ಸರ್ಕಾರಿ ಬಸ್​ ನಿಲ್ದಾಣವನ್ನೇ ಉರುಳಿಸಿದ ಬಿಜಿಪಿ ಎಮ್​ಎಲ್​ಎ ಆಪ್ತ!

 

ಬಿಜೆಪಿ  ಶಾಸಕನ ಆಪ್ತನ ಮನೆಯ ಸೌಂದರ್ಯಕ್ಕೆ ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ಸರ್ಕಾರಿ ಕಟ್ಟಡವನ್ನೇ ಉರುಳಿಸಿದ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ. ಸರ್ಕಾರಿ ಬಸ್ ನಿಲ್ದಾಣವನ್ನು ಕೆಡವಿ ಇಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದು ಜನಪ್ರತಿನಿಧಿಗಳ ದರ್ಪಕ್ಕೆ ಹಿಡಿದ ಕೈಗನ್ನಡಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ನೂತನವಾಗಿ ಹೊಸ ಬಸ್ ನಿಲ್ದಾಣವನ್ನು ಕಟ್ಟಲಾಗಿತ್ತು. ಆದರೇ ಹೊಸ ಕಟ್ಟಡದ ಪಕ್ಕದಲ್ಲೇ ಇದ್ದ ಹಳೆಯ ಬಸ್ ನಿಲ್ದಾಣವನ್ನು ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ್ ದಡೆಸುಗುರು ಆಪ್ತ ಬೆಂಬಲಿಗನಾದ ಈರಣ್ಣ ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ಬಸ್ ನಿಲ್ದಾಣವನ್ನು ಜೆಸಿಬಿಯಿಂದ ನೆಲಸಮ ಮಾಡಿ ಈ ಸ್ಥಳದಲ್ಲಿ ಬಸ್ ನಿಲ್ದಾಣ ಇತ್ತು ಎಂಬ ಗುರುತೇ ಇಲ್ಲದ ಹಾಗೆ ಮಾಡಿದ್ದಾರೆ.

 

ಶಾಸಕರ ಆಪ್ತ ಅನ್ನೋ ಕಾರಣಕ್ಕೆ ಸರ್ಕಾರಿ ಬಸ್ ನಿಲ್ದಾಣವನ್ನೇ ತಮ್ಮ ಸ್ವಂತ ಜಾಗ ಮಾಡಿಕೊಂಡಿದ್ದಾರೆ ಅಂತ ಸ್ಥಳೀಯರು ಆರೋಪಿಸ್ತಿದ್ದಾರೆ. ಆದ್ರೆ ಇದಕ್ಕೂ ಮುಂಚೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಹಳೇ ಬಸ್ ನಿಲ್ದಾಣವನ್ನು ನಮ್ಮ ವಶಕ್ಕೆ ತಗೆದುಕೊಂಡಿರುವುದಾಗಿ ಪರಿಶೀಲನೆ ಮಾಡಿಕೊಂಡು ಹೋಗಿದ್ರು. ಈರಣ್ಣ ವಿರುದ್ಧ ದೂರು ನೀಡುವುದಕ್ಕೆ ಗಂಗಾವತಿ ಗ್ರಾಮೀಣ ಠಾಣೆಗೆ ಹೋದ್ರೆ ದೂರು ತೆಗೆದುಕೊಳ್ಳಲು ಪೊಲೀಸರು ನಿರಾಕರಿಸ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರ್ತಿದೆ.