ದೆಹಲಿ ತಲುಪಿದ ಕ್ಯಾಬಿನೆಟ್ ಕಸರತ್ತು !! ಎಚ್ ಡಿಕೆ ಜೊತೆ ರಾಹುಲ್ ಚರ್ಚೆ !!//Cabinet effort shifted to Delhi

ಮೈತ್ರಿ ಸರಕಾರದ ಸಚಿವ ಸಂಪುಟ ರಚನೆ ಕುರಿತು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸಮ್ಮುಖದಲ್ಲಿ ಇಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಭೆ ನಡೆಸುವರು.‌ ನಿನ್ನೆ ರಾತ್ರಿ ನಡೆದ ರಾಜ್ಯ ಕಾಂಗ್ರೆಸ್‌ ನಾಯಕರ ಸಭೆ ಅಪೂರ್ಣಗೊಂಡಿದ್ದು, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನೂ ಕರೆಸಿಕೊಂಡು ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ.

ad

ಸಚಿವ ಸಂಪುಟದಲ್ಲಿ ಜಾತಿ, ಸಮುದಾಯ ಹಾಗೂ ಪ್ರದೇಶವಾರು ಸಮತೋಲನ ಕಾಯ್ದುಕೊಳ್ಳುವ ಹಾಗೂ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಅನಗತ್ಯ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು ಎಂಬ ಕಾರಣಕ್ಕೆ ಉಭಯ ಪಕ್ಷಗಳ ನಾಯಕರೂ ಒಟ್ಟಿಗೇ ಕುಳಿತು ತೀರ್ಮಾನ ಕೈಗೊಳ್ಳುಲು ಕೈ ಹೈಕಮಾಂಡ್‌ ನಿರ್ಧರಿಸಿದೆ.

ಸಂಪುಟದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ, ಯಾವ ಪಕ್ಷಕ್ಕೆ ಯಾವ ಖಾತೆ ಎಂಬುದು ಈಗಾಗಲೇ ನಿರ್ಧಾರವಾಗಿದೆ. ಕಾಂಗ್ರೆಸ್ ಗೆ 22 ಮತ್ತು ಜೆಡಿಎಸ್ ಗೆ 12 ಖಾತೆ ನೀಡುವುದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಆದರೆ ಎರಡೂ ಪಕ್ಷಗಳಿಂದ ಒಂದೇ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕರೆ ಜಿಲ್ಲಾ ಉಸ್ತುವಾರಿ ಯಾರಿಗೆ ಎಂಬ ಪ್ರಶ್ನೆಗಳು ಉದ್ಬವಿಸಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಇಂದು ಸಭೆ ನಡೆಸಿ ಇಂದೇ ಅಮೆರಿಕ ಪ್ರವಾಸಕ್ಕೆ ತೆರಳುತ್ತಿದ್ದು, ಅವರ ಅನುಪಸ್ಥಿತಿಯಲ್ಲಿ ಉಳಿದ ನಾಯಕರೊಟ್ಟಿಗೆ ಕುಮಾರಸ್ವಾಮಿ ಅವರು ಚರ್ಚೆ ನಡೆಸುವ ಸಾಧ್ಯತೆಗಳಿವೆ. ಮತ್ತೆ ಬಿಕ್ಕಟ್ಟು ಉದ್ಬವಿಸಿದರೆ ಸೋನಿಯಾ ಗಾಂಧಿ ಅಥವಾ ಅಹ್ಮದ್ ಪಟೇಲ್ ಮೊರೆಹೋಗುವ ಸಾಧ್ಯತೆ ಇದೆ.

ಇಂದು ಅಧಿಕಾರ ಹಂಚಿಕೆ ವಿಚಾರದಲ್ಲಿ ಒಮ್ಮತದ ಸೂತ್ರ ಏರ್ಪಟ್ಟರೆ ಬುಧವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಒಂದು ವೇಳೆ, ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ಬಿಕ್ಕಟ್ಟು ಮುಂದುವರಿದರೆ ಪೂರ್ಣ ಪ್ರಮಾಣದ ಸಂಪುಟ ರಚನೆ ಪ್ರಕ್ರಿಯೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

 

ಮಹತ್ವದ ಹಾಗೂ ಪ್ರಮುಖ ಖಾತೆಗಳು ಎಂದು ಗುರುತಿಸಲಾದ ಜಲಸಂಪನ್ಮೂಲ, ಹಣಕಾಸು, ಇಂಧನ, ಸಾರಿಗೆ, ಗೃಹ ಹಾಗೂ ಲೋಕೋಪಯೋಗಿ ಈ ಆರು ಖಾತೆಗಳ ವಿಚಾರದಲ್ಲಿ ಮಿತ್ರಪಕ್ಷಗಳ ನಡುವೆ ಹಗ್ಗಜಗ್ಗಾಟ ಬಹುತೇಕ ಮುಗಿದಿದೆ. ಆರು ಖಾತೆಗಳನ್ನು ಎರಡೂ ಪಕ್ಷಗಳು ತಲಾ ಮೂರರಂತೆ ಹಂಚಿಕೊಳ್ಳಲು ಬಯಸಿದ್ದು, ನಿರೀಕ್ಷೆಯಂತೆ ಸಿಎಂ ತಮ್ಮ ಬಳಿಯೇ ಹಣಕಾಸು ಖಾತೆ ಉಳಿಸಿಕೊಂಡರೆ, ಗೃಹ ಖಾತೆಯನ್ನು ಡಿಸಿಎಂ ಪಡೆದುಕೊಳ್ಳಲಿದ್ದಾರೆ. ಗೃಹ ಖಾತೆಯನ್ನು ಡಿಕೆ ಶಿವಕುಮಾರ್ ಗೆ ನೀಡಬೇಕು ಎಂದು ಕಾಂಗ್ರೆಸ್ ನೊಳಗೆ ಒತ್ತಾಯಗಳಿದ್ದರೂ ಇಂಧನ ಖಾತೆ ಡಿ.ಕೆ.ಶಿವಕುಮಾರ್‌ ಉಳಿಸಿಕೊಳ್ಳಲು ಬಯಸಿದ್ದು, ಲೋಕೋಪಯೋಗಿ ಖಾತೆ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಅವರಿಗೆ ಸಿಗಲಿದೆ. ಆದರೆ, ಜಲಸಂಪನ್ಮೂಲ ಹಾಗೂ ಕೃಷಿ ಖಾತೆಗಳ ವಿಚಾರದಲ್ಲಿ ಇನ್ನೂ ಸ್ಪಷ್ಟ ತೀರ್ಮಾನವಾಗಿಲ್ಲ ಎನ್ನಲಾಗಿದೆ.

ಮತ್ತೊಂದೆಡೆ ವಿಧಾನ ಪರಿಷತ್‌ ದ್ವೈವಾರ್ಷಿಕ ಚುನಾವಣೆಯಲ್ಲಿ ಪಕ್ಷದಿಂದ ಯಾರಿಗೆ ಅವಕಾಶ ಕಲ್ಪಿಸಬೇಕು ಎಂಬ ವಿಚಾರಗಳ ಬಗ್ಗೆಯೂ ರಾಜ್ಯ ನಾಯಕರು ಹೈಕಮಾಂಡ್‌ ಜತೆ ಚರ್ಚಿಸಲಿದ್ದಾರೆ.