ಕಲ್ಬುರ್ಗಿಯಲ್ಲಿ ಬಿಜೆಪಿ ಟಿಕೇಟ್​ ಫೈಟ್​​- ಬಿಎಸ್​​ವೈ ಎದುರೇ ಕಿತ್ತಾಡಿಕೊಂಡ ಆಕಾಂಕ್ಷಿಗಳು!

ಲೋಕಸಭೆ ಮಹಾಸಮರಕ್ಕೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಕಲಬುರಗಿ ಬಿಜೆಪಿ ವಲಯದಲ್ಲಿ ಟಿಕೆಟ್‌ಗಾಗಿ ಗುದ್ದಾಟ ಜೋರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಮುಂದೇ ಬಿಜೆಪಿಗರ ಆಕ್ರೋಶ ಸ್ಫೋಟಗೊಂಡಿದ್ದು, ಕೆಲಕಾಲ ವಾಗ್ವಾದ ಕೂಡ ನಡೆದಿದೆ.

ವಿಜಯಪುರ ಹಾಗೂ ಬಾಗಲಕೋಟೆ ಪ್ರವಾಸಕ್ಕೂ ಮುನ್ನ ಕಲಬುರಗಿ ನಗರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ನೀಡಿದ್ದರು. ಈ ವೇಳೆ ಬಿಎಸ್ ವೈ ಸಮ್ಮುಖದಲ್ಲೆ ಐವಾನ್ ಎ ಶಾಹಿ ವಸತಿ ಗೃಹದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ರಾಜ್ಯ ಸಂಚಾಲಕ ಸುಭಾಷ್ ರಾಠೋಡ್ ಮತ್ತು ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮಧ್ಯ ಪರಸ್ಪರ ವಾಗ್ವಾದ ನಡೆದಿದೆ.

ಇದೇ ಸಂದರ್ಭದಲ್ಲಿ ಸುಭಾಷ್ ರಾಠೋಡ್ ಬೆಂಬಲಿಗರು ಕಲಬುರಗಿ ಲೋಕಸಭೆ ಕ್ಷೇತ್ರದ ಟಿಕೆಟ್‌ನ್ನ ಸುಭಾಷ್ ರಾಠೋಡ್‌ರಿಗೆ ನೀಡಬೇಕು ಅಂತಾ ಮನವಿ ಸಲ್ಲಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಚಿವ ಬಾಬುರಾವ್ ಚವ್ಹಾಣ್, ವೈಯುಕ್ತಿಕವಾಗಿ ಮನವಿ ಮಾಡಿ ಬಂಜಾರ ಸಮುದಾಯರವರಿಂದ ಅಂತಾ ಏಕೆ ಹೇಳ್ತಿತಿ ಎಂದು ಬಿಎಸ್‌ವೈ ಎದುರೆ ಪ್ರಶ್ನಿಸಿದ್ದಾರೆ. ನಂತರ ಯಡಿಯೂರಪ್ಪ, ಅವರ ಮನವಿಯನ್ನ ತೆಗೆದುಕೊಂಡು, ಟಿಕೆಟ್ ಯಾರಿಗೆ ನೀಡಬೇಕು ಯಾರಿಗೆ ನೀಡಬಾರದೆಂದು ಸರ್ವೇ ಮಾಡಿ ಟಿಕೆಟ್ ನಿಡೋದಾಗಿ ಹೇಳಿ ಕಾರು ಹತ್ತಿ ವಿಜಯಪುರದತ್ತ ಪ್ರಯಾಣ ಬೆಳೆಸಿದರು.

ಬಿಎಸ್‌ವೈ ಐವಾನ್ ಎ ಶಾಹಿ ವಸತಿ ಗೃಹದಿಂದ ನಿರ್ಗಮಿಸಿದ ನಂತರವು, ಟಿಕೆಟ್ ಆಕಾಂಕ್ಷಿಗಳಾದ ಬಾಬುರಾವ್ ಚವ್ಹಾಣ್ ಮತ್ತು ಸುಭಾಷ್ ರಾಠೋಡ್ ಮಧ್ಯ ಪರಸ್ಪರ ವಾಗ್ವಾದ ಮಾತ್ರ ತಣ್ಣಗೆ ಆಗಲಿಲ್ಲ. ನಂತರ ಸ್ಥಳೀಯ ಮುಖಂಡರ ಮಧ್ಯಸ್ಥಿಕೆಯಿಂದ ಇಬ್ಬರ ನಡುವಿನ ಗುದ್ದಾಟಕ್ಕೆ ಬ್ರೇಕ್ ಬಿತ್ತು…