು ಕರೆದ ಗೋವಿಂದ ಕಾರಜೋಳ, ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಸಚಿವ ಮನಗೂಳಿಗೆ ರೇಷ್ಮೆ ರುಮಾಲು ತೊಡಿಸಿ ಮೆರವಣಿಗೆ ಮಾಡುವುದಾಗಿ ಹೇಳಿದ್ರು.ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರಮಾಣ ಇಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಇದೇವೇಳೆ ಸರಕಾರವನ್ನು ಕುರುಡರ ಮೇಲೆ ಕುಂಟರ ಪ್ರಯಾಣ ಹೋಲಿಕೆ ಮಾಡಿದ ಗೋವಿಂದ ಕಾರಜೋಳರ ಹೇಳಿಕೆಗೆ ಶಾಸಕ ಎಟಿ ರಾಮಸ್ವಾಮಿ ವಿರೋಧಿಸಿ ಸರಕಾರದ ಪರ ನಿಂತ್ರು.

ಕಾಂಗ್ರೆಸ್ ಹಿರಿಯ ಶಾಸಕ ಸತೀಶ್ ಜಾರಕಿಹೊಳಿ ಸಹಾ ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು, ಕುಮಾರಸ್ವಾಮಿಯವರ ಮೇಲೆ ದೊಡ್ಡ ಹೊಣೆಗಾರಿಕೆಯಿದ್ದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಿದೆ ಎಂದು ಸಲಹೆ ಕೊಟ್ರು. ಬೆಳಗಾವಿಯನ್ನು ಇನ್ನೆರಡು ಹೆಚ್ಚುವರಿ ತಾಲ್ಲೂಕುಗಳಾಗಿ ವಿಂಗಡಿಸಬೇಕು. ಜೊತೆಗೆ ಚಿಕ್ಕೋಡಿ ಮತ್ತು ಗೋಕಾಕ್ ಗಳನ್ನು ಎರಡು ಪ್ರತ್ಯೇಕ ಜಿಲ್ಲೆಗಳನ್ನಾಗಿ ಮಾಡಬೇಕೆಂದು ಸತೀಶ್ ಜಾರಕಿಹೊಳಿ ಸರಕಾರಕ್ಕೆ ಒತ್ತಾಯಿಸಿದ್ರು.ಬಜೆಟ್ ಚರ್ಚೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ನಡಹಳ್ಳಿ ಪಾಟೀಲ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಮತ್ತಷ್ಟು ಸದಸ್ಯರೂ ಪಾಲ್ಗೊಂಡಿದ್ರು. ಸಿ.ಟಿ.ರವಿ, ಸಾಲದ ಸರತಿ ಸಾಲಿನಲ್ಲಿ ಕೂತ ರೈತರಿಗೆ ಸರ್ಕಾರ ಪಂಕ್ತಿಬೇಧ ಮಾಡುತ್ತಿದೆ‌. ಮಲೆನಾಡು,ಕರಾವಳಿ,ಉತ್ತರ ಕರ್ನಾಟಕದ ಪ್ರಸ್ತಾಪವೇ ಇಲ್ಲದ ಈ ಬಜೆಟ್ ಸಮದೃಷ್ಟಿಯ ಬಜೆಟ್ ಅಲ್ಲವೇ ಅಲ್ಲ ಎಂದು ಆರೋಪಿಸಿದ್ರು.

ಇನ್ನು ಸದನದಲ್ಲಿ ಸದಸ್ಯರು ಮಾತಾಡುವಾಗಲೆಲ್ಲ ಮಧ್ಯಪ್ರವೇಶ ಮಾಡ್ತಿದ್ದ ಎ.ಎಸ್.ನಡಹಳ್ಳಿ ಪಾಟೀಲ್ ಗೆ ಸಚಿವ ಡಿ ಕೆ ಶಿ ವಿರೋಧ ವ್ಯಕ್ತಪಡಿಸಿದಾಗ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಆಡಳಿತ ಪಕ್ಷದ ಸದಸ್ಯರು ದಾದಾಗಿರಿ ಮಾಡ್ತಿದ್ದಾರೆಂದು ಬಿಜೆಪಿ ಸದಸ್ಯರು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ನಡಹಳ್ಳಿ ಪರ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ವಕಾಕತ್ತು ವಹಿಸಿಕೊಂಡ್ರು. ಈ ವೇಳೆ ಸದನದಲ್ಲಿ ಕೋಲಾಹಲ ಸೃಷ್ಟಿಯಾಯ್ತು. ಕೊನೆಗೆ ಜಟಾಪಟಿ ಜೋರಾಗಿ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು.

ಚರ್ಚೆಯಲ್ಲಿ ಬಜೆಟ್ ಗೆ ವಿಪಕ್ಷದ ಸದಸ್ಯರು ಸಂಪೂರ್ಣ ವಿರೋಧ ವ್ಯಕ್ತಪಡಿಸಿ ಮಾತಾಡ್ತಿದ್ರೆ ಆಡಳಿತ ಪಕ್ಷದ ಸದಸ್ಯರು ಬಜೆಟ್ ನ ಕೆಲವು ಅಂಶಗಳಿಗೆ ವಿರೋಧ ವ್ಯಕ್ತಪಡಿಸ್ತಿದ್ದಾರೆ.