ಸಂಪುಟ ಇನ್ ಸಂಕಟ !! ಪತನವಾಗುತ್ತಾ ಸರಕಾರ ? ಆಡಳಿತಯಂತ್ರ ನಿಷ್ಕ್ರೀಯ !

ಜೆಡಿಎಸ್​ ನೇತೃತ್ವದ ಸರ್ಕಾರದಲ್ಲಿ ಗೊಂದಲವೋ ಗೊಂದಲ. ಪ್ರಮಾಣವಚನ ಕಾರ್ಯಕ್ರಮ ನಡೆದು ವಾರವಾದರೂ, ವಿಶ್ವಾಸಮತ ಸಾಭೀತಾಗಿ ಐದು ದಿನವಾದರೂ ಇನ್ನೂ ಸಂಪುಟ ರಚನೆ ಮಾಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಸಾಧ್ಯವಾಗಿಲ್ಲ.

ಹೌದು. ಕಾಂಗ್ರೆಸ್​-ಜೆಡಿಎಸ್ ಮೈತ್ರಿ​ ನಡುವೆ ಭಾರೀ ಭಿನ್ನಮತ ಸೃಷ್ಟಿಯಾಗಿರೋ ಹಿನ್ನಲೆಯಲ್ಲಿ ಸಂಪುಟ ಸಂಕಷ್ಟಕ್ಕೆ ಸಿಲುಕಿದೆ. ಖಾತೆ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡದೇ ಇರುವ ಹಿನ್ನಲೆಯಲ್ಲಿ ಇನ್ನೂ ಒಂದು ವಾರ ಸಚಿವ ಸಂಪುಟ ರಚನೆ ಮುಂದೂಡುವ ಸಾಧ್ಯತೆ ಇದೆ. ದೋಸ್ತಿ ಸರ್ಕಾರದ ಸಂಪುಟ ರಚನೆ ಸದ್ಯಕ್ಕೆ ಆಗೋ ಲಕ್ಷಣಗಳೇ ಕಾಣ್ತಿಲ್ಲ. ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿರುವ ಎರಡೂ ಪಕ್ಷಗಳು ಅದಕ್ಕಾಗಿ ಹಗ್ಗಜಗ್ಗಾಟ ನಡೆಸುತ್ತಿದೆ. ಹಣಕಾಸು ಸೇರಿ ಪವರ್​​ಫುಲ್​​ ಖಾತೆಗಳಿಗಾಗಿ ಕಾಂಗ್ರೆಸ್​-ಜೆಡಿಎಸ್​ ಪೈಪೋಟಿ ನಡೆಯುತ್ತಿದೆ. ಪಿಡಬ್ಲ್ಯುಡಿ, ನೀರಾವರಿ, ಹಣಕಾಸು ಖಾತೆಗಳನ್ನು ತನ್ನ ಜೊತೆಯೇ ಇರಿಸಿಕೊಳ್ಳಬೇಕು ಎಂಬ ಜೆಡಿಎಸ್ ವಾದವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ದವಿಲ್ಲ.

ಮತ್ತೊಂದೆಡೆ ಕಾಂಗ್ರೆಸ್​ ಪಕ್ಷದಲ್ಲೂ ಸಚಿವ ಸ್ಥಾನಕ್ಕಾಗಿ ಲಾಭಿ ತೀವ್ರಗೊಂಡಿದೆ. ಡಿಸಿಎಂ ಅಥವಾ ಪಕ್ಷದ ಅಧ್ಯಕ್ಷ ಹುದ್ದೆ ಜತೆಗೆ ಇಂಧನ ಖಾತೆಗೆ ಡಿ ಕೆ ಶಿವಕುಮಾರ್ ಒತ್ತಾಯ ಮಾಡುತ್ತಿದ್ದಾರೆ. ಅದರ ಜೊತೆ ತನ್ನ ಮೂವರು ಬೆಂಬಲಿಗ ಶಾಸಕರಿಗೂ ಸಚಿವ ಸ್ಥಾನ ನೀಡಲು ಹಠ ಹಿಡಿದಿದ್ದಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕುಮಾರಸ್ವಾಮಿಗೆ ಕಾಂಗ್ರೆಸ್​ ಮುಖಂಡರಿಂದ ಅಡ್ಡಿಯಾಗಿರೋದು ಕೂಡಾ ಸರಕಾರ ಸ್ಥಗಿತಗೊಳ್ಳಲು ಮುಖ್ಯಕಾರಣವಾಗಿದೆ. ಆಯಕಟ್ಟಿನ ಜಾಗದಲ್ಲಿರೋ ಭ್ರಷ್ಟ ಅಧಿಕಾರಿಗಳ ಎತ್ತಂಗಡಿಗೆ ಎಚ್ ಡಿ ಕುಮಾರಸ್ವಾಮಿ ಮುಂದಾಗಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಅದನ್ನು ಅದನ್ನು ಒಪ್ಪುತ್ತಿಲ್ಲ. ಓರ್ವ ಇನ್ಸ್​ಪೆಕ್ಟರ್​​ ವರ್ಗಾವಣೆ ಮಾಡಲೂ ಆಗದ ಸ್ಥಿತಿಗೆ ಎಚ್ ಡಿ ಕುಮಾರಸ್ವಾಮಿ ತಲುಪಿದ್ದು ಇದೇ ಕಾರಣದಿಂದ ನಾನು ಕಾಂಗ್ರೆಸ್​ ಮುಲಾಜಿನಲ್ಲಿದ್ದೇನೆ ಎಂದು ನಿನ್ನೆ ಕುಮಾರಸ್ವಾಮಿ ಹೇಳಿದ್ದರು. ಮತ್ತೊಂದೆಡೆ ಈಗ ಸಂಪುಟ ರಚನೆ ಮಾಡಿದರೆ ಅವಕಾಶ ಸಿಗದ ಶಾಸಕರು ಜೂನ್ 11 ರ ಪರಿಷತ್ ಚುನಾವಣೆಗೆ ಮತ ಹಾಕಲಾರರು ಎಂಬ ಭಯ ಆವರಿಸಿದೆ. ಈ ಎಲ್ಲಾ ಕಾರಣಗಳಿಂದ ಸಚಿವ ಸಂಪುಟ ರಚನೆ ಇನ್ನೂ ಒಂದು ವಾರ ಹೋಗಬಹುದು. ಅಲ್ಲಿಯವರೆಗೆ ಆಡಳಿತದಲ್ಲಿ ಆಡಳಿತದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆಯುತ್ತದೆ.