ದಲಿತರ ಮನೆಯಲ್ಲಿ ಬಿಎಸ್​ವೈ ಉಪಹಾರ ಸೇವನೆ- ಮೇಲ್ಜಾತಿ ಮನೆಯಲ್ಲಿ ಸಹಭೋಜನ ನಡೆಸಿ ಅಂದ್ರು ಕಾಂಗ್ರೆಸ್​ ಕಾಯಕರ್ತರು!

ಅಂಬೇಡ್ಕರ್​ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೆಲಮಂಗಲದ ದಲಿತರ ಮನೆಯಲ್ಲಿ ಉಪಹಾರ ಸ್ವೀಕರಿಸಿ ದಲಿತ ಮುಖಂಡರ ಜೊತೆ ಸಂವಾದ ನಡೆಸಿದರು. ನೆಲಮಂಗಲಕ್ಕೆ ಬಂದ ಬಿಎಸ್​ವೈ ಹಾಗೂ ಯೋಗೇಶ್ವರ್​ ಅವರನ್ನು ನೆಲಮಂಗಲದ ದಲಿತ ನಾಯಕರು ಸ್ವಾಗತಿಸಿದರು.

ad


 
ದಲಿತ ಮುಖಂಡ ಮಾರುತಿ ಮನೆಗೆ ಬಿಎಸ್​ವೈಯವರನ್ನು ಆರತಿ ಎತ್ತಿ ಸ್ವಾಗತಿಸಲಾಯಿತು. ಮಾರುತಿ ಮನೆಯಲ್ಲಿ ಬಿಎಸ್​ವೈ ಉಪ್ಪಿಟ್ಟು, ಬೋಂಡ್​, ಹಣ್ಣು ಸ್ವೀಕರಿಸಿದರು. ಈ ವೇಳೆ ನೆಲಮಂಗಲದ ಹಲವು ದಲಿತ ಮುಖಂಡರ ಜೊತೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಕಾರ್ಯಕ್ರಮದ ವೇಳೆ ಮಾತನಾಡಿದ ಯಡಿಯೂರಪ್ಪ, ಎರಡುವರ್ಷಗಳ ಹಿಂದೆ ಅಂಬೇಡ್ಕರ್ ಜಯಂತಿ‌ ದಿನದಂದೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಸಂವಿಧಾನ ಶಿಲ್ಪಿಗೆ ಭಾರತರತ್ನ ನೀಡದೇ ಕಾಂಗ್ರೆಸ್ ಸರ್ಕಾರ ಅವರಿಗೆ ಅವಮಾನಿಸಿದೆ.

ಸಾವನ್ನಪ್ಪಿದ್ದಾಗ ದೆಹಲಿಯಲ್ಲಿ ಶವಸಂಸ್ಕಾರಕ್ಕೆ ಜಾಗ ನೀಡದೆ ದಾದರ್ ನ ಕಡಲತೀರದಲ್ಲಿ ಶವಸಂಸ್ಕಾರ ಮಾಡುವಂತ ದುಸ್ಥಿತಿ ಎದುರಾಯಿತು.ಅಂಬೇಡ್ಕರ್ ಭಾರತಕ್ಕೆ ಕೊಟ್ಟ ಕೊಡುಗೆ, ಅವರು ನೀಡಿರೋ ಸಂವಿಧಾನಕ್ಕೆ ತಕ್ಕ ಗೌರವವನ್ನ ನರೇಂದ್ರ ಮೋದಿ ಸರ್ಕಾರ ನೀಡುತ್ತಿದೆ.ಅವರು ವಾಸವಿದ್ದ 5 ಮನೆಗಳನ್ನ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸ್ಮಾರಕ ಮಾಡಲಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಬಿಎಸ್​ವೈ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೇ ದಲಿತರ ಮನೆಯಲ್ಲಿ ಭೋಜನ ಮಾಡುವ ಬದಲು ಮೇಲ್ಜಾತಿಯವರ ಮನೆಯಲ್ಲಿ ಸಹಭೋಜನ ಏರ್ಪಡಿಸಿ ಎಂದು ಆಗ್ರಹಿಸಿದರು. ಇನ್ನು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.