ಸಾಧನೆಗೆ ಅಡ್ಡಿಯಾಗಲಿಲ್ಲ ದೃಷ್ಟಿದೋಷ! ಕಲಾ ವಿಭಾಗದಲ್ಲಿ 90 ಶೇಕಡಾ ಅಂಕಗಳಿಸಿದ ಬಸಮ್ಮ!!

ಸಾಧಿಸುವ ಹಂಬಲವಿದ್ದರೇ, ಸಾಧನೆಗೆ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಉದಾಹರಣೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇಕಡಾ 90 ರಷ್ಟು ಅಂಕ ಪಡೆದ ಈ ವಿದ್ಯಾರ್ಥಿನಿ. ಹುಟ್ಟಿನಿಂದಲೇ ದೃಷ್ಟಿದೋಷ ಹೊಂದಿರುವ ಬಸಮ್ಮ ಹೀಗೆ ತಮ್ಮ ಸಾಧನೆ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ad

ಬೆಳಗಾವಿ ಜಿಲ್ಲೆಯ ಲಿಂಗರಾಜ ಕಾಲೇಜಿನಲ್ಲಿ ಓದುತ್ತಿದ್ದ ದೃಷ್ಠಿದೋಷಯುಳ್ಳ ವಿದ್ಯಾರ್ಥಿನಿ ಬಸಮ್ಮ ಈ ಬಾರಿ ದ್ವಿತೀಯ ಪಿಯುಸಿಯ ಕಲಾ ವಿಭಾಗ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 90 ರಷ್ಟು ಅಂದರೆ (504)ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ದೃಷ್ಟಿ ಇರುವ ಕೆಲವು ವಿದ್ಯಾರ್ಥಿಗಳೇ ಕಡಿಮೆ ಅಂಕಗಳನ್ನು ಗಳಿಸುವ ಈ ಕಾಲದಲ್ಲಿ ದೃಷ್ಟಿದೋಷ ಹೊಂದಿರುವ ವಿದ್ಯಾರ್ಥಿನಿ ಬಸಮ್ಮರವರ ಸಾಧನೆಯನ್ನು ಹೊಗಳಲೇ ಬೇಕು, ದೃಷ್ಟಿದೋಷಯುಳ್ಳ ವಿದ್ಯಾರ್ಥಿಗಳು ಸಹ ಸಾಮಾನ್ಯ ವಿದ್ಯಾರ್ಥಿಗಳಂತೆ ಅಂಕಗಳನ್ನು ಪಡೆಯಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಪ್ರಥಮ ಭಾಷೆ ಇಂಗ್ಲೀಷ್ ನಲ್ಲಿ 93 , ದ್ವಿತೀಯ ಭಾಷೆ ಹಿಂದಿಯಲ್ಲಿ 95,ಅರ್ಥಶಾಸ್ತ್ರ 92, ಸಮಾಜ ವಿಜ್ಞಾನದಲ್ಲಿ 94 ಹಾಗೂ ರಾಜ್ಯಶಾಸ್ತ್ರದಲ್ಲಿ 85 ಅಂಕಗಳನ್ನು ಗಳಿಸಿ ಕಾಲೇಜಿನ ಬೋಧಕರು, ಸ್ನೇಹಿತರು, ಸಹಪಾಠಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ನಂತರ ಪದವಿ ಶಿಕ್ಷಣವನ್ನು ಲಿಂಗರಾಜ ಕಾಲೇಜಿನಲ್ಲಿಯೇ ಅಭ್ಯಾಸ ಮಾಡುತ್ತೇನೆ ಎಂದರು.

ಬಸಮ್ಮ ಆಂಜನೇಯ ನಗರದ ನಿವಾಸಿಯಾಗಿದ್ದು ಅವರ ತಂದೆ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಹುಟ್ಟಿನಿಂದಲೇ ಬಸಮ್ಮರಿಗೆ ದೃಷ್ಠಿದೋಷವಿದೆ.  ಬ್ರೈಲ್ ಲಿಪಿಯ ಸಹಾಯದಿಂದ ಅಭ್ಯಾಸ ಮಾಡುತ್ತಿದ್ದ ಬಸಮ್ಮ, ಪರೀಕ್ಷೆಯನ್ನು ಬರೆಯಲು  ಬ್ರೈಲ್​​ ಆಧರಿಸಿದ್ದು,  ಸಹಾಯಕರನ್ನು ತೆಗೆದುಕೊಂಡು ಪರೀಕ್ಷೆ ಬರೆದಿದ್ದರು.

ಬಸಮ್ಮ  ಹಿಂದೆ sslc ಪರೀಕ್ಷೆಯಲ್ಲಿ ಶೇ 95.52 ರಷ್ಟು ಅಂಕ ಗಳಿಸಿ ಉತ್ತೀರ್ಣಳಾದ್ದರು. ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿರುವ ಬಸಮ್ಮ 2011 ರಿಂದ 2014ರವರೆಗೂ ಅಬಾಕಸ್ ಕಲಿಯುತ್ತಿದ್ದು, ರಾಜ್ಯಮಟ್ಟದಲ್ಲಿ 1 ಬಾರಿ ಚಿನ್ನದ ಪದಕವನ್ನು ಹಾಗೂ ಎರಡು ಬಾರಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.