ನೀರಿಗಾಗಿ ನಡೆಯಿತು ಮಾರಾಮಾರಿ!!

ಅದು ಐತಿಹಾಸಿಕ ಕೆರೆ. ಆ ಕೆರೆಯಲ್ಲಿರೋದೆ ಐದು ಅಡಿ ನೀರು. ಅದರಲ್ಲಿ ಎರಡು ಅಡಿ ಡೆಡ್ ಸ್ಟೋರೆಜ್ ವಾಟರ್. ಆದ್ರೆ, ಉಳಿದ ಮೂರು ಅಡಿ ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿದೆ. ತಹಶೀಲ್ದಾರ್, ಎಸಿ, ನೀರಾವರಿ ಇಲಾಖೆಯ ಎಇಇ, ಸಬ್ ಇನ್ಸ್‍ಪೆಕ್ಟರ್ ನಡೆಸಿದ ಶಾಂತಿಸಭೆಯ ಮಾತನ್ನ ಕೇಳದ ಎರಡು ಗ್ರಾಮಗಳ ಜನರು ಕೈಯಲ್ಲಿ ದೊಣ್ಣೆ ಹಿಡಿದು ಕಲ್ಲು ತೂರಾಟ ನಡೆಸಿ ನಾವಾ-ನೀವಾ ಅಂತಾ ತೊಡೆ ತಟ್ಟಿ ನಿಂತ್ರು.

ಯಾವಾಗ ಅಧಿಕಾರಿಗಳ ಎದುರೇ ಪರಿಸ್ಥಿತಿ ಕೈಮೀರುವಂತೆ ಕಾಣ್ತೋ ಪೊಲೀಸರು ಕೈಗೆ ಸಿಕ್ಕವರಿಗೆಲ್ಲಾ ಲಾಠಿ ರುಚಿ ತೋರಿಸಿದ್ದಾರೆ. ಚಿಕ್ಕಮಗಳೂರಿನ ಸಖರಾಯಪಟ್ಟಣವೀಗ ಬೂದಿ ಮುಚ್ಚಿದ ಕೆಂಡದಂತಾಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ.ಇದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ. 2036 ಎಕರೆ ವಿಸ್ತಿರ್ಣವಿರೋ ಈ ಕೆರೆಯಲ್ಲೀಗ ಇರೋದೆ ಐದು ಅಡಿ ನೀರು. ಅದರಲ್ಲಿ ಎರಡು ಅಡಿ ಡೆಡ್ ಸ್ಟೋರೇಜ್. ಆದ್ರೆ, ಆ ಮೂರು ಅಡಿ ನೀರನ್ನ ಕಡೂರು ತಾಲೂಕಿನ ಜಿಗಣೆಹಳ್ಳಿ ಗ್ರಾಮ ಪಂಚಾಯಿತಿಯ ಬ್ರಹ್ಮಸಮುದ್ರ ಕೆರೆಗೆ ಹರಿಸುವಂತೆ ಜಿಗಣೆಹಳ್ಳಿಯ 10ಕ್ಕೂ ಹೆಚ್ಚು ಹಳ್ಳಿಯ ಜನ ಡಿಸಿಗೆ ಮನವಿ ಸಲ್ಲಿಸಿದ್ರು. ಕೂಡಲೇ ಸಖರಾಯಪಟ್ಟಣದ ಜನ ರಾಷ್ಟ್ರೀಯ ಹೆದ್ದಾರಿ 173ನ್ನ ತಡೆದು ಈ ನೀರು ಕುಡಿಯಲು ಬೇಕೆಂದು ನಿನ್ನೆ ಸಂಜೆಯಿಂದಲೂ ಪ್ರತಿಭಟನೆ ನಡೆಸಿದ್ರು. ಇಂದು ತಹಶೀಲ್ದಾರ್, ಎಸಿ, ನೀರಾವರಿ ಇಲಾಖೆಯ ಎಇಇ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿದ್ರು. ಆದ್ರೆ, ಅಧಿಕಾರಿಗಳ ಮಾತನ್ನ ಕೇಳದ ಎರಡೂ ಗ್ರಾಮದ ಜನ ಕಲ್ಲು ತೂರಾಟ ನಡೆಸಿ, ದೊಣ್ಣೆಗಳಿಂದ ಹಲ್ಲೆಗೆ ಮುಂದಾದಾಗ ತಹಶೀಲ್ದಾರ್ 144 ಸೆಕ್ಷನ್ ಜಾರಿಗೊಳಿಸ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇದೀಗ ಪರಿಸ್ಥಿತಿ ಶಾಂತಗೊಂಡಿದ್ದು, ನಾಳೆ ಮಧ್ಯಾಹ್ನ 3 ಗಂಟೆಗೆ ಮತ್ತೊಮ್ಮೆ ಸಭೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಸಖರಾಯಪಟ್ಟಣದ ಜನ ಈ ಮೂರು ಅಡಿ ನೀರು ಕುಡಿಯಲು ಬೇಕು, ಈ ನೀರನ್ನ ಬ್ರಹ್ಮಸಮುದ್ರ ಕೆರೆಗೆ ಹರಿಸಬಾರದೆಂದು ನಿನ್ನೆ ಸಂಜೆಯೇ ಪ್ರತಿಭಟನೆ ನಡೆಸಿದ್ರು. ನಿನ್ನೆ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ನೀರನ್ನ ನಿಲ್ಲಿಸುವಂತೆ ಆದೇಶ ನೀಡಿದ್ರು. ಆದ್ರೆ, ಅಧಿಕಾರಿಗಳು ರಾತ್ರೋರಾತ್ರಿ ನೀರು ಬಿಟ್ರು ಎಂದು ಇಂದು ಸಖರಾಯಪಟ್ಟಣ ಜನ ಮತ್ತೆ ಪ್ರತಿಭಟನೆಗೆ ಮುಂದಾಗಿದ್ರು. ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಕುಡಿಯೋಕೆ ನೀರಿಲ್ಲ. ಅಂತದ್ರಲ್ಲಿ ಜಿಗಣೆಹಳ್ಳಿಯ ಜನ ಹೊಲ-ಗದ್ದೆ-ತೋಟಗಳಿಗೆ ನೀರು ಕೇಳ್ತಿದ್ದಾರೆ, ಈ ನೀರು ಕುಡಿಯೋಕೆ ಬೇಕೆಂದು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿ, ಸಖರಾಯಪಟ್ಟಣ ಠಾಣೆಗೆ ಮುತ್ತಿಗೆ ಹಾಕೋಕೆ ಯತ್ನಿಸಿದ್ರು. ಈ ವೇಳೆ, ಅಧಿಕಾರಿಗಳ ಮಾತು ಕೇಳದೆ ಮಾರಾಮಾರಿಗೆ ನಿಂತ ಎರಡೂ ಗ್ರಾಮದ ಜನರನ್ನ ಚದುರಿಸಲು ತಹಶೀಲ್ದಾರ್ ಭಾಗ್ಯ 144 ಸೆಕ್ಷನ್ ಜಾರಿಗೊಳಿಸಿದ್ರು. ಕೂಡಲೇ ಪೊಲೀಸರು ಲಾಠಿ ಚಾರ್ಜ್ ನಡೆಸಿ ಮಾರಾಮಾರಿಗೆ ನಿಂತ ಗುಂಪುಗಳನ್ನ ಚದುರಿಸಿದ್ದಾರೆ. ಒಟ್ಟಾರೆ, ಇಲ್ಲಿ ಜಿಲ್ಲಾಡಳಿತ ಒಂದು ಆದೇಶ ಮಾಡುತ್ತೆ. ಅಧಿಕಾರಿಗಳು ಮತ್ತೊಂದು ರೀತಿ ನಡೆದುಕೊಳ್ತಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳು ಸಂಜೆ ನಿಲ್ಲಿಸಿದ ನೀರನ್ನ ರಾತ್ರೋರಾತ್ರಿ ಬಿಟ್ಟಿದ್ರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಿಂದ ಜನಸಾಮಾನ್ಯರು ಒದೆ ತಿನ್ನುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಎರಡು ಗ್ರಾಮದ ಮುಖಂಡರನ್ನ ಸೇರಿಸಿ ಒಂದು ಕಠಿಣ ನಿಲುವಿಗೆ ಬರದಿದ್ರೆ ಈ ನೀರಿನ ಜಗಳ ಇನ್ನೆಲ್ಲೇಗಿ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಅದಕ್ಕೂ ಮಿಗಿಲಾಗಿ ಕಡೂರಿನ ಸದ್ಯದ ಪರಿಸ್ಥಿತಿ ತೋಟಕ್ಕಿಂದ ಕುಡಿಯೋ ನೀರೇ ಮುಖ್ಯವಾಗಿದೆ.