ಬಿಜೆಪಿ ಸೋಲಿಸಲು ಕಾಂಗ್ರೆಸ್ ಮತ್ತು ಬಿಎಸ್ಪಿ ನಾಯಕರ ವಿರುದ್ದ ಸೆಣಸುತ್ತಿರೋ ಜಿಗ್ನೇಶ್ ಮೇವಾನಿ !! ವಡ್ಗಾಮ್ ನಿಂದ ವಡ್ನಗರ್ ವರೆಗಿನ ಗುಜರಾತ್ ರಾಜಕೀಯ !!

  1. ಗುಜರಾತ್ ಚುನಾವಣೆಯ ಗ್ರೌಂಡ್ ರಿಪೋರ್ಟ್ ನೀಡುವ ಸಲುವಾಗಿ ಬಿಟಿವಿ ತಂಡ ಗುಜರಾತ್ ಪ್ರವಾಸದಲ್ಲಿದೆ. ಗುಜರಾತ್ ನಲ್ಲಿ ಪ್ರಭುತ್ವದ ವಿರುದ್ದ ಸಮರ ಸಾರಿದ ಮೂವರು ಯುವಕರಲ್ಲಿ ಜಿಗ್ನೇಶ್ ಮೇವಾನಿ ಒಬ್ಬರು. ಜಿಗ್ನೇಶ್ ಸ್ಪರ್ಧಿಸುತ್ತಿರುವ ವಡ್ಗಾಮ್ ಕ್ಷೇತ್ರದ ಒಳಹೊರಗು ಮತ್ತು ರಾಜಕಾರಣದ ಬಗ್ಗೆ ಬಿಟಿವಿಯ ಹಿರಿಯ ರಾಜಕೀಯ ವರದಿಗಾರ ನವೀನ್ ಸೂರಿಂಜೆ ಬರೆಯುತ್ತಾರೆ :

——–

ಗುಜರಾತ್ ನ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ನಿಂದ ಮೆಹ್ಸಾನ ಜಿಲ್ಲೆಯ ವಡ್ನಗರ್ ಗೆ ಕೇವಲ 43.7 ಕಿಮಿ ದೂರ. ಇದಿಷ್ಟು ಪ್ರದೇಶವನ್ನು ಸ್ಥೂಲವಾಗಿ ಅಧ್ಯಯನ ಮಾಡಿದ್ರೆ ಇಡೀ ಗುಜರಾತ್ ರಾಜಕಾರಣದ ಚಿತ್ರಣ ದೊರಕುತ್ತದೆ. ಅಷ್ಟು ಮಾತ್ರವಲ್ಲದೆ ಹೊಸ ರಾಜಕೀಯ ಸಾದ್ಯತೆಗಳ ನಿರೀಕ್ಷೆಗಳ ಜೊತೆಜೊತೆಗೆ ವಿಪರ್ಯಾಸಗಳ ಪರಿಚಯವಾಗುತ್ತದೆ.

ವಡ್ಗಾಮ್, ದಲಿತ ನಾಯಕ ಜಿಗ್ನೇಶ್ ಮೇವಾನಿ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿರುವ ವಿಧಾನಸಭಾ ಕ್ಷೇತ್ರ. ವಡ್ನಗರ್, ದೇಶದ ಪ್ರಧಾನಿ ನರೇಂದ್ರ ಮೋದಿ ಹುಟ್ಟೂರು. ಅಷ್ಟು ಮಾತ್ರವಲ್ಲದೆ ಚಹಾ ಮಾರಿದ್ದಾರೆ ಎನ್ನಲಾದ ರೈಲು ನಿಲ್ದಾಣ ಇರೋ ಹೋಬಳಿ ಪ್ರದೇಶ.

ನಾವು ಜಿಗ್ನೇಶ್ ಮೇವಾನಿ ಸ್ಪರ್ಧಿಸುತ್ತಿರುವ ವಡ್ಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಅವರ ಅನುಪಸ್ಥಿತಿಯಲ್ಲಿ ಓಡಾಡಿದ ಸಂಧರ್ಭ ಇಡೀ ದೇಶದ ರಾಜಕೀಯ ಚಿತ್ರಣ ಎದುರು ಬಂದಂತಾಯಿತು. ಇಲ್ಲಿ ಒಟ್ಟು ಹತ್ತು ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಬಹುಶಃ ಇಡೀ ದೇಶದಲ್ಲಿ ಅಪರೂಪಕ್ಕೆ ಅಪರೂಪವೆಂಬಂತೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದೆ.

ವಡ್ಗಾಮ್ ಎನ್ನುವುದು ದಲಿತ ಮತ್ತು ಮುಸ್ಲಿಂ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿರುವ ಮೀಸಲು ವಿಧಾನಸಭಾ ಕ್ಷೇತ್ರ. ಮಣಿಲಾಲ್ ವಘೇಲಾ ಕಾಂಗ್ರೆಸ್ ನ ಹಾಲಿ ಶಾಸಕರು. 21,000 ಮತಗಳ ಅಂತರದಲ್ಲಿ ಮಣಿಲಾಲ್ 2012 ರಲ್ಲಿ ಗೆದ್ದಿದ್ದರು. ಅಂತಹ ಕ್ಷೇತ್ರದಿಂದ ಅವರನ್ನು ಬದಲಿಸಿ ಜಿಗ್ನೇಶ್ ಮೇವಾನಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಇಲ್ಲಿ 2,39,275 ಮತದಾರರಿದ್ದಾರೆ. 72 ಸಾವಿರ ಮುಸ್ಲಿಂ ಮತದಾರರು, 40 ಸಾವಿರ ದಲಿತ ಮತದಾರರು, 12 ಸಾವಿರ ರಜಪೂತ ಮತದಾರರು, 10 ಸಾವಿರ ಪಾಟೀದಾರ್ ಮತದಾರರಿದ್ದಾರೆ. ಉಳಿದಂತೆ ಕೃಷಿಕ ಸಮುದಾಯವಾಗಿರುವ ಚೌದರಿ ಮತ್ತಿತರ ಸಣ್ಣ ಸಂಖ್ಯೆಯ ಮತದಾರರಿದ್ದಾರೆ. ವಡ್ಗಾಮ್ ವಿಧಾನಸಭಾ ಕ್ಷೇತ್ರ ಪಟಾನ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ಲೀಲಾಧರ್ ಬಾಯ್ ವಘೇಲಾ ಸಂಸದರಾಗಿದ್ದಾರೆ. ಲೀಲಾಧರ್ ಬಾಯ್, ಚೌದರಿ ಸಮುದಾಯಕ್ಕೆ ಸೇರಿದವರಾಗಿದ್ದು ಸಮುದಾಯದೊಳಗೆ ಪ್ರಭಾವ ಹೊಂದಿದ್ದಾರೆ. ಪಾಟೀದಾರ್ ಚಳುವಳಿಯ ಹಾರ್ದಿಕ್ ಪಟೇಲ್ ಮತ್ತು ಹಿಂದುಳಿದ ವರ್ಗದ ನಾಯಕ ಅಲ್ಪೇಶ್ ಠಾಕೋರ್ ಜಿಗ್ನೇಶ್ ಮೇವಾನಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಆದರೆ ಇಲ್ಲಿ ಮುಸ್ಲಿಂ ಮತ್ತು ದಲಿತ ಮತಗಳೇ ನಿರ್ಣಾಯಕ.

 

ಮೇವಾನಿ ವಿರುದ್ದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಚಕ್ರವರ್ತಿ ವಿಜಯಕುಮಾರ್ ಹರ್ಕಾಬಾಯ್ ಮೂಲತಹ ಕಾಂಗ್ರೆಸ್ ಮುಖಂಡ. ಇತ್ತಿಚೆಗೆ ಬಿಜೆಪಿ ಸೇರಿ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಕೋಮುವಾದಿಯಲ್ಲದ ಚಕ್ರವರ್ತಿ, ಕಾಂಗ್ರೆಸ್ ಕಾರ್ಯಕರ್ತರ ಮದ್ಯೆ ಎಲ್ಲರಂತಲ್ಲದ ಬಿಜೆಪಿಗ ಎಂದೆನಿಸಿಕೊಂಡಿದ್ದಾರೆ. ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಅಶ್ವಿನ್ ಬಾಯ್ ಡೋಲತ್ ಬಾಯ್ ಪರ್ಮರ್ ರವರು ಕೂಡಾ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಇದ್ದವರು. ಅಶ್ವಿನ್ ತಂದೆ ಕೂಡಾ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು. ಕ್ಷೇತ್ರದಲ್ಲಿ ಮತ್ತು ಕಾಂಗ್ರೆಸ್ ನ ಒಳಗೆ ಪ್ರಭಾವ ಹೊಂದಿರೋ ತಂದೆ ಮಗ, ಜಿಗ್ನೇಶ್ ಮೇವಾನಿಗೆ ಬಿಜೆಪಿ ಅಭ್ಯರ್ಥಿಗಿಂತಲೂ ಪ್ರಭಲ ಪೈಪೋಟಿ ನೀಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಬಿಜೆಪಿ ಅಶ್ವಿನಿಯನ್ನು ಉದ್ದೇಶಪೂರ್ವಕವಾಗಿ ಚುನಾವಣೆ ನಿಲ್ಲಿಸಿದೆ ಎನ್ನಲಾಗುತ್ತಿದೆ. ವಿಚಿತ್ರ ಎಂದರೆ ದಲಿತರಿಗೆ ರಾಜಕೀಯ ಅಧಿಕಾರ ಬೇಕು ಎಂದು ಬಲವಾಗಿ ಪ್ರತಿಪಾದಿಸುವ ಬಿಎಸ್ಪಿ ಕೂಡಾ ಜಿಗ್ನೇಶ್ ಮೇವಾನಿ ವಿರುದ್ದ ಸ್ಪರ್ಧೆ ಮಾಡುತ್ತಿದೆ. ಬಿಎಸ್ಪಿಯ ಜಾದವ್ ರಾಜೇಶ್ ಬಾಯ್ ಸ್ಪರ್ಧಿಸುತ್ತಿದ್ದಾರೆ. ಇದು ಒಂದಷ್ಟು ದಲಿತರ ಸಾಂಪ್ರದಾಯಿಕ ಮತಗಳನ್ನು ಸೆಳೆಯಲಿದೆ. ಬಿಜೆಪಿಯಲ್ಲಿ, ಪಕ್ಷೇತರರಾಗಿ ಸ್ಪರ್ಧೆಗೆ ನಿಂತಿರೋದು ಮಾಜಿ ಕಾಂಗ್ರೆಸ್ಸಿಗರಾದರೆ, ಬಿಎಸ್ಪಿ ಮೂಲಕ ಸ್ಪರ್ಧೆ ಮಾಡ್ತಿರೋದು ದಲಿತ ಮುಖಂಡ. ಅಮಿತ್ ಷಾ ಮತ್ತು ನರೇಂದ್ರ ಮೋದಿ ದೂರದಿಂದಲೇ ವಡ್ಗಾಮ್ ಅನ್ನು ಗಮನಿಸುತ್ತಿದ್ದಾರಷ್ಟೆ. ಅದಕ್ಕಾಗಿಯೇ ಜಿಗ್ನೇಶ್ ಮೇವಾನಿ ” ಇದು ವಡ್ಗಾಮ್ ಹುಡುಗ ಮತ್ತು ವಡ್ನಗರ್ ನ ಕೋಮುವಾದಿ ನಾಯಕನ ಮದ್ಯೆ ನಡೆಯುತ್ತಿರುವ ಸ್ಪರ್ಧೆ” ಎಂದಿದ್ದಾರೆ.

 

ಇದರ ಮಧ್ಯೆ ಜಿಗ್ನೇಶ್ ಮೇವಾನಿ ಜೊತೆ ಗಟ್ಟಿಯಾಗಿ ನಿಂತಿದ್ದು ಎಸ್ ಡಿ ಪಿಐ ಪಕ್ಷ. ಎಸ್ ಡಿಪಿಐ ಹೊರತುಪಡಿಸಿ ಜಿಗ್ನೇಶ್ ಮೇವಾನಿ ಸ್ಪರ್ಧೆಯನ್ನು ಊಹಿಸುವುದೂ ಅಸಾದ್ಯವಿತ್ತು. ಇದು ಅಮಿತ್ ಷಾ ಮತ್ತು ನರೇಂದ್ರ ಮೋದಿ ಕೆಂಗಣ್ಣಿಗೆ ಕಾರಣವಾಗಿದೆ. ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆಯಿಂದ ಬಂದಿರೋ ಎಸ್ ಡಿಪಿಐ ಮುಖಂಡರು ಹಲವು ದಿನಗಳಿಂದ ರಾತ್ರಿ ಹಗಲು ಜಿಗ್ನೇಶ್ ಮೇವಾನಿಗಾಗಿ ದುಡಿಯುತ್ತಿದ್ದಾರೆ. ಗ್ರಾಮದಿಂದ ಗ್ರಾಮಕ್ಕೆ ಹೋಗುವಾಗ ಇರೋ ಸಾಲು ಸಾಲು ವಾಹನಗಳು, ಕಾರ್ಯಕ್ರಮದ ರೂಪಣೆ, ಸ್ಥಳೀಯ ನಾಯಕರ ಜೊತೆಗಿನ ಮಾತುಕತೆ, ಹಣಕಾಸು ಎಲ್ಲವನ್ನು ಎಸ್ಡಿಪಿಐ ಪಕ್ಷ ಹೊಣೆಗಾರಿಕೆ ಪಡೆದುಕೊಂಡಿದೆ. ಎಸ್ ಡಿಪಿಐಯನ್ನು ಜಿಗ್ನೇಶ್ ಕ್ಷೇತ್ರದಿಂದ ಹೊರ ಹಾಕಿದ್ರೆ ಜಿಗ್ನೇಶ್ ಅಕ್ಷರಶಃ ಒಂಟಿಯಾಗೋ ಪರಿಸ್ಥಿತಿ ಇದೆ. ಕಾಂಗ್ರೆಸ್ ನ ಪ್ರಮುಖ ನಾಯಕರುಗಳು ಒಂದೋ ಬಿಜೆಪಿ ಸೇರಿದ್ದಾರೆ ಅಥವಾ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಸ್ಥಳೀಯ ಕೆಲ ದಲಿತ ನಾಯಕರು ಬಿಎಸ್ಪಿ ಅಭ್ಯರ್ಥಿ ಜೊತೆಗಿದ್ದಾರೆ. ಇದರ ಪರಿಣಾಮ ಅನಾಯಾಸವಾಗಿ ಗೆಲ್ಲುವುದು ಬಿಜೆಪಿ. ಅದಕ್ಕೆ ಅಡ್ಡಿಯಾಗಿರೋದು ಎಸ್ಡಿಪಿಐ ಪಕ್ಷ. ಅದಕ್ಕಾಗಿಯೇ ಭಯೋತ್ಪಾಧನೆ, ಲವ್ ಜೆಹಾದ್ ವಿಚಾರಗಳನ್ನು ತೇಲಿಬಿಡಲಾಯ್ತು.

ಭಯೋತ್ಪಾದನೆಯ ಆರೋಪ ಹೊಂದಿರುವ ಎಸ್ಡಿಪಿಐ ಬೆಂಬಲದೊಂದಿಗೆ ಜಿಗ್ನೇಶ್ ಮೇವಾನಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಖುದ್ದು ಅಮಿತ್ ಷಾ ಹೇಳಿಕೆ ನೀಡಿದ್ದರು. ಲವ್ ಜೆಹಾದ್ ಬಗ್ಗೆ ಎನ್ ಐಎಯಿಂದ ತನಿಖೆಗೆ ಒಳಗಾಗಿರೋ ಎಸ್ಡಿಪಿಐ, ಪಿಎಫ್ ಐ ಜಿಗ್ನೇಶ್ ಜೊತೆಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಒಂದು ದಿನಪೂರ್ತಿ ಸುದ್ದಿ ಮಾಡಿದ್ದವು. ಜಿಗ್ನೇಶ್ ಮೇವಾನಿ ಅನಿವಾರ್ಯವಾಗಿ ಎಸ್ಡಿಪಿಐಯನ್ನು ಹೊರಗಿಡುವ ಪರಿಸ್ಥಿತಿ ನಿರ್ಮಾಣ ಮಾಡಲು ಪ್ರಯತ್ನಿಸಿದರು. “ಎಸ್ಡಿಪಿಐ ಒಂದು ರಾಜಕೀಯ ಪಕ್ಷ. ಎಲ್ಲಾ ಪಕ್ಷಗಳ ಸದಸ್ಯರ ಮೇಲೆ ಒಂದಲ್ಲಾ ಒಂದು ಆರೋಪಗಳಿರುತ್ತದೆ. ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತದೆ. ನಾನು ದೇಶದ ಅಧಿಕೃತ ರಾಜಕೀಯ ಪಕ್ಷವೊಂದರ ಜೊತೆ ಪ್ರಚಾರ ಮಾಡುತ್ತಿದ್ದೇನೆ” ಎಂದು ಜಿಗ್ನೇಶ್ ಮೇವಾನಿ ಸ್ಥಿರವಾಗಿ ನಿಂತಿದ್ದಾರೆ. ಇದಾದ ನಂತರ “ಪಾಕ್ ನಿಂದ ಸುಪಾರಿ ಪಡೆದಿರುವ ಕಾಂಗ್ರೆಸ್ ಜೊತೆ ಜಿಗ್ನೇಶ್ ಸೇರಿಕೊಂಡಿದ್ದಾರೆ” ಎಂದು ಅಮಿತ್ ಷಾ ಹೇಳಿಕೊಂಡರು. ದೇಶದ ಬೇರೆ ಭಾಗಗಳಲ್ಲಿ ಹಾವು ಮುಂಗುಸಿಯಂತಿರುವ ಎಸ್ಡಿಪಿಐ ಮತ್ತು ಕಾಂಗ್ರೆಸ್ ವಡ್ಗಾಮ್ ನಲ್ಲಿ ದೋಸ್ತಿಗಳಾಗಿವೆ. ಎರಡೂ ಪಕ್ಷ ನೇರವಾಗಿ ಅಮಿತ್ ಷಾ ಮತ್ತು ನರೇಂದ್ರ ಮೋದಿಯಿಂದ ಟಾರ್ಗೆಟ್ ಗೆ ಒಳಗಾಗಿದೆ. ವಡ್ಗಾಮ್ ನ ಈ ಮೈತ್ರಿ ಕಾಂಗ್ರೆಸ್ ನ ಇತರ ನಾಯಕರಿಗೆ ಅಪಥ್ಯವಾಗಿದ್ದರೂ ರಾಹುಲ್ ಗಾಂಧಿಗೆ ಒಪ್ಪಿಗೆಯಾಗಿದೆಯಂತೆ. ಎಸ್ಡಿಪಿಐ ಕೆಲಸದಿಂದ ಜಿಗ್ನೇಶ್ ಗೆಲುವು ಸಾಧಿಸಿದ್ರೆ ಅದು ಮುಂದಿನ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲೂ ಈ ಹೊಸ ಮೈತ್ರಿ ಪ್ರಯೋಗವನ್ನು ನಿರ್ಲಕ್ಷಿಸುವಂತಿಲ್ಲ.

ಸದ್ಯ ಚುನಾವಣಾ ಕಣದಲ್ಲಿ ನೇರ ಸ್ಪರ್ಧೆ ಇರೋದು ಕಾಂಗ್ರೆಸ್ ಬೆಂಬಲಿತ ಜಿಗ್ನೇಶ್ ಮೇವಾನಿ ಮತ್ತು ಮಾಜಿ ಕಾಂಗ್ರೆಸ್ಸಿಗರೇ ತುಂಬಿರುವ ಬಿಜೆಪಿ ಮತ್ತು ಪಕ್ಷೇತರರ ಮಧ್ಯೆ. ಆದರೆ ಜಿಗ್ನೇಶ್ ಗೆಲುವು ನೇರ ದಾಳಿ ಮಾಡುವುದು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಮತ್ತು ಅಮಿತ್ ಷಾ ವಿರುದ್ದ. ಜಿಗ್ನೇಶ್ ಗೆಲುವನ್ನು ಪಕ್ಕದ ಜಿಲ್ಲೆಯಾಗಿರುವ ಪ್ರಧಾನಿ ಮೋದಿಯ ಹುಟ್ಟೂರು ಮೆಹ್ಸಾನ ಜಿಲ್ಲೆಯೂ ಬಯಸುತ್ತಿದೆ.

ಮೆಹ್ಸಾನ ಜಿಲ್ಲೆಯ ಊಂಜಾ ಎಂಬ ಪುಟ್ಟ ಪಟ್ಟಣವನ್ನು ದಾಟಿಕೊಂಡೇ ನಾವು ಜಿಗ್ನೇಶ್ ಮೇವಾನಿಯ ವಡ್ಗಾಮ್ ವಿಧಾನಸಭಾ ಕ್ಷೇತ್ರಕ್ಕೆ ಹೋಗಬೇಕಾಗುತ್ತದೆ. ಊಂಜಾ ಎನ್ನುವುದು ಮಸಾಲೆ ಪದಾರ್ಥಗಳ ನಗರ ಎಂದೇ ಹೆಸರುವಾಸಿ. ಕಾರಲ್ಲಿ ಹೋಗುವಾಗ ಊಂಜಾ ಎಂಬ ಬೋರ್ಡ್ ಕಂಡಾಕ್ಷಣ, ಕಾರಿನ ಗ್ಲಾಸು ಇಳಿಸುವಂತೆ ಚಾಲಕ ಹೇಳಿದ್ರು. ಕಾರಿನ ಗ್ಲಾಸ್ ಇಳಿಸಿದ ತಕ್ಷಣ ಗಮ್ಮೆನ್ನುವ ಜೀರಿಗೆ ಪರಿಮಳ ರಾಚುತ್ತದೆ. ಊಂಜಾದಲ್ಲಿ ಹೇರಳವಾಗಿ ಜೀರಾ ಬೆಳೆಯುತ್ತಾರೆ. ಹೆದ್ದಾರಿಯ ಅಕ್ಕಪಕ್ಕದಲ್ಲಿ ಜೀರಾ ಬೆಳೆಯ ಗದ್ದೆಗಳೂ ಇವೆ. ಗೋಡಾನ್ ಗಳೂ ಇವೆ. ದೇಶದ ಇತರೆಡೆ ಬೆಳೆಯುವ ಜೀರಾ ಕೂಡಾ ಊಂಜಾದ ಗೋಡಾನ್ ಗೆ ಬಂದು ನಂತರ ದೇಶದಾದ್ಯಂತ ಸರಬರಾಜಾಗುತ್ತದೆ. ರಫ್ತು ಕೂಡಾ ಆಗುತ್ತದೆ. ಈ ವ್ಯವಹಾರ ಮಾಡುವುದು ಮೋದಿ ಹುಟ್ಟೂರು ಮೆಹ್ಸಾನ ಜಿಲ್ಲೆಯವರೇ. ಜಿಎಸ್ ಟಿ ಜಾರಿಯಿಂದಾಗಿ ಜೀರಾ ಬೆಳೆಗಾರರೂ ಆಗಿರುವ ವ್ಯವಹಾರಸ್ಥರು ಮೋದಿ ವಿರುದ್ದ ತಿರುಗಿ ಬಿದ್ದಿದ್ದಾರೆ. ಅವರಲ್ಲಿ ಬಹುತೇಕರು ಜಿಗ್ನೇಶ್ ಮೇವಾನಿ ಗೆಲುವಿಗಾಗಿ ತೆರೆಮರೆಯ ಕೆಲಸ ಮಾಡುತ್ತಿದ್ದಾರೆ.

ವಡ್ಗಾಮ್ ನಿಂದ ವಡ್ನಗರ್ ವರೆಗೆ ರ‌್ಯಾಲಿಯನ್ನು ಈಗಾಗಲೇ ಜಿಗ್ನೇಶ್ ಮೇವಾನಿ ಘೊಷಿಸಿದ್ದಾರೆ. ಈಗ ವಡ್ಗಾಮ್ ನಲ್ಲಿ ನಡೆಯುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ವಿರುದ್ದದ ಸ್ಪರ್ಧೆ. ಅದೇ ಕಾರಣಕ್ಕೆ ಗುಜರಾತ್ ನಲ್ಲಿ ಅಧಿಕಾರದ ಗದ್ದುಗೆ ಯಾರು ಹಿಡೀತಾರೆ ಅನ್ನುವುದಕ್ಕಿಂತಲೂ ಕುತೂಹಲ ಮೂಡಿಸಿರುವುದು ವಡ್ಗಾಮ್ ನ ಚುನಾವಣಾ ಫಲಿತಾಂಶ.

ಲೇಖಕರು : ನವೀನ್ ಸೂರಿಂಜೆ

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here