ಆಸ್ಪತ್ರೆಯಲ್ಲಿ ಸತ್ತವನು ಅಂತ್ಯಸಂಸ್ಕಾರದ ವೇಳೆ ಉಸಿರಾಡಿದ

ಸತ್ತಿದ್ದಾನೆಂದು ಭಾವಿಸಿ ಆಸ್ಪತ್ರೆಯಿಂದ ವ್ಯಕ್ತಿಯನ್ನು ಮನೆಗೆ ಕರೆತಂದು ಸಂಬಂಧಿಕರೆಲ್ಲರೂ ಅಳುತ್ತ ಕುಳಿತಿದ್ದ ವೇಳೆ ಸತ್ತಿದ್ದಾನೆಂದು ಭಾವಿಸಿದ್ದ ವ್ಯಕ್ತಿ ಕಣ್ಣುಬಿಟ್ಟ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ನಡೆದಿದೆ. ಹೌದು ಸ್ಟೇಷನ್ ಗಾಣಗಾಪುರ ಗ್ರಾಮದ ನಿವಾಸಿಯಾಗಿರುವ 34 ವರ್ಷದ ಈಶ್ವರ್ ವಾವಡೆ ಸತ್ತು ಬದುಕಿದ ವ್ಯಕ್ತಿ.

ಮಹಾರಾಷ್ಟ್ರದ ಥಾಣೆಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರ್ ವಾವಡೆ ಕಳೆದ ವಾರ ಸ್ವಗ್ರಾಮ ಸ್ಟೇಷನ್ ಗಾಣಗಾಪುರಕ್ಕೆ ಆಗಮಿಸಿದ್ದರು. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದ್ರೆ ಅಲ್ಲಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಈಶ್ವರ್ ಮೃತಪಟ್ಟಿದ್ದಾನೆಂದು ಹೇಳಿದ್ದರಂತೆ. ಬಳಿಕ ಈಶ್ವರ್ ಸಂಬಂಧಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈಶ್ವರ್ ನನ್ನು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಮನೆಗೆ ಸಂಬಂಧಿಗಳು ಬಂದು ಅಳುತ್ತಿದ್ದ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈಶ್ವರ್ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ‌. ತಕ್ಷಣ ಈಶ್ವರನನ್ನು ಸಂಬಂಧಿಕರೆಲ್ಲರೂ ಸೇರಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಈಶ್ವರ್ ಗೆ ಕಲಬುರಗಿ‌ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

Avail Great Discounts on Amazon Today click here