ಜಮೀರ್ ಅಹಮ್ಮದ್ ಖಾನ್, ಅಖಂಡ ವಿರುದ್ದ ಕಾಂಗ್ರೆಸ್ಸಿಗರ ದೂರು !! ಕೈ ಸೇರ್ಪಡೆಗೂ ಮುನ್ನ ಎದುರಾದ ಸಂಕಷ್ಟ !!

ಜಮೀರ್ ಅಹಮ್ಮದ್ ಖಾನ್ ಮತ್ತು ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ಸೇರುವ ಮೊದಲೇ ಅವರ ವಿರುದ್ದ ಪುಲಕೇಶಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಕೆಪಿಸಿಸಿಗೆ ದೂರು ನೀಡಿದೆ.

ಇಂದು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ರನ್ನು ಭೇಟಿ ಮಾಡಿದ ಪುಲಕೇಶಿನಗರ ಬ್ಲಾಕ್ ಕಾಂಗ್ರೆಸ್ ನಿಯೋಗ ಜಮೀರ್ ಮತ್ತು ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ಕಾರ್ಯಕಲಾಪಗಳಲ್ಲಿ ಕೈ ಹಾಕದಂತೆ ನಿಗ್ರಹಿಸಬೇಕು ಎಂದು ದೂರು ನೀಡಿದೆ. ನಿಯೋಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯಾಸೀರ್ ಅಹಮ್ಮದ್, ಮಾಜಿ ಶಾಸಕ ಪ್ರಸನ್ನ ಕುಮಾರ್, ಮೇಯರ್ ಸಂಪತ್ ರಾಜ್ ಮತ್ತು ಕಾರ್ಪೊರೇಟರ್ ಗಳು ಉಪಸ್ಥಿತರಿದ್ದರು. ಇತ್ತಿಚೆಗೆ ಪುಲಕೇಶಿ ನಗರಕ್ಕೆ ಬಂದಿದ್ದ ಜಮೀರ್ ಅಹಮ್ಮದ್ ಖಾನ್, ಮುಂದಿನ ಚುನಾವಣೆಯಲ್ಲಿ ಪುಲಕೇಶಿನಗರದಿಂದ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿಯಲಿದ್ದಾರೆ. ರಾಹುಲ್ ಗಾಂಧಿ ಟಿಕೆಟ್ ಕನ್ಪರ್ಮ್ ಮಾಡಿದ್ದಾರೆ ಎಂದಿದ್ದಾರೆ.

ಇದು ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಕೆಪಿಸಿಸಿಗೆ ಶಿಫಾರಸ್ಸು ಮಾಡಬೇಕು. ಆ ಬಳಿಕ ಕೆಪಿಸಿಸಿ ನಿರ್ಧಾರ ಕೈಗೊಳ್ಳುವುದು ಕಾಂಗ್ರೆಸ್ ನ ನಿಯಮ. ಆದರೆ ಅಖಂಡ ಶ್ರೀನಿವಾಸ ಮೂರ್ತಿಯನ್ನು ಬ್ಲಾಕ್ ಕಾಂಗ್ರೆಸ್ ಗೆ ತಿಳಿಯದಂತೆ ಅಭ್ಯರ್ಥಿಯನ್ನಾಗಿಸಿದ್ದು ಯಾರು ಎಂಬುದು ಬ್ಲಾಕ್ ಕಾಂಗ್ರೆಸ್ ಪ್ರಶ್ನೆ. ಇಷ್ಟಕ್ಕೆ ನಿಲ್ಲದ ಜಮೀರ್ ಮುಂದುವರೆದು “ಹಳೇ ಕಾಂಗ್ರೆಸ್ಸಿಗರು ನಮ್ಮ ಜೊತೆ ಬಂದರೆ ಉಳಿಗಾಲ. ಇಲ್ಲದೇ ಇದ್ದರೆ ಅವರಿಗೆ ಯಾವ ಅಧಿಕಾರವೂ ಸಿಗಲ್ಲ” ಎಂದಿರುವುದು ಕಾರ್ಪೋರೇಟರ್ ಗಳ ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.